ಸುಬ್ರಹ್ಮಣ್ಯ ದೇವಳ ಪ್ರಸಾದ ಸುರಕ್ಷತೆಗೆ ಹೆಚ್ಚಿನ ಕ್ರಮ

ಸುಬ್ರಹ್ಮಣ್ಯ: ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭೋಜನ ಪ್ರಸಾದ ತಯಾರಿ ಮತ್ತು ವಿತರಣೆ ವೇಳೆ ಇನ್ನಷ್ಟು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಅನುರಿಸಲು ದೇವಳದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

ಅಡುಗೆ ತಯಾರಿ ಕೊಠಡಿ, ಆಹಾರ ಶೇಖರಣೆ ಕೊಠಡಿ ಹಾಗೂ ಭಕ್ತರಿಗೆ ವಿತರಿಸುವ ಲಡ್ಡು ಪಂಚಕಜ್ಜಾಯ ಇತ್ಯಾದಿ ತಯಾರಿ ಹಾಗೂ ವಿತರಣೆ ಶೇಖರಣಾ ಕೊಠಡಿಗಳಲ್ಲಿ ಸುರಕ್ಷತೆ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿದೆ. ಆಹಾರ ತಯಾರಿ ಮತ್ತು ಶೇಖರಣೆ ಸಂಗ್ರಹ ಸಂದರ್ಭ ಸುರಕ್ಷಾ ಕಾಯ್ದೆ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ ಘಟನೆ ಬಳಿಕ ಇನ್ನಷ್ಟು ಸುರಕ್ಷತಾ ಕ್ರಮಕ್ಕೆ ಆಡಳಿತ ಮಂಡಳಿ ನಿರ್ಧರಿಸಿದೆ.

ಸಿಸಿ ಕ್ಯಾಮರಾ ಅಳವಡಿಕೆ: ದೇವರ ನೈವೇದ್ಯ ಮತ್ತು ದಾಸೋಹಕ್ಕಾಗಿರುವ ಕೊಠಡಿಗಳಲ್ಲಿ ಸಿಸಿ ಕ್ಯಾಮರ ಇಲ್ಲದ ಕಡೆ ಶೀಘ್ರ ಅಳವಡಿಕೆಗೆ ಆಡಳಿತ ಮುಂದಾಗಿದೆ. ಪರಿಸರದಲ್ಲಿ ಪೂರ್ವಾನುಮತಿ ಪಡೆಯದೆ ಭಕ್ತರೆ ಪ್ರಸಾದ ತಯಾರಿಸಿ ವಿತರಿಸದಂತೆ ಎಚ್ಚರ ವಹಿಸಿ ಕ್ರಮಕ್ಕೆ ಮುಂದಾಗಿದೆ. ದೇವಸ್ಥಾನದ ವಿವಿಧ ಕಡೆಗಳಿಗೆ ಅಳವಡಿಸಲು 54 ಸಿ.ಸಿ ಕ್ಯಾಮರಕ್ಕೆ ಅನುಮೋದನೆಗೆ ಕಳುಹಿಸಲಾಗಿದೆ. ಇವುಗಳನ್ನು ಭೋಜನಶಾಲೆ ಹಾಗೂ ಅವಶ್ಯವಿರುವ ಕಡೆಗೆ ಅಳವಡಿಸಲಾಗುವುದು. ದೇವಳದಲ್ಲಿ ವಾರ್ಷಿಕವಾಗಿ ಸುಮಾರು 73ಲಕ್ಷಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ ಎಂದು ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

ಇಂದು ಜಾತ್ರೋತ್ಸವ ಸಮಾಪನ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂತಿಮ ದಿನವಾದ ಡಿ.20ರಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೋತ್ಸವ ಸಮಾಪನಗೊಳ್ಳಲಿದೆ. ಈ ಪ್ರಯುಕ್ತ ನೀರಿನಲ್ಲಿ ಬಂಡಿ ಉತ್ಸವ ನೆರವೇರಲಿದೆ. ಬೆಳಗ್ಗೆ ಸುಮುಹೂರ್ತದಲ್ಲಿ ಕೊಪ್ಪರಿಗೆ ಇಳಿಸಲಾಗುವುದು. ಮಹಾಪೂಜೆ ನಂತರ ದೇವಳದ ಹೊರಾಂಗಣದ ಸುತ್ತ ನೀರನ್ನು ಶೇಖರಿಸಲಾಗುವುದು. ರಾತ್ರಿ ಮಹಾಪೂಜೆಯ ನಂತರ ದೇವಳದ ಹೊರಾಂಗಣದಲ್ಲಿ ನೀರು ತುಂಬಿದ್ದ ನೀರಿನಲ್ಲಿ ಬಂಡಿ ತೇರನ್ನು ಎಳೆಯಲಾಗುವುದು. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಅತ್ಯಂತ ವಿಶಿಷ್ಟವಾದ ಈ ಉತ್ಸವದೊಂದಿಗೆ ದೇವರ ಜಾತ್ರೆ ಕೊನೆಯಾಗಲಿದೆ. ಈ ಬಳಿಕ ದೀಪಾರಾಧನೆಯುಕ್ತ ಪಾಲಕಿ ಉತ್ಸವ ನಡೆಯುತ್ತದೆ. ಉತ್ಸವದ ಬಳಿಕ ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯಲಿದೆ.