More

    ನೈತಿಕ ಶಿಕ್ಷಣ ಇಂದಿನ ಅಗತ್ಯ, ಅನಿವಾರ್ಯ

    ನೈತಿಕ ಶಿಕ್ಷಣ ಇಂದಿನ ಅಗತ್ಯ, ಅನಿವಾರ್ಯಆಂಗ್ಲ ಲೇಖಕ ಎಚ್.ಜಿ. ವೇಲ್ಸ್ ಹೇಳಿರುವಂತೆ, ‘ನಾಗರಿಕತೆಯೆಂದರೆ ಶಿಕ್ಷಣ ಹಾಗೂ ಸಂಭವನೀಯ ದುರಂತದ ನಡುವಿನ ಓಟದ ಸ್ಪರ್ಧೆ.’ ಈ ಮಾತನ್ನು ನಾನೂ ಅನುಮೋದಿಸುತ್ತೇನೆ. ಕೆಲವು ವರ್ಷಗಳ ಹಿಂದೆ, ನಾವು ದಕ್ಷಿಣ ಅಮೆರಿಕಾದ ಅರ್ಜೆಂಟೀನಾ ದೇಶದಲ್ಲಿದ್ದಾಗ ಅಲ್ಲಿನ ಒಬ್ಬ ಹಿರಿಯ ಪೋಲೀಸ್ ಅಧಿಕಾರಿ ದೇಶದಲ್ಲಿನ ಬಾಲಾಪರಾಧಿಗಳ ಸಮಸ್ಯೆಯ ಬಗ್ಗೆ ಕಳವಳ ಹಂಚಿಕೊಂಡರು:‘ಶಾಲೆಗಳಲ್ಲಿ ಇರಬೇಕಾದ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜೈಲನ್ನು ಸೇರುತ್ತಿದ್ದು, ಜೈಲುಗಳಲ್ಲಿ ಸ್ಥಳಾಭಾವದಿಂದಾಗಿ ಹೆಚ್ಚಿನ ಬಾಲಾಪರಾಧಿಗಳನ್ನು ಎಚ್ಚರಿಕೆ ನೀಡಿ ಅಥವಾ ದಂಡ ವಿಧಿಸಿ ಹೊರಗೆ ಕಳುಹಿಸಬೇಕಾದ ಪರಿಸ್ಥಿತಿಯುಂಟಾಗಿದೆ! ಕಳೆದ ಎರಡು ದಶಕಗಳಲ್ಲಿ ನಮ್ಮ ರಾಜಧಾನಿಯೊಂದರಲ್ಲೇ ಜೈಲುಗಳ ಸಂಖ್ಯೆ ಒಂದರಿಂದ ಇಪ್ಪತ್ತೈದಕ್ಕೇರಿದ್ದರೂ, ಅವುಗಳಲ್ಲಿ ಸ್ಥಳಾವಕಾಶದ ತೀವ್ರ ಅಭಾವವುಂಟಾಗಿದೆ.’

    ಅದೇ ಪ್ರವಾಸದಲ್ಲಿ ನಾವು ಪೆಸಿಫಿಕ್ ಸಾಗರವನ್ನು ದಾಟಿ ಆಸ್ಟ್ರೇಲಿಯಾ ಖಂಡದ ಕ್ವೀನ್ಸ್​ಲ್ಯಾಂಡ್​ಗೆ ಬಂದೆವು. ಅಲ್ಲಿನ ಪರಿಸ್ಥಿತಿಯೂ ಹೆಚ್ಚೇನೂ ಭಿನ್ನವಾಗಿರಲಿಲ್ಲ. ಅಲ್ಲಿಯೂ ಮಕ್ಕಳು ಮತ್ತು ಯುವಜನರಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿದ್ದು, ಈ ಸವಾಲನ್ನೆದುರಿಸಲು ಅಲ್ಲಿನ ಸರ್ಕಾರವು ಇಂತಹ ಮಕ್ಕಳ ಶಾಲಾ ಶಿಕ್ಷಣಕ್ಕಾಗಿ ಧನಸಹಾಯ ನೀಡುತ್ತಿದೆ. ಕ್ವೀನ್ಸ್​ಲ್ಯಾಂಡ್​ನಲ್ಲಿರುವ ನಮ್ಮ ತೂಗುಲಾವಾ ಶಾಲೆಯಲ್ಲಿ ಇಂತಹ ಇನ್ನೂರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದ್ದು, ಸರ್ಕಾರ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಹತ್ತು ಸಾವಿರ ಡಾಲರ್ (ಸುಮಾರು ಐದು ಲಕ್ಷ ರೂಪಾಯಿ. ಆಗಿನ ಲೆಕ್ಕ) ಧನಸಹಾಯ ಕೊಡುತ್ತಿದೆ. ಶಿಕ್ಷಣಕ್ಕಾಗಿ ಬಜೆಟ್​ನಲ್ಲಿ ಜಿಡಿಪಿಯ ಕೇವಲ ಶೇಕಡಾ ಮೂರರಷ್ಟು ಹಣ ಮೀಸಲಾಗಿಟ್ಟು, ಪ್ರತಿ ಮಗುವಿಗೆ ವಾರ್ಷಿಕ ಕೇವಲ 12 ಸಾವಿರ ರೂಪಾಯಿಗಳನ್ನು ವ್ಯಯ ಮಾಡುತ್ತಿರುವ ನಮ್ಮ ದೇಶದ ದೃಷ್ಟಿಯಿಂದ, ಈ ಮೊತ್ತ ಬಹು ದುಬಾರಿಯೆನಿಸಬಹುದು. ಆದರೆ, ಕ್ವೀನ್ಸ್​ಲ್ಯಾಂಡ್​ನಲ್ಲಿ ಒಂದು ಮಗುವನ್ನು ಜೈಲಿನಲ್ಲಿರಿಸಲು ಸರ್ಕಾರ ಇಪ್ಪತ್ತು ಸಾವಿರ ಡಾಲರ್ ಅಥವಾ ಹತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆಯೆಂದು ನಮ್ಮ ತೂಗುಲಾವಾ ಶಾಲೆಯ ಧರ್ಮದರ್ಶಿಯೊಬ್ಬರು ತಿಳಿಸಿದರು!

    ದ್ವೀಪರಾಷ್ಟ› ಶ್ರೀಲಂಕಾ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯಿಂದ ಹಿಡಿದು ವಿಶ್ವವಿದ್ಯಾನಿಲಯದವರೆಗೆ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ಆದರೆ, ಅಲ್ಲಿ ವರ್ತಮಾನದಲ್ಲಿ ಉದ್ಭವವಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ, ವಿದ್ಯಾವಂತರು ಹೆಚ್ಚಿನ ಧನಸಂಪಾದನೆಗಾಗಿ ಪರದೇಶಗಳಿಗೆ ಹೋಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇತ್ತೀಚಿನ ಶ್ರೀಲಂಕಾ ಪ್ರವಾಸದ ಸಮಯದಲ್ಲಿ, ಇಂಥ ಕನಿಷ್ಠ ಮೂರು ಜನರನ್ನು ನಾನು ಭೇಟಿಯಾದೆ!

    ಮೇಲೆ ಹೇಳಿದ ಮೂರು ರಾಷ್ಟ›ಗಳಿಗಿಂತ ತೀರಾ ವಿಭಿನ್ನವಾದ ಸಮಸ್ಯೆಯನ್ನು ಸಿಂಗಪುರದ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿದೆ. ಸಿಂಗಪುರದ ಶಿಕ್ಷಣ ಸಚಿವಾಲಯ ವತಿಯಿಂದ ಇತ್ತೀಚೆಗೆ ನಡೆದ ಮಾನಸಿಕ ಆರೋಗ್ಯದ ಕುರಿತಾದ ವಿಚಾರ ಸಂಕಿರಣದಲ್ಲಿ ನಾನು ಭಾಗವಹಿಸಿದ್ದೆ. ಮಾನಸಿಕ ಅನಾರೋಗ್ಯದ ಕಾರಣದಿಂದಾಗಿ ದಿನೇದಿನೆ ಬೆಳೆಯುತ್ತಿರುವ ಯುವಜನರ ಆತ್ಮಹತ್ಯೆ ಪ್ರಮಾಣ ಅಲ್ಲಿನ ದೊಡ್ಡ ಸಮಸ್ಯೆಯಾಗಿದೆ. ಶ್ರೀಮಂತ ಕುಟುಂಬಗಳ ಮಕ್ಕಳೂ ಇದರಲ್ಲಿ ಸೇರಿದ್ದಾರೆ. ಆತ್ಮಹತ್ಯೆಗಳಿಗೆ ಮುಖ್ಯ ಕಾರಣ, ಎಳೆಯ ಮನಸ್ಸುಗಳನ್ನು ತೀವ್ರ ಒತ್ತಡಕ್ಕೆ ಒಳಪಡಿಸುವ ಅಲ್ಲಿನ ಕಠಿಣ ಸ್ಪರ್ಧಾತ್ಮಕ ವಾತಾವರಣ.

    ಇಲ್ಲಿ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಶಿಕ್ಷಣಕ್ಕಾಗಿ ಹೆಚ್ಚಿನ ಹಣ ವ್ಯಯ ಅಥವಾ ಉಚಿತ ಶಿಕ್ಷಣ ನೀಡುವುದರಿಂದಾಗಲೀ ಈ ಸಮಸ್ಯೆಗಳನ್ನು ಪರಿಹರಿಸಿ, ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಯುವ ಮನಸ್ಸುಗಳಲ್ಲಿ ವೈಯಕ್ತಿಕ, ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆ ಬೆಳೆಸುವುದರ ಮೂಲಕವಷ್ಟೇ ಅದು ಸಾಧ್ಯ. ಅಂತಹ ನೈತಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ಮಾತ್ರ ಇಂದಿನ ಸಾಂಕ್ರಾಮಿಕೋತ್ತರ ಜಗತ್ತನ್ನು ನಾಗರಿಕತೆಗಳ ಮಹಾದುರಂತ (civilisational catastrophe) ದಿಂದ ರಕ್ಷಿಸಬಹುದಾಗಿದೆ.

    ಕೋವಿಡ್ ಸಾಂಕ್ರಾಮಿಕದಿಂದಾಗಿ ಶಾಲೆಗಳಿಂದ ಹೊರಬಿದ್ದಿರುವ 24 ದಶಲಕ್ಷ ಮಕ್ಕಳನ್ನು ಪುನಃ ಶಾಲೆಗಳಿಗೆ ಸೇರಿಸುವುದು ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯವಾಗಬಹುದು. ಆದರೆ, ಮೌಲ್ಯಾಧಾರಿತ ಶಿಕ್ಷಣದ ಮೂಲಕ ಅವರಲ್ಲಿ ನೈತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆ ಮೂಡಿಸುವುದು ದೊಡ್ಡ ಸವಾಲಾಗಿದೆ. ನನ್ನ ಪ್ರಕಾರ, ಇದು ಇಪ್ಪತ್ತೊಂದನೆಯ ಶತಮಾನದ ಶಿಕ್ಷಣದ ಪ್ರಧಾನ ಗುರಿಯಾಗಬೇಕು. ನೈತಿಕ ಶಿಕ್ಷಣವನ್ನು ಜಾಗತಿಕ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವನ್ನಾಗಿ ಮಾಡುವುದರಿಂದ ಮಾತ್ರ ಈ ಗುರಿ ಸಾಧಿಸಬಹುದು. ನೈತಿಕತೆ ಎಂದರೆ ಸದಾ ಸರ್ವತ್ರ, ಸರಿಯಾದ ರೀತಿಯಲ್ಲಿ ಯೋಚಿಸುವ, ಮಾತನಾಡುವ ಮತ್ತು ವರ್ತಿಸುವ ಸಾಮರ್ಥ್ಯ. ವಿದ್ಯಾರ್ಥಿಗಳಲ್ಲಿ ಇಂತಹ ಸಾಮರ್ಥ್ಯ ಬೆಳೆಸುವ ಶಿಕ್ಷಣವೇ ನೈತಿಕ ಶಿಕ್ಷಣ. ಇತರ ರೀತಿಯ ಶಿಕ್ಷಣಗಳಲ್ಲಿರುವಂತೆಯೇ, ನೈತಿಕ ಶಿಕ್ಷಣದಲ್ಲಿಯೂ ಮೂರು ಅಂಶಗಳಿವೆ – ಪಠ್ಯಕ್ರಮ, ಬೋಧನಾ ವಿಧಾನ ಹಾಗೂ ಮೌಲ್ಯಮಾಪನ (curriculum, pedagogy and assessment).

    ಪಠ್ಯಕ್ರಮ: ಭಾರತದಲ್ಲಿ ಪ್ರಾಚೀನ ಕಾಲದಿಂದಲೂ, ಶಿಕ್ಷಣವು ಕೇವಲ ಲೌಕಿಕ ಜ್ಞಾನದ ಸಂಗ್ರಹವಾಗಿರದೆ, ಪರಿವರ್ತನಾಶೀಲ ಸಂಸ್ಕಾರಪ್ರದಾಯಕ ಪ್ರಕ್ರಿಯೆಯಾಗಿತ್ತು. ಲೌಕಿಕ ಜ್ಞಾನದ ಗಳಿಕೆ ಶಿಕ್ಷಣದ ಒಂದು ಸಣ್ಣ ಗುರಿಯಾಗಿದ್ದು, ಅದರ ಉನ್ನತ ಗುರಿಯೆಂದರೆ, ದಿವ್ಯ ಆತ್ಮಸ್ವರೂಪದ ಪರಮ ಜ್ಞಾನದ ಗಳಿಕೆ; ಅದರಿಂದ ಮಾತ್ರ ವ್ಯಕ್ತಿಯ ಪೂರ್ಣ ಸುಖ ಮತ್ತು ಜೀವನ ಸಾಫಲ್ಯ ಹಾಗೂ ಸಮಾಜದ ಸಮೃದ್ಧಿ, ಸಮರಸ ಮತ್ತು ಭದ್ರತೆಗಳು ಸಾಧ್ಯ. ಮುಂಡಕೋಪನಿಷತ್ತಿನಲ್ಲಿ ಇಂತಹ ಎರಡು ರೀತಿಯ ಶಿಕ್ಷಣಗಳನ್ನು ಅಪರಾ ಮತ್ತು ಪರಾ ವಿದ್ಯೆಗಳೆಂದು ಹೇಳಲಾಗಿದೆ. ನೈತಿಕ ಶಿಕ್ಷಣ ಪರಾ ವಿದ್ಯೆಯ ಒಂದು ಅಂಶ.

    ಹೀಗಾಗಿ, ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣದ ಅಂಶವನ್ನು ಹೊಂದಿರುವ ಪರಾ ವಿದ್ಯೆಯನ್ನು ಸೇರಿಸಲು ಆಳವಾದ ಪರಿಶೋಧನೆಯ ಅಗತ್ಯವಿದೆ. ಆದರೆ, ಬಲವಾದ ಆಧ್ಯಾತ್ಮಿಕ ಬುನಾದಿಯಿಲ್ಲದೆ, ನೈತಿಕ ಶಕ್ತಿಯು ಜೀವನದ ಪರೀಕ್ಷೆಗಳ ಎದುರಿನಲ್ಲಿ ದೃಢವಾಗಿ ನಿಲ್ಲಲಾರದು. ಆದ್ದರಿಂದ, ಸರ್ವರ ಆಧ್ಯಾತ್ಮಿಕ ಏಕತೆ (spiritual unity of all)ಯ ಆಧಾರದಲ್ಲಿ ನೈತಿಕ ಶಿಕ್ಷಣದ ಪಠ್ಯಕ್ರಮ ರೂಪಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ.

    ಆಧ್ಯಾತ್ಮಿಕತೆಯೆಂದರೆ ಯಾವುದೇ ಮತ ಅಥವಾ ಧರ್ಮವಲ್ಲ; ಸರ್ವ ಮತ-ಧರ್ಮಗಳ ಬುನಾದಿ. ಪಠ್ಯಕ್ರಮದಲ್ಲಿ ಎಲ್ಲಾ ಮತ-ಧರ್ಮಗಳ ಉತ್ತಮ ಯೋಚನೆಗಳ ಬಗ್ಗೆ ಮೆಚ್ಚುಗೆಯು ಸಹಾಯಕ. ಆದರೆ, ಅದಕ್ಕಿಂತಲೂ ಮಿಗಿಲಾಗಿ ಸಕಲ ಸೃಷ್ಟಿಯ ದಿವ್ಯತೆಯ ಪರಿಜ್ಞಾನವನ್ನು ಕಲಿಸುವುದು ಬಹು ಮುಖ್ಯ. ಇದು ಸೃಷ್ಟಿಯಲ್ಲಿನ ಎಲ್ಲರನ್ನೂ, ಎಲ್ಲವನ್ನೂ ಗೌರವ ಮತ್ತು ಪೂಜ್ಯಭಾವದಿಂದ ನೋಡಲು ಸಹಾಯ ಮಾಡುವುದಲ್ಲದೆ, ಅಂತಿಮವಾಗಿ ‘ಎಲ್ಲರಿಗೂ ಸಹಾಯ ಮಾಡಿ, ಯಾರಿಗೂ ಹಾನಿ ಮಾಡಬೇಡಿ’ ಎಂಬ ಸರ್ವಜನಹಿತದ ಜೀವನಕ್ರಮವನ್ನು ರೂಪಿಸುತ್ತದೆ.

    ನಮ್ಮ ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಂ ವಿದ್ಯಾಸಂಸ್ಥೆಗಳಲ್ಲಿ, ಹತ್ತು ಸಾರ್ವತ್ರಿಕ ಮೌಲ್ಯಗಳನ್ನು ಆಳವಾಗಿ ಅಧ್ಯಯನ ಮಾಡಲು ಸಹಾಯಕವಾಗುವಂತೆ ಒಂದರಿಂದ ಹನ್ನೆರಡನೆಯ ತರಗತಿಯವರೆಗೆ ನೈತಿಕ ಶಿಕ್ಷಣದ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿದ್ದೇವೆ. ಈ ಹತ್ತು ಮೌಲ್ಯಗಳೆಂದರೆ – ಸತ್ಯ, ಸದಾಚಾರ, ಪ್ರೇಮ, ಶಾಂತಿ, ಅಹಿಂಸೆ, ದೇಶಭಕ್ತಿ, ಏಕತಾಭಾವ, ಸೇವಾಭಾವ, ಪರಿಸರ ಪ್ರಜ್ಞೆ ಮತ್ತು ಆಧ್ಯಾತ್ಮಿಕ ಜಾಗೃತಿ.

    ಬೋಧನಾ ವಿಧಾನ: ನೈತಿಕ ಶಿಕ್ಷಣದ ಮುಂದಿನ ಹಂತವೆಂದರೆ, ಪಠ್ಯಕ್ರಮದ ಪರಿಣಾಮಕಾರಿ ಬೋಧನಾ ವಿಧಾನ. ನೈತಿಕ ಶಿಕ್ಷಣವೆಂದರೆ ಕೇವಲ ತಿಳಿವಳಿಕೆಯ ಸಂಗ್ರಹವಾಗಿರದೆ, ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಪರಿವರ್ತನೆ ತರುವ ಪ್ರಕ್ರಿಯೆ. ಆದ್ದರಿಂದ, ನೈತಿಕ ಮೌಲ್ಯಗಳ ಬೋಧನೆಯು ದೈನಂದಿನ ಜೀವನದಲ್ಲಿ ಅವುಗಳ ಆಚರಣೆಯ ಮೂಲಕ ಮಾತ್ರ ಸಫಲವಾಗುತ್ತದೆ. ಅಧ್ಯಾಪಕರು ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕೇವಲ ತಿಳಿಸುವುದಷ್ಟೇ ಅಲ್ಲದೆ, ಅವುಗಳನ್ನು ತಮ್ಮ ಜೀವನದಲ್ಲಿ ಪಾಲಿಸಿ ತೋರಿಸಬೇಕಾಗುತ್ತದೆ. ವಾಸ್ತವಿಕ ಜೀವನದಲ್ಲಿ ಆದರ್ಶ ವ್ಯಕ್ತಿಗಳ (role models) ನಿದರ್ಶನಗಳಿಲ್ಲದಿರುವುದು ಮುಖ್ಯ ಸಮಸ್ಯೆಯಾಗಿದೆ. ಆದ್ದರಿಂದ ಲಭ್ಯವಿರುವ ಆದರ್ಶ ವ್ಯಕ್ತಿಗಳ ಮೂಲಕ ಅಧ್ಯಾಪಕರಿಗೆ ಸ್ಪೂರ್ತಿ ಮತ್ತು ತರಬೇತಿ ನೀಡುವುದು ಅತಿ ಅಗತ್ಯ.

    ಅಲ್ಲದೆ, ಪಾಲಕರ ಪಾತ್ರವೂ ನಿರ್ಣಾಯಕ. ಮಕ್ಕಳು ಶಾಲೆಯಲ್ಲಿ ಕಲಿತ ನೈತಿಕ ಶಿಕ್ಷಣದ ಮೌಲ್ಯಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ, ಆ ಪ್ರಕ್ರಿಯೆಯಲ್ಲಿ ಪಾಲಕರು ಕ್ರಿಯಾತ್ಮಕವಾಗಿ ಪಾಲುಗೊಳ್ಳಲೇಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರಿಗಾಗಿ ನಮ್ಮ ಗುರುಕುಲಗಳ ವತಿಯಿಂದ ನಡೆಯುತ್ತಿರುವ ಗುರು ವಿಕಾಸ ಶಿಕ್ಷಕರ ತರಬೇತಿ ಹಾಗೂ ಮಕ್ಕಳ ಪಾಲನೆ-ಪೋಷಣೆ (parenting) – ಪೋಷಕರಿಗೆ ಮಾರ್ಗದರ್ಶನ, ಈ ಎರಡು ಕಾರ್ಯಕ್ರಮಗಳು ನಮಗೆ ಬಹಳ ಸಹಕಾರಿಯಾಗಿವೆ.

    ಮೌಲ್ಯಮಾಪನ: ನೈತಿಕ ಶಿಕ್ಷಣದ ಮೂರನೆಯ ಹಂತವೇ ಮೌಲ್ಯಮಾಪನ. ನೈತಿಕ ಶಿಕ್ಷಣವು ಪರಿವರ್ತನಾ ಪ್ರಕ್ರಿಯೆಯಾಗಿರುವುದರಿಂದ, ಮಗುವಿನಲ್ಲಿ ಹೃದಯದ ಪರಿವರ್ತನೆ ಎಷ್ಟರ ಮಟ್ಟಿಗೆ ಆಗಿದೆಯೆಂಬುದೇ ಕಲಿಕೆಯ ಮಾಪನವಾಗಿದೆ. ಲಿಖಿತ ಪರೀಕ್ಷೆಯು ಮಗುವಿನ ಮೌಲ್ಯಗಳ ಅರಿವಿನ ಬಗ್ಗೆ ಮಾತ್ರ ತಿಳಿಸುತ್ತದೆ. ಆದರೆ, ನಿಜವಾದ ಪರೀಕ್ಷೆಯು ಮಗುವಿನ ನಡವಳಿಕೆಯಲ್ಲಿ ಉತ್ತಮ ಪರಿವರ್ತನೆ ಇದೆಯೇ ಇಲ್ಲವೇ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಆದ್ದರಿಂದ, ನಮ್ಮ ಪರಿಶ್ರಮವು ಕೇವಲ ಪಠ್ಯಪುಸ್ತಕಗಳನ್ನು ಹೊರತರುವುದು ಅಥವಾ ತರಗತಿ ಬೋಧನೆಗಳಿಗೆ ಸೀಮಿತವಾಗದೆ ಸಂವಾದಾತ್ಮಕ (interactive) ಕಲಿಕೆ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕ್ರಿಯಾತ್ಮಕವಾಗಿ ಕಲಿಸಿಕೊಡಬೇಕು. ಜೀವನಗಳಲ್ಲಿ ಉನ್ನತ ಮೌಲ್ಯಗಳನ್ನು ಆಚರಿಸಿದ, ಆಚರಿಸುತ್ತಿರುವ ಮಹಾನ್ ಸ್ತ್ರೀ-ಪುರುಷರ ನಿದರ್ಶನಗಳ ಅಧ್ಯಯನವು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ನಿಜಜೀವನ ಸನ್ನಿವೇಶಗಳಲ್ಲಿ (real life situations) ಮಹಾನ್ ವ್ಯಕ್ತಿಗಳ ವರ್ತನೆ ಮಕ್ಕಳಿಗೆ ಆದರ್ಶವಾಗುತ್ತದೆ. ಸಂವಾದಾತ್ಮಕ ಬೋಧನೆಯು ಮಕ್ಕಳ ಯೋಚನಾ ವಿಧಾನವನ್ನು ರೂಪಿಸುವಲ್ಲಿ ಸಹಾಯಕವಾಗುತ್ತದೆ. ಸಮಾಜಸೇವಾ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡುವುದಷ್ಟೇ ಅಲ್ಲದೆ, ನಿಜಜೀವನದಲ್ಲಿ ಅವರನ್ನು ಪರೀಕ್ಷೆಗೊಳಪಡಿಸುತ್ತವೆ.

    ನೈತಿಕ ಶಿಕ್ಷಣದಲ್ಲಿ ಮಕ್ಕಳು, ಅಧ್ಯಾಪಕರು ಮತ್ತು ಪೋಷಕರ ಸಹಭಾಗಿತ್ವ ಬಹಳ ಮುಖ್ಯ. ಮೌಲ್ಯಮಾಪನದಲ್ಲಿಯೂ ಇವರೆಲ್ಲರ ಸಹಭಾಗಿತ್ವವಿರಬೇಕು. ಅಧ್ಯಾಪಕರು ಮತ್ತು ಪಾಲಕರು ಕೆಲವು ನೈಜಜೀವನದ ಸನ್ನಿವೇಶಗಳನ್ನು ಸೃಷ್ಟಿಸಿ ತನ್ಮೂಲಕ ಮಗುವಿನ ಮಾನಸಿಕ ದೃಢತೆ ಮತ್ತು ಮೌಲ್ಯಾಭ್ಯಾಸದ ಪರಿಧಿಯನ್ನು ಪರೀಕ್ಷಿಸಬಹುದು. ನೈತಿಕ ಶಿಕ್ಷಣದ ಮೌಲ್ಯಮಾಪನದ ಬಗ್ಗೆ ನುರಿತ ವ್ಯಕ್ತಿಗಳಿಂದ ಆಳವಾದ ಪರಿಶೋಧನೆ-ಸಂಶೋಧನೆಗಳ ಅಗತ್ಯವಿದೆ. ನೈತಿಕ ಶಿಕ್ಷಣವು ಸಮಗ್ರ ಪಠ್ಯಕ್ರಮ, ಕ್ರಿಯಾತ್ಮಕ ಮತ್ತು ಸಂವಾದಾತ್ಮಕ ಬೋಧನಾ ಪದ್ಧತಿ ಹಾಗೂ ಸೈದ್ಧಾಂತಿಕ ಮತ್ತು ವ್ಯಾವಹಾರಿಕ ಮೌಲ್ಯಮಾಪನದ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡಲ್ಲಿ ಸಂಪೂರ್ಣ ಯಶಸ್ಸನ್ನು ಸಾಧಿಸಬಹುದು.

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಸಾವಿರಾರು ಕೋಟಿ ರೂ. ವಂಚಿಸಿದ ಮಲ್ಯ-ಮೋದಿಯನ್ನೇ ಏನೂ ಮಾಡಿಲ್ಲ; 3-4 ಕೋಟಿ ಮೋಸ ಮಾಡಿದ ನನ್ನ ಚಿಂತೆ ನಿಮಗ್ಯಾಕೆ?

    ಲಾಡ್ಜ್​ನಲ್ಲಿ ನೇತಾಡುತ್ತಿತ್ತು ಬಿಎಂಟಿಸಿ ಚಾಲಕನ ಶವ; ಡೋರ್ ಲಾಕ್ ಮಾಡಿ ಹೋದ ಯುವತಿ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts