More

    ಹೆಚ್ಚೆಚ್ಚು ಸೇವೆಯೇ ನಾಯಕನ ಹೆಚ್ಚುಗಾರಿಕೆ!

    ಹೆಚ್ಚೆಚ್ಚು ಸೇವೆಯೇ ನಾಯಕನ ಹೆಚ್ಚುಗಾರಿಕೆ!ಸೈನಿಕರ ಸಣ್ಣ ಗುಂಪೊಂದು ಸಾಗುತ್ತಿತ್ತು. ಅವರೆಲ್ಲ ಬಹಳ ಬಳಲಿದ್ದರು ಮತ್ತು ನಿತ್ರಾಣರಾಗಿದ್ದರು ಎಂಬುದನ್ನು ಅವರ ನಡಿಗೆಯೇ ಹೇಳುತ್ತಿತ್ತು. ಸ್ವಲ್ಪ ದೂರ ಸಾಗಿದ ಮೇಲೆ, ರಕ್ಷಣೆ ಪಡೆಯುವ ಉದ್ದೇಶಕ್ಕೆ ಕಂದಕ ನಿರ್ವಿುಸತೊಡಗಿದರು. ಮೊದಲೇ ಬಳಲಿದ್ದ ಅವರಿಂದ ವೇಗವಾಗಿ ಕೆಲಸ ಆಗುತ್ತಿರಲಿಲ್ಲ. ಆ ತುಕಡಿಯ ನಾಯಕನಾದರೋ, ತಾನು ಸೈನಿಕರ ಜತೆ ಕೈಸೇರಿಸದೆ ಬರೀ ಆದೇಶ ಕೊಡುತ್ತಿದ್ದ. ಬೇಗ ಬೇಗ ಕೆಲಸ ಮಾಡಿ ಎಂದು ಅವಸರಿಸುತ್ತಿದ್ದ. ಒಂದು ತಾಸಿನಲ್ಲಿ ಮುಗಿಸದಿದ್ದರೆ ಶಿಕ್ಷಿಸುವೆ ಎಂದು ಬೆದರಿಸುತ್ತಿದ್ದ. ಅಷ್ಟು ಹೊತ್ತಿಗೆ ಕುದುರೆಯ ಮೇಲೆ ವ್ಯಕ್ತಿಯೊಬ್ಬ ಅಲ್ಲಿಗೆ ಬಂದ. ತಂಡದ ನಾಯಕ ಕೆಲಸಕ್ಕೆ ಸಹಕರಿಸದೆ ಬರೀ ಸೂಚನೆ ನೀಡುತ್ತಿದ್ದುದನ್ನು ಕಂಡು ಆತ, ‘ಏಕೆ ನೀನು ಅವರಿಗೆ ನೆರವಾಗುತ್ತಿಲ್ಲ?’ ಎಂದು ಕೇಳಿದ. ‘ನಾನು ನಾಯಕ. ನಾನ್ಯಾಕೆ ಅವರಿಗೆ ಸಹಾಯ ಮಾಡಬೇಕು. ನಾನು ಹೇಳಿದಂತೆ ಅವರು ಕೆಲಸ ಮಾಡಬೇಕು ಅಷ್ಟೇ’ಎಂದು ಹಮ್ಮಿನಿಂದಲೇ ಉತ್ತರಿಸಿದ. ‘ಅಷ್ಟಕ್ಕೂ ನಿನಗೆ ಅವರ ಮೇಲೆ ಕರುಣೆ ಇದ್ದರೆ ಬೇಕಿದ್ದರೆ ಸಹಾಯಮಾಡು’ ಎಂದು ವ್ಯಂಗ್ಯವಾಡಿದ. ಆ ಆಗಂತುಕ ಕುದುರೆಯಿಂದಿಳಿದು ಸೈನಿಕರ ಕೆಲಸದಲ್ಲಿ ಕೈಜೋಡಿಸಿಯೇ ಬಿಟ್ಟ. ಆ ಕೆಲಸ ಮುಗಿಯುವವರೆಗೂ ಇದ್ದ. ನಂತರ, ಸೈನಿಕರ ನಾಯಕನ ಹತ್ತಿರ ಬಂದು, ‘ಮುಂದ್ಯಾವಾಗಾದರೂ ನಿನಗೆ ಸೈನಿಕರ ಜತೆ ಕೆಲಸಮಾಡಲು ಅಹಂ ಅಡ್ಡಬಂದರೆ ಹೇಳು. ನಾನು ನೆರವಿಗೆ ಬರುವೆ’ ಎಂದ. ಆ ಅಪರಿಚಿತನನ್ನು ಹತ್ತಿರದಿಂದ ಗಮನಿಸಿದ ನಾಯಕನಿಗೆ ಆಘಾತವಾಯಿತು. ಆತ ಬೇರಾರೂ ಅಲ್ಲ, ಜನರಲ್ ಜಾರ್ಜ್ ವಾಷಿಂಗ್ಟನ್! ಮುಂದೆ ಅಮೆರಿಕದ ಪ್ರಥಮ ಅಧ್ಯಕ್ಷನಾಗಿ ಇತಿಹಾಸ ಬರೆದ ಮಹಾಶಯ!

    ಸೇನಾ ಪರಿಭಾಷೆಯಲ್ಲಿ leading from the front ಎಂಬ ನುಡಿಗಟ್ಟಿದೆ. ಅಂದರೆ, ಎಂಥದೇ ಸನ್ನಿವೇಶದಲ್ಲೂ ನಾಯಕ ಮುಂಚೂಣಿಯಲ್ಲಿರಬೇಕು ಎಂದರ್ಥ. ಎದುರಾಳಿ ಬಂದೂಕು ಹಿಡಿದು ನಿಂತಾಗ, ನಾಯಕನೇ ಮೊದಲು ಎದೆಯೊಡ್ಡಬೇಕು ಹೊರತು ಸೈನಿಕನನ್ನು ಕಳಿಸಿ ತಾನು ಬಚಾವಾಗಲು ಹವಣಿಸುವುದಲ್ಲ. ನಮ್ಮ ಭಾರತೀಯ ಸೇನೆಯಲ್ಲಿ ಇಂಥ ಶೂರತನದ ಎಷ್ಟೋ ಕತೆಗಳಿವೆ. ರಾಜಕೀಯ ಆಡಳಿತಗಾರರಿಗೂ ಈ ಮಾತು ಅನ್ವಯ.

    ‘ಆಳುಗನಾಗಲು ಅವಸರಿಸಬೇಡಿ. ಯಾರು ಚೆನ್ನಾಗಿ ಸೇವೆ ಮಾಡುವನೋ ಅವನೇ ಉತ್ತಮ ಆಳುಗನಾಗುತ್ತಾನೆ’ ಎನ್ನುವ ಮೂಲಕ ಸ್ವಾಮಿ ವಿವೇಕಾನಂದರು ಆಡಳಿತಗಾರನ ಲಕ್ಷಣವನ್ನು ಕಟ್ಟಿಕೊಡುತ್ತಾರೆ. ನಮ್ಮಲ್ಲಿ ಆಳುವವ ಎಂದರೆ ‘ಸೇವೆ’ ಮಾಡುವವ ಎಂಬ ಪರಿಕಲ್ಪನೆ ಏಕೋ ಚಾಲ್ತಿಗೆ ಬಂದೇ ಇಲ್ಲ. ‘ನಮ್ಮ ಸಮಾಜದ ಮುಂದಾಳುಗಳು ಸೇನಾಧಿಕಾರಿಗಳು ಅಥವಾ ರಾಜರಾಗಿರಲಿಲ್ಲ. ಬದಲಾಗಿ ಋಷಿಮುನಿಗಳು ನಿಜವಾದ ಮುಂದಾಳುಗಳಾಗಿದ್ದರು’ ಎಂದು ಹೇಳುತ್ತಾರೆ, ವಿವೇಕಾನಂದರು. ಇಲ್ಲಿ ಅವರ ಧ್ವನಿ ಸ್ಪಷ್ಟ. ಅಂದರೆ, ಪ್ರಾಚೀನ ಭಾರತದಲ್ಲಿ ಜ್ಞಾನಪರಂಪರೆ ಮತ್ತು ಮಾನವನ ಬದುಕಿಗೆ ದಾರಿದೀಪವಾದ ಆದರ್ಶಗಳನ್ನು ಸಾರುತ್ತ ಅವನ್ನು ಪೀಳಿಗೆಗಳಿಗೆ ದಾಟಿಸುತ್ತಿದ್ದವರು ಸಾಮಾಜಿಕವಾಗಿ ನಾಯಕನ ಪ್ರಭಾವಳಿ ಹೊಂದಿದ್ದರು. ಈ ಆಧುನಿಕ ಕಾಲದಲ್ಲಿ ‘ರಾಜಋಷಿ’ ಎಂಬ ಪರಿಕಲ್ಪನೆಯಿದೆ. ಅಂದರೆ, ಹಿಂದೆ ರಾಜನಿಗೆ ರಾಜಗುರುಗಳು ಇದ್ದಹಾಗೆ. ಇವರು ಆಡಳಿತ ಮಾತ್ರವಲ್ಲದೆ, ಸಾಮಾಜಿಕ, ಆಧ್ಯಾತ್ಮಿಕ, ನೈತಿಕ ಬದುಕಿನ ಆಯಾಮಗಳನ್ನೂ ಅರಿತಿರಬೇಕಾಗುತ್ತದೆ.

    ಜನರ ಜವಾಬ್ದಾರಿ: ‘ನಾವು ಪ್ರಜೆಗಳೇ ಪ್ರಭುಗಳು. ನಮ್ಮ ಅರ್ಹತೆ ಮತ್ತು ಬೇಡಿಕೆಗೆ ತಕ್ಕಂತೆ ಒಳ್ಳೆಯ ಅಥವಾ ಕೆಟ್ಟ ರಾಜಕೀಯ ನಾಯಕರು ದೊರೆಯುತ್ತಾರೆ’ ಎಂಬುದು ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಕೆನಡಿ ಮಾತು. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದರಲ್ಲಿ ಮತದಾರರ ಪಾತ್ರವನ್ನು ಈ ಮಾತು ಬಿಂಬಿಸುತ್ತದೆ. ಆಡಳಿತದ ಸ್ಥಾನಗಳಿಗೆ ಹೋಗುವ ಪ್ರತಿನಿಧಿ ಕೂಡ ಜನರ ನಡುವಿನಿಂದಲೇ ಬಂದವನಾಗಿರುತ್ತಾನೆ ಹೊರತು ಆತ ದಿಢೀರನೆ ಉದ್ಭವಿಸುವ ಸ್ವಯಂಭುವೇನಲ್ಲವಲ್ಲ. ಹೀಗಾಗಿ ಆಯ್ಕೆಯ ನಂತರದಲ್ಲಿ, ‘ಅಯ್ಯೋ ನಮ್ಮನ್ನು ಪ್ರತಿನಿಧಿಸುವವ ಇಂಥವನಾ’ ಎಂದು ಜನರು ಹಳಹಳಿಸಿದರೆ ಪ್ರಯೋಜನವಿಲ್ಲ.

    ‘ಜನರು ಸರ್ಕಾರದ ಆಡಳಿತದ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆಯೇ ಹೊರತು ರಾಜಕೀಯದ ಬಗೆಗಲ್ಲ ಎಂಬುದನ್ನು ಯಾರು ಚೆನ್ನಾಗಿ ಅರಿತು ಅದರಂತೆ ವ್ಯವಹರಿಸುವರೋ ಅವರೇ ಭವಿಷ್ಯದ ನಾಯಕರು’ ಎಂಬುದು ಅಮೆರಿಕದ ಇನ್ನೊಬ್ಬ ಮಾಜಿ ಅಧ್ಯಕ್ಷ ಫ್ರಾಂಕ್ಲಿನ್ ರೂಸ್​ವೆಲ್ಟ್ ಅಭಿಮತ. ಅಷ್ಟಕ್ಕೂ ಜನರಿಗೆ ಪ್ರಮುಖವಾಗಿ ಬೇಕಾದುದು ಏನು? ರಸ್ತೆ, ನೀರು, ವಿದ್ಯುತ್, ಗುಣಮಟ್ಟದ ಶಿಕ್ಷಣ, ಉತ್ತಮ ಅವಕಾಶಗಳು. ಸರ್ಕಾರಗಳು ತಮಗೆ ಸ್ವರ್ಗವನ್ನೇ ಧರೆಗಿಳಿಸಿಕೊಡಲಿ ಎಂದು ಪ್ರಜ್ಞಾವಂತ ನಾಗರಿಕರು ಬಯಸುವುದಿಲ್ಲ. ಸ್ವರ್ಗಸೃಷ್ಟಿ ಅವರವರ ಶಕ್ತಿಸಾಮರ್ಥ್ಯಕ್ಕೆ ಬಿಟ್ಟಿದ್ದು. ಅಂಥ ವಾತಾವರಣ ನಿರ್ವಿುಸಿಕೊಡುವುದು ಮಾತ್ರ ಸರ್ಕಾರಗಳ ಕರ್ತವ್ಯ. ‘ಲೈಸೆನ್ಸ್​ರಾಜ್’ ಇದ್ದಾಗ ನಮ್ಮಲ್ಲಿ ಕೈಗಾರಿಕೆಗಳ ಅವಸ್ಥೆ ಹೇಗಿತ್ತು, ಅದನ್ನು ತೆಗೆದನಂತರದಲ್ಲಿ ಹೇಗಾಯಿತು ಎಂಬುದು ಇದಕ್ಕೆ ಉತ್ತಮ ಉದಾಹರಣೆ. ‘ನೀವು ನನಗೆ ಮತಹಾಕಿಲ್ಲ. ಆದ್ದರಿಂದ ನನ್ನಲ್ಲಿ ಏನೂ ಕೇಳಬೇಡಿ’ಎಂಬಂಥ ಮಾತುಗಳು ಅಪ್ರಬುದ್ಧರಿಂದ ಮಾತ್ರ ಬರಲು ಸಾಧ್ಯ.

    ‘ಬೃಹತ್ ಸಾಧನೆಗಳು ಕೇವಲ ಒಬ್ಬ ವ್ಯಕ್ತಿಯಿಂದ ಆಗುವುದಿಲ್ಲ. ಜನರ ತಂಡದಿಂದ ಅದು ಸಾಧ್ಯವಾಗುತ್ತದೆ’ ಎನ್ನುವುದು ಮೇಧಾವಿ ತಂತ್ರಜ್ಞ, ಆಪಲ್ ಸಹಸಂಸ್ಥಾಪಕ ಸ್ಟೀವ್ ಜಾಬ್ಸ್ ಅನುಭವದ ಮಾತು. ಈ ಸ್ಟೀವ್ ಎಂಥ ಟೆಕ್​ದೈತ್ಯನೆಂದರೆ ಪರ್ಸನಲ್ ಕಂಪ್ಯೂಟರ್ ಅವತಾರವೆತ್ತುವಲ್ಲಿ ಅವರ ಕೊಡುಗೆ ದೊಡ್ಡದು. ಹಾಗೇ, ಆಪಲ್ ಫೋನ್ ಆವಿಷ್ಕಾರದಲ್ಲಿ ಸಹ.

    ಸಾಮೂಹಿಕ ಜವಾಬ್ದಾರಿ ಎಂಬುದು ಬಿಸಿನೆಸ್​ಗೆ ಮಾತ್ರ ಸಂಬಂಧಿಸಿದ್ದಲ್ಲ. ವಾಸ್ತವದಲ್ಲಿ ಆಳುವ ಸರ್ಕಾರದ ಮಂತ್ರಿಮಂಡಳವು ತನ್ನ ನಿರ್ಣಯಗಳಿಗೆ ಸಾಮೂಹಿಕ ಜವಾಬ್ದಾರಿಯನ್ನು ಹೊಂದಿರುತ್ತದೆ. ಅಂದರೆ, ಯಾವುದೇ ನೀತಿನಿರ್ಧಾರದ ಸಾಧಕಬಾಧಕಗಳಿಗೆ ಎಲ್ಲರೂ ಹೊಣೆಗಾರರು. ಹೀಗಾಗಿಯೇ ಇಡೀ ಮಂತ್ರಿಮಂಡಳದಲ್ಲಿ ಎಲ್ಲೋ ಒಂದಿಬ್ಬರು ದಕ್ಷ, ಚುರುಕಿನ ಸಚಿವರಿದ್ದರೆ ಆ ಸರ್ಕಾರಕ್ಕೆ ಉತ್ತಮ ಹೆಸರು ಬರುವುದು ಕಷ್ಟ. ಕ್ರಿಕೆಟ್ ಸಹ ಸಾಮೂಹಿಕ ಕೊಡುಗೆಯ ಆಟವೇ. ಆದರೂ, 150 ರನ್ ಅಗತ್ಯವಿದ್ದಾಗ, ಆರಂಭದಲ್ಲೇ ಮೂರ್ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದರೂ, ಒಬ್ಬ ದಾಂಡಿಗ ಭರ್ಜರಿಯಾಗಿ ಆಡಿ ಗೆಲ್ಲಿಸುವ ಸಾಧ್ಯತೆ ಇರುತ್ತದೆ. ಆಡಳಿತದಲ್ಲಿ ಹೀಗಾಗದು. ಎಲ್ಲರೂ ಅವರವರ ಅಳಿಲು ಸೇವೆ ಸಲ್ಲಿಸಿದರೆ ಮಾತ್ರ ಸರ್ಕಾರಕ್ಕೆ ಇಮೇಜ್ ಬರುತ್ತದೆ.

    ರತನ್ ಟಾಟಾ ಯಾರಿಗೆ ಗೊತ್ತಿಲ್ಲ? ಅದಾಗಲೇ ಪ್ರಸಿದ್ಧವಾಗಿದ್ದ ಟಾಟಾ ಸಮೂಹದ ಕಾರ್ಯವನ್ನು ಇನ್ನಷ್ಟು ವಿಸ್ತರಿಸಿ, ಹಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡು ಜಾಗತಿಕವಾಗಿ ಬೆಳೆಸುವಲ್ಲಿ ಅವರ ಪಾತ್ರ ದೊಡ್ಡದು. ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಂಡು ಮುನ್ನುಗ್ಗಲು ಅವರು ಯಾವಾಗಲೂ ಸೈ ಎನ್ನುತ್ತಿದ್ದರು. ಅವರೆನ್ನುತ್ತಾರೆ: ‘ನನಗೆ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವುದರಲ್ಲಿ ನಂಬಿಕೆ ಇಲ್ಲ. ನಾನು ಮೊದಲು ನಿರ್ಣಯ ತೆಗೆದುಕೊಂಡು ನಂತರ ಅದನ್ನು ಸರಿಯಾಗಿ ಜಾರಿಗೊಳಿಸುತ್ತೇನೆ’.

    ಕನಸುಗಳ ಬೆನ್ನತ್ತಿ: ‘ನಾಯಕತ್ವ ಎಂದರೆ ದೊಡ್ಡ ಕನಸನ್ನು ಕಾಣುವ ಎದೆಗಾರಿಕೆ’ ಎನ್ನುತ್ತಾರೆ ಇನ್ಪೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ಎನ್.ಆರ್.ನಾರಾಯಣಮೂರ್ತಿ. ಮೂರ್ತಿ ಮತ್ತು ಸಂಗಡಿಗರು ರೂಮೊಂದರಲ್ಲಿ ಕುಳಿತು, ಐಟಿ ಕಂಪನಿಯ ಕನಸು ಕಂಡಿದ್ದರಿಂದಲೇ ಇನ್ಪೋಸಿಸ್ ಜನ್ಮತಾಳಿತು. ಹಾಗಂತ ಮೂರ್ತಿ ತಂಡದ ಬಳಿ ಆಗ ಹಣವೇನೂ ಇರಲಿಲ್ಲ. ಆದರೆ, ಆಂತರ್ಯದಲ್ಲಿ ತಂತ್ರಜ್ಞಾನ ರಂಗದಲ್ಲಿ ದೊಡ್ಡದೇನಾದರೂ ಮಾಡುವ ಚಡಪಡಿಕೆಯಿತ್ತು. ಸರ್ಕಾರವನ್ನು ಕಾಪೋರೇಟ್ ಆಡಳಿತ ಶೈಲಿಯಲ್ಲಿ ನಡೆಸಬೇಕು ಎಂದೂ ಕೆಲವರು ಪ್ರತಿಪಾದಿಸುತ್ತಾರೆ. ಏಕೆಂದರೆ ಅಲ್ಲಿ ಶಿಸ್ತು, ಉತ್ತರದಾಯಿತ್ವ, ನಿರ್ದಿಷ್ಟ ಹೊಣೆ, ಟಾರ್ಗೆಟ್ ಎಲ್ಲವೂ ಇರುತ್ತದೆ. ಉದ್ದೇಶಿತ ಕೆಲಸ ಆಗದಿದ್ದರೆ ಕೇಳುವವರಿರುತ್ತಾರೆ.

    ‘ಸಾಮಾನ್ಯಜ್ಞಾನವುಳ್ಳ ಪುರುಷ ಅಥವಾ ಮಹಿಳೆಯನ್ನು ನನ್ನ ಬಳಿಗೆ ಕಳಿಸಿ. ನಾನು ಅವರನ್ನು ನಾಯಕರನ್ನಾಗಿ ರೂಪಿಸುತ್ತೇನೆ’ ಎಂದಿದ್ದರು ಭಾರತೀಯ ಸೈನ್ಯದ ಖ್ಯಾತಿವೆತ್ತ ಅಧಿಕಾರಿ ಸ್ಯಾಮ್ ಮಾಣಿಕ್​ಶಾ. ಅವರ ಮಾತಿನ ಉದ್ದೇಶ ಸ್ಪಷ್ಟ. ಅಂದರೆ, ಧುರೀಣತ್ವ ವಹಿಸುವವನಿಗೆ ಸಾಮಾನ್ಯಜ್ಞಾನ ಮೊದಲ ಅರ್ಹತೆ.

    ‘ಉತ್ತಮ ನಾಯಕನಾಗಬಯಸುವನು ಉತ್ತಮ ಕೇಳುಗನೂ ಆಗಿರಬೇಕಾಗುತ್ತದೆ. ಜನರ ಮಾತುಗಳನ್ನು ಮನವಿಟ್ಟು ಆಲಿಸಬೇಕಾಗುತ್ತದೆ’ ಎಂಬುದು ಖ್ಯಾತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಮಾತು. ‘ನೀನೇನು ನನಗೆ ಹೇಳೋದು? ನಿನಗೇನು ಬೇಕು ಅಂತ ನನಗೆ ಗೊತ್ತು’ಎಂದು ಹೇಳುವುದು ಅಹಂ ಪ್ರದರ್ಶನ. ‘ನಿನಗೆ ಏನು ಬೇಕು ಹೇಳು. ನಾನು ಈಡೇರಿಸಲು ಯತ್ನಿಸುವೆ’ ಎಂದು ಕಿವಿಯಾಗುವುದು ಅಹಂಕಾರದ ನಿರಸನ.

    ‘ನಾಯಕನಾದವನು ಬರೀ ತನ್ನ ಯಶಸ್ಸಿನ ಬಗ್ಗೆ ಮಾತ್ರ ಆಲೋಚಿಸುವುದಲ್ಲ. ಇತರರ ಯಶಸ್ಸಿನ ಬಗ್ಗೆಯೂ ಚಿಂತನೆ ನಡೆಸಬೇಕು’ ಎನ್ನುತ್ತಾರೆ, ಗೂಗಲ್ ಸಿಇಒ ಸುಂದರ್ ಪಿಚೈ. ಈ ಮಾತಿನಲ್ಲಿ ಗೂಢಾರ್ಥವಿದೆ. ಸಂಸ್ಥೆಯೊಂದರ ಮುಖ್ಯಸ್ಥ ತನ್ನ ನೌಕರರ ಏಳಿಗೆ, ಮುನ್ನಡೆಯ ಬಗ್ಗೆಯೂ ಯೋಚಿಸಿದಾಗ, ಆ ಪ್ರಕ್ರಿಯೆಯಲ್ಲಿ ಅದರ ಉಪಫಲವಾಗಿ ಆ ಸಂಸ್ಥೆಯ ಅಭಿವೃದ್ಧಿ ಸಹ ಆಗಿರುತ್ತದೆ. ಭವಿಷ್ಯದಲ್ಲಿ ತನಗೆ ಪ್ರತಿಸ್ಪರ್ಧಿಯಾದಾನು ಎಂಬ ಎಣಿಕೆಯಲ್ಲಿ ಯಾರನ್ನೂ ಬೆಳೆಸದಿದ್ದರೆ ಅದು ಸಾಮೂಹಿಕ ನಷ್ಟ. ಭವಿಷ್ಯದಲ್ಲಿ ನಿರ್ವಾತ ಸೃಷ್ಟಿಗೆ ಹಾದಿ.

    ವಿವೇಚನೆ ಬೇಕು: ‘ಇಲ್ಲ’ ಎಂಬುದು ನಾಯಕತ್ವದ ಕಲೆಯೇ ವಿನಾ ‘ಹೌದು’ ಎಂದು ಹೇಳುವುದಲ್ಲ. ಏಕೆಂದರೆ ‘ಹೌದು’ ಎಂದು ಹೇಳುವುದು ಬಹಳ ಸುಲಭ ಎಂಬುದು ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಉವಾಚ. ಹೌದಲ್ಲವೆ? ಜನರು ಏನೋ ಕೇಳುತ್ತಾರೆ; ಹಿಂಬಾಲಕರು ದಂಡಿಯಾಗಿ ಬೇಡಿಕೆ ಮುಂದಿಡುತ್ತಾರೆ. ನಾಯಕನಾದವ ಸಾರಾಸಾರ ವಿವೇಚನೆ ಮಾಡದೆ ಕೇಳಿದ್ದಕ್ಕೆಲ್ಲ ಅಸ್ತು ಎಂದುಬಿಟ್ಟರೆ ಮುಂದೆ ಕತೆಯೇನು! ಕೆಲವು ಸಾರಿ ನಿಷ್ಠುರವಾಗಿ ‘ಉಹುಂ’ ಎನ್ನಬೇಕಾಗುತ್ತದೆ ಎಂಬ ಗೂಢಾರ್ಥ ಇಲ್ಲಿದೆ. ನಾಯಕ ಹೀಗೆ ಇಲ್ಲ ಎಂದಾಗ ವಿರೋಧ ಕಟ್ಟಿಕೊಳ್ಳಬೇಕಾದ ಪ್ರಸಂಗವೂ ಎದುರಾಗಬಹುದು. ಆದರೆ ಅದಕ್ಕೆಲ್ಲ ಅಂಜದೆ, ವಾಸ್ತವಿಕ ದೃಷ್ಟಿಕೋನದಲ್ಲಿ ನಿರ್ಣಯಕ್ಕೆ ಬರುವುದು ಜಾಣತನ.

    ‘ವ್ಯಕ್ತಿ ಸಾಯಬಹುದು. ಆದರೆ ಆತ ಪ್ರತಿಪಾದಿಸಿದ ಆದರ್ಶ ಸಾವಿರಾರು ಜನರ ಮೂಲಕ ಮರುಜನ್ಮ ಪಡೆಯುತ್ತದೆ’ ಎಂದಿದ್ದಾರೆ ಅಪ್ರತಿಮ ಸ್ವಾತಂತ್ರ್ಯ ಮುಂದಾಳು ಸುಭಾಷಚಂದ್ರ ಬೋಸ್. ತುರ್ತು ಪರಿಸ್ಥಿತಿ ಬೆನ್ನಲ್ಲಿ 1977ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಜಯಗಳಿಸಿತ್ತಷ್ಟೆ. ಭಾರತೀಯ ಜನಸಂಘದ ನಾಯಕರಲ್ಲೊಬ್ಬರಾದ ನಾನಾಜಿ ದೇಶಮುಖರು ಉತ್ತರ ಪ್ರದೇಶದ ಬಲರಾಮಪುರದಿಂದ ಆಯ್ಕೆಯಾಗಿದ್ದರು. ಇವರ ಜನಪರ ಧೋರಣೆ ಮತ್ತು ಕಾರ್ಯಶೈಲಿಯ ಪರಿಚಯವಿದ್ದ ಜೆಪಿ ಮತ್ತು ಮುರಾರ್ಜಿ ದೇಸಾಯಿ ಅವರು, ಕೇಂದ್ರ ಸಂಪುಟ ಸೇರುವಂತೆ ಆಹ್ವಾನ ನೀಡಿದರು. ಆದರೆ ನಾನಾಜಿ ಇದಕ್ಕೆ ಒಪ್ಪಲಿಲ್ಲ. ಅಷ್ಟೇ ಅಲ್ಲ, ತನಗೆ 60 ವರ್ಷವಾದಾಗ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡುಬಿಟ್ಟರು! ಸೇವೆಗೆ ಅಧಿಕಾರಸ್ಥಾನ ಅನಿವಾರ್ಯವೇನಲ್ಲ; ಅಧಿಕಾರತ್ಯಾಗ ಕೂಡ ನಾಯಕನ ಗುಣಗಳಲ್ಲೊಂದು ಎಂಬುದನ್ನು ಈ ಮೂಲಕ ದರ್ಶಿಸಿದರು.

    ಕೊನೇ ಮಾತು: ‘ಕಟ್ಟುನಿಟ್ಟು ನಿಯಮಗಳನ್ನು ಅನ್ವಯಿಸಿ ನೋಡುವುದಾದರೆ, ನೈಜ ಪ್ರಜಾಪ್ರಭುತ್ವ ಎಂಬುದು ಎಂದೂ ಇರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ’ ಎನ್ನುತ್ತಾನೆ ಚಿಂತಕ ರೂಸೊ. ಕೆಲವೊಮ್ಮೆ ನಮ್ಮ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಕಂಡಾಗ, ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುವ ದೊಂಬಿಯನ್ನು ಕಂಡಾಗ ಇದು ಹೌದು ಎನಿಸುತ್ತದೆ. ಆದರೂ, ಅಸ್ತಿತ್ವದಲ್ಲಿ ಇರುವ ಬೇರೆ ಬೇರೆ ಆಡಳಿತ ಪದ್ಧತಿಗಳನ್ನು ಹೋಲಿಸಿದಾಗ ಪ್ರಜಾಪ್ರಭುತ್ವವೇ ಮೇಲು. ಅಲ್ಲವೆ?

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಬಂಕ್​ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಧಗ್ಗನೆ ಹೊತ್ತಿಕೊಂಡ ಬೆಂಕಿ: ಪುತ್ರಿ ಸಾವು, ತಾಯಿ ಪರಿಸ್ಥಿತಿ ಗಂಭೀರ

    2000 ರೂ. ನೋಟು ಹಿಂಪಡೆತ: ಒಮ್ಮೆಗೆ 20 ಸಾವಿರ ರೂ. ಮಾತ್ರ ಬದಲಿಸಿಕೊಳ್ಳಲು ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts