ಆಕಾಂಕ್ಷಿಗಳ ಹೆಚ್ಚಳ, ಕೈ ನಾಯಕರಲ್ಲಿ ತಳಮಳ

ಬೆಂಗಳೂರು: ಸಂಪುಟ ವಿಸ್ತರಣೆಗೆ ಸಂಭಾವ್ಯ ದಿನಾಂಕ ನಿಶ್ಚಯವಾಗಿರುವ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ನಿಗಮ-ಮಂಡಳಿ ಯಾವ ಶಾಸಕರಿಗೆ ಎಂಬ ಚರ್ಚೆ ಶುರುವಾಗಿದೆ. ಇರುವ 6 ಸಚಿವ ಸ್ಥಾನಕ್ಕೆ 22 ಆಕಾಂಕ್ಷಿಗಳಿದ್ದು, 10ಕ್ಕೂ ಹೆಚ್ಚು ಪ್ರಬಲ ಪೈಪೋಟಿ ಗ್ರಹಿಸಿರುವ ನಾಯಕರು ಯಾರಿಗೆಲ್ಲ ನಿಗಮ ಅಧ್ಯಕ್ಷ ಸೂಕ್ತವೆಂಬ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಭೀಮಾ ನಾಯಕ್, ರಾಮಪ್ಪ, ರಘುಮೂರ್ತಿ, ತುಕಾರಾಂ, ರಹೀಂ ಖಾನ್, ಸಂಗಮೇಶ್, ಶಿವರಾಮ ಹೆಬ್ಬಾರ್​ರನ್ನು ನಿಗಮ-ಮಂಡಳಿಗೆ ಸೀಮಿತಗೊಳಿಸುವ ಸಾಧ್ಯತೆ ಇದೆ. ದಿನೇಶ್ ಗುಂಡೂರಾವ್, ಜಿ.ಪರಮೇಶ್ವರ್, ಸಿದ್ದರಾಮಯ್ಯ ಈ ಶಾಸಕರನ್ನು ಕರೆದು ರ್ಚಚಿಸಿ ಒಪ್ಪಿಸುವ ಅವಕಾಶ ಹೆಚ್ಚಿದೆ. ಅಕ್ಟೋಬರ್ 2ನೇ ವಾರ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲಿದ್ದು, ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಅವಕಾಶ ಹಾಗೂ ನಿಗಮ-ಮಂಡಳಿ ಯಾರಿಗೆಂದು ಕೇಂದ್ರ ನಾಯಕರಿಗೆ ಶಿಫಾರಸು ಮಾಡಲಿದ್ದಾರೆ. 85 ನಿಗಮ-ಮಂಡಳಿ ಪೈಕಿ ಮೊದಲ ಹಂತದಲ್ಲಿ 20 ಕಾಂಗ್ರೆಸ್​ಗೆ ಲಭಿಸುತ್ತಿದ್ದು, ಇದರಲ್ಲಿ 15 ಭರ್ತಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸಂಜೆ ನಂತರ ಬನ್ನಿ…

ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಬುಧವಾರ ಸಚಿವಾಕಾಂಕ್ಷಿಗಳಾದ ಎಂ.ಟಿ.ಬಿ.ನಾಗರಾಜ್, ಶಿವರಾಮ ಹೆಬ್ಬಾರ, ಬಿ.ಕೆ.ಸಂಗಮೇಶ್, ಶಿವಳ್ಳಿ, ಬಿ.ಸಿ.ಪಾಟೀಲ್ ಮತ್ತಿತರರು ಭೇಟಿ ನೀಡಿದ್ದರು. ಕಣ್ಣು ಬೇನೆ ಕಾರಣ ನೀಡಿ ಸಿದ್ದರಾಮಯ್ಯ ಮಾತುಕತೆಗೆ ಒಪ್ಪಿಲ್ಲ ಎನ್ನಲಾಗಿದೆ. ಸಂಜೆ ನಂತರ ಬನ್ನಿ, ಆಮೇಲೆ ನೋಡೋಣ ಎಂದು ಹೇಳಿ ಸಾಗಹಾಕಿದ್ದಾರೆ. ಈ ವೇಳೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಬೆಂಬಲಿಗರು ಸಿದ್ದರಾಮಯ್ಯ ಮನೆ ಮುಂದೆ ಘೋಷಣೆ ಹಾಕಿ, ಸಂಗಮೇಶ್​ಗೆ ಸಂಪುಟದಲ್ಲಿ ಸ್ಥಾನ ಕೊಡಿಸುವಂತೆ ಒತ್ತಾಯ ಮಾಡಿದರು.

ಕಾಲಾವಧಿ ಕಡಿಮೆ!

ತಕ್ಷಣದಲ್ಲಿ ನಡೆಯುವ ಸಂಪುಟದಲ್ಲಿ ಸೇರುವವರಿಗೆ ಎರಡು ವರ್ಷ ಮಾತ್ರ ಉಳಿಯುವ ಅವಕಾಶ ನೀಡುವ ಅಸ್ತ್ರ ಪ್ರಯೋಗಿಸಿ, ಆಕಾಂಕ್ಷಿಗಳ ಒತ್ತಡ ಕಡಿಮೆ ಮಾಡಿಕೊಳ್ಳಲು ಕೈ ನಾಯಕರು ಮುಂದಾಗಿ ದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್​ನಲ್ಲಿ ದಿಗಿಲು

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಆನಂದ್ ಸಿಂಗ್, ನಾಗೇಂದ್ರಗೆ ಬಂಧನ ರಹಿತ ವಾರಂಟ್ ಜಾರಿ ಸುದ್ದಿ ಕಾಂಗ್ರೆಸ್​ಗೆ ಕಸಿವಿಸಿ ತಂದಿದೆ. ಲೋಕಸಭಾ ಚುನಾವಣೆಗೂ ಮುನ್ನ ಬಂಧನವಾದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಸರ್ಕಾರದಲ್ಲಿ ವ್ಯತ್ಯಾಸವಾದರೂ ಸಮಸ್ಯೆಯೇ ಎಂದು ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.