More

  ಇದು ಬೆಳಕಲ್ಲ, ದರ್ಶನ! ಏನು ಹೇಳುತ್ತದೆ ಕಾಂತಾರ ಮೊದಲ ನೋಟ?

  ಬೆಂಗಳೂರು: ‘ಕಾಂತಾರ’ ಯಶಸ್ಸಿನ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರೀಕ್ವೆಲ್ ಮಾಡುವುದಾಗಿ ತಿಳಿಸಿದ್ದರು. ಆಗಿನಿಂದಲೂ ಅಭಿಮಾನಿಗಳು ಸಿನಿಮಾ ಯಾವಾಗ ಪ್ರಾರಂಭ? ಸ್ಟ್ ಲುಕ್ ಯಾವಾಗ ಬಿಡುಗಡೆ ಅಂತ ಕಾತರದಿಂದ ಎದುರು ನೋಡುತ್ತಿದ್ದರು. ಇದೀಗ ಈಗ ಚಿತ್ರತಂಡ ‘ಕಾಂತಾರ’ ಪ್ರೀಕ್ವೆಲ್ ಮೊದಲ ನೋಟವನ್ನು ರಿಲೀಸ್ ಮಾಡಿದೆ. ‘ಕಾಂತಾರ’ ಪ್ರೀಕ್ವೆಲ್‌ಗೆ ‘ಒಂದು ದಂತಕಥೆ: ಅಧ್ಯಾಯ 1’ ಎಂಬ ಅಡಿಬರಹವಿದ್ದು, ‘ವಿಸ್ಮಯಕಾರಿ ಪ್ರಪಂಚಕ್ಕೆ ಮತ್ತೊಮ್ಮೆ ಸ್ವಾಗತ’ ಎಂದು ಚಿತ್ರತಂಡ ಬರೆದುಕೊಂಡಿದೆ. ‘ಕಾಂತಾರ’ ಸಣ್ಣ ಬಜೆಟ್ ಸಿನಿಮಾ ಆಗಿದ್ದರೂ ದೇಶಾದ್ಯಂತ ಸದ್ದು ಮಾಡಿ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡಿತ್ತು. ಇದೀಗ ಅದರ ಪ್ರೀಕ್ವೆಲ್ ದೊಡ್ಡ ಮಟ್ಟದಲ್ಲೇ ನಿರ್ಮಾಣವಾಗುತ್ತಿರುವುದು ವಿಶೇಷ. ಸೋಮವಾರ (ನ.27) ಕುಂದಾಪುರದ ಆನೆಗುಡ್ಡ ಗಣಪತಿ ದೇವಾಲಯದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿರಲಿದೆ.

  ಕುತೂಹಲಕಾರಿ ಸ್ಟ್ ಲುಕ್:
  ಚಿತ್ರದ ಮೊದಲ ನೋಟದಲ್ಲಿ ‘ಇದು ಕದಂಬರ ಆಳ್ವಿಕೆಯ ಸಂದರ್ಭದಲ್ಲಿ ಹುಟ್ಟಿಕೊಂಡ ದಂತಕಥೆ’ ಎಂಬುದನ್ನು ತಿಳಿಸಲಾಗಿದೆ. ಕದಂಬರು ಮೂರನೇ ಶತಮಾನದಿಂದ ಆರನೇ ಶತಮಾನದವರೆಗೆ ಆಳ್ವಿಕೆ ನಡೆಸಿದ್ದರು. ಕದಂಬರ ಬಗ್ಗೆ ಹಲವು ದಂತಕಥೆಗಳಿವೆ. ಅದರಲ್ಲಿ ಮುಖ್ಯವಾಗಿ, ರಾಜ ತ್ರಿಲೋಚನ ಕದಂಬ ಶಿವನ ಬೆವರಿನಿಂದ ಹುಟ್ಟಿದವನು ಎಂದು ಹೇಳಲಾಗುತ್ತದೆ. ಇನ್ನೊಂದೆಡೆ ರಾಜ ಮಯೂರವರ್ಮ, ಕದಂಬ ಮರಗಳಿಂದ ಕೂಡಿದ ದಟ್ಟಾರಣ್ಯದಲ್ಲಿ ಜನಿಸಿದ ಎಂಬ ಕಥೆಯೂ ಇದೆ. ಆದರೆ, ಇದು ಇವೆರಡು ಕಥೆಗಳ ಕಾಲಘಟ್ಟದ್ದಾ? ಅಥವಾ ಇನ್ನೂ ವಿಶೇಷವಾಗಿ ಏನಾದರೂ ನಿರೀಕ್ಷಿಸಬಹುದೇ? ಎನ್ನುವ ಕುತೂಹಲ ಹುಟ್ಟಿಸಿದೆ.

  ಪರಶುರಾಮನ ಅವತಾರ?
  ‘ಕಾಂತಾರ’ ಚಿತ್ರದಲ್ಲಿ ಶಿವ, ಪಂಜುರ್ಲಿ ಮತ್ತು ಗುಳಿಗ ದೈವದ ಭಿನ್ನ ವಿಭಿನ್ನ ಲುಕ್ ಮತ್ತು ಶೇಡ್‌ಗಳಲ್ಲಿ ರಿಷಬ್ ಕಾಣಿಸಿಕೊಂಡಿದ್ದರು. ಇದೀಗ ಪ್ರೀಕ್ವಲ್‌ನಲ್ಲೂ ಮೊದಲ ಚಿತ್ರವನ್ನೂ ಮೀರಿದ ಹೊಸ ಬಗೆಯ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಗ್ನಿಪರ್ವತದೊಳಗೆ ರಕ್ತಸಿಕ್ತ ಮೈಯಲ್ಲಿ, ಕೈಯಲ್ಲಿ ಕೊಡಲಿ, ತ್ರಿಶೂಲ ಹಿಡಿದು ಹೋರಾಟಕ್ಕೆ ನಿಂತಂತೆ ಕಾಣಿಸಿಕೊಂಡಿರುವ ರಿಷಬ್ ಅವತಾರ ಪರಶುರಾಮನಂತೆ ಕಾಣಿಸುವಂತಿದೆ. ತುಳುನಾಡನ್ನು ಸಮುದ್ರದಿಂದ ಮರಳಿ ಪಡೆದ ಪರಶುರಾಮನ ಕಥೆಯೇ ರೋಮಾಂಚನಕಾರಿ! ಇದೇನಾದರು ಅದಕ್ಕೆ ಸಂಬಂಧ ಪಟ್ಟಿದ್ದಾ? ದೈವಗಳ ಮೂಲಗಳಿಗೆ ಸಂಬಂಧಪಟ್ಟಿದ್ದಾ? ಎಂದು ಯೋಚಿಸುವಂತೆ ಮಾಡಿದೆ.

  ಇದು ಮೊದಲ ಅಧ್ಯಾಯ
  ಈ ಚಿತ್ರಕ್ಕೆ ‘ಅಧ್ಯಾಯ 1’ ಎಂಬ ಅಡಿಬರಹ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದು ಅಧ್ಯಾಯ 1 ಆದರೆ, ಇನ್ನೂ 2,3 ಹೀಗೆ ಮುಂದುವರಿಯಬಹುದಾ? ಎಂಬ ಪ್ರಶ್ನೆಗೂ ಕಾರಣವಾಗಿದೆ. ಈ ಬಗ್ಗೆ ರಿಷಬ್ ಶೆಟ್ಟಿ, ‘ನೀವೆಲ್ಲ ಈಗಾಗಲೇ ನೋಡಿರುವುದು ಎರಡನೇ ಭಾಗ. ಈಗ ಬರುತ್ತಿರುವುದು ಮೊದಲನೇ ಭಾಗ. ಹೀಗಾಗಿ ‘ಅಧ್ಯಾಯ 1’. ಈ ಸಿನಿಮಾ ಕರಾವಳಿ ಭಾಗಕ್ಕೆ ಸಂಬಂಧಿಸಿದ್ದರಿಂದ ಇಲ್ಲಿಯೇ ಚಿತ್ರೀಕರಣ ಮಾಡುವ ಯೋಚನೆಯಿದೆ. ಜತೆಗೆ ಉಳಿದ ಪಾತ್ರಗಳಿಗೆ ಕಾಸ್ಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಜತೆಗೆ ಬೆಂಗಾಲಿ ಮತ್ತು ಇಂಗ್ಲೀಷ್ ಸೇರಿ ಒಟ್ಟು ಏಳು ‘ಅಧ್ಯಾಯ 1’ ಬಿಡುಗಡೆಯಾಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts