ಹೊಳೆನರಸೀಪುರ: ಆಧುನಿಕತೆ ಮುಂದುವರಿದಂತೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ ಎಂದು ದೊಡ್ಡಕಾಡನೂರು ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜು ವತಿಯಿಂದ ತಾಲೂಕಿನ ಎಲೆಚಾಗಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ, ಗುರು-ಹಿರಿಯರು, ತಂದೆ-ತಾಯಿ ಮತ್ತು ಪಾಲಕರಿಗೆ ಗೌರವ ಕೊಡುವ ಪರಿಪಾಠ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಓದಿದರೆ ಮಾತ್ರ ಸಾಲದು, ಓದಿನ ಜತೆಗೆ ಸಂಸ್ಕಾರವಂತರು ಆಗಬೇಕು. ಅಂಕಪಟ್ಟಿಯಲ್ಲಿ ಅಂಕಗಳನ್ನು ಸಂಪಾದಿಸುವುದರ ಜತೆಗೆ ಉತ್ತಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯೊಂದಿಗೆ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಬೇಕು. ಪ್ರತಿಯೊಬ್ಬರ ಮನೆಗಳಲ್ಲಿ ಅವರ ತಂದೆ, ತಾಯಿಯರಿಗೆ ಜನ್ಮ ನೀಡಿರುವಂತಹ ಅಜ್ಜಿ, ತಾತ ಫೋಟೋಗಳು ಅವರ ದೇವರ ಮನೆಯಲ್ಲಿ ಕಾಣಿಸುವುದಿಲ್ಲ. ಅವುಗಳನ್ನು ಹೊರಗೆ ಇಟ್ಟಿರುತ್ತಾರೆ. ಯಾವ ಮನೆಯಲ್ಲಿ ಅಜ್ಜಿ-ತಾತ, ತಂದೆ-ತಾಯಿ, ಪಾಲಕರು, ಅಣ್ಣ, ಅಕ್ಕ ಮೊದಲಾದ ಹಿರಿಯರಿಗೆ ಗೌರವ ಮತ್ತು ಕಿರಿಯರಿಗೆ ಕರುಣೆ ತೋರಿಸುತ್ತಾರೆಯೋ ಅಂಥ ಮನೆಯಲ್ಲಿ ಉತ್ತಮ ಆರೋಗ್ಯ ಪೂರ್ಣವಾದಂತಹ ಸಂಸ್ಕಾರ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕಾರವಂತ ಸಂಸಾರವು ಶಾಂತಿಯುತವಾಗಿ ಜೀವನವನ್ನು ನಡೆಸುತ್ತದೆ ಹಾಗೂ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಇಂತಹ ಸಂಸ್ಕಾರವಂತ ವಿದ್ಯಾರ್ಥಿಗಳ ಮತ್ತು ಪಾಲಕರಿಂದ ಮಾತ್ರ ಸಾಧ್ಯ ಎಂದು ನುಡಿದರು.
ಭಾರತದ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದದ್ದು, ಆದ್ದರಿಂದ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಪರಕೀಯ ಉಡುಪುಗಳನ್ನು ಧರಿಸುವ ಮೂಲಕ ವಿದ್ಯಾರ್ಥಿಗಳು ಭಾರತದ ಉಡುಗೆ ತೊಡುಗೆಗಳನ್ನು ಮರೆಯುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಸಕಲೇಶಪುರ ತಾಲೂಕಿನ ಮಾಸವಳ್ಳಿ ಗ್ರಾಮದ ಸಾವಯವ ಕೃಷಿಕ ಎಚ್.ಸಿ.ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಸಾವಯವ ಕೃಷಿಯನ್ನು ಅನುಸರಿಸಿ ಬೆಳೆದಿರುವಂತಹ ಆಹಾರ ಪದಾರ್ಥಗಳನ್ನು ಮಾತ್ರ ಉಪಯೋಗಿಸಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಉತ್ತಮ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಮಾನವನ ದೇಹದಲ್ಲಿ ಸದೃಢವಾದ ಮನಸು ಇರುತ್ತದೆ ಎಂದರು.
ಪ್ರಾಂಶುಪಾಲೆ ಪ್ರೊ.ಯು.ಎಚ್.ಆಶಾಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ.ವಿ.ಎಸ್.ಕೃಷ್ಣಮೂರ್ತಿ, ಕೆಂಪೇಗೌಡ ವೇದಿಕೆ ಅಧ್ಯಕ್ಷ ಲೋಕೇಶ್, ಎಲೆಚಾಗಹಳ್ಳಿ ಮುಖಂಡರಾದ ಶಿವಣ್ಣ, ವೈ.ಬಿ.ಶಿವಕುಮಾರ್, ಆಶಾ ಕಾರ್ಯಕರ್ತೆ ವೇದಾವತಿ, ಉಪನ್ಯಾಸಕರಾದ ಜಿತೇಂದ್ರ ಸಿಂಗ್, ಸಿ.ಎಚ್.ಉಮೇಶ್, ಕರಿಯಪ್ಪ ಲಮಾಣಿ, ಶಿಬಿರಾಧಿಕಾರಿಗಳಾದ ಫಕೀರಮ್ಮ ಪಿ. ಮುರಗೋಡ, ಸಹ ಶಿಬಿರಾಧಿಕಾರಿ ಜಗದೀಶ್ ಇತರರು ಇದ್ದರು.