ಕೋನಾಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಮೊಳಕಾಲ್ಮೂರು: ಉದ್ಯೋಗ ಸಬಲೀಕರಣದಿಂದ ಗ್ರಾಮೀಣರಿಗೆ ಹೊಸ ಬದುಕು ಸೃಷ್ಟಿಸುತ್ತೇವೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಕೋನಾಪುರದ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತದಿಂದ ತಾಲೂಕಿನ ಕೋನಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೌಢ್ಯ, ಕಂದಾಚಾರ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಗೆ ಅನಕ್ಷರತೆ ಮೂಲ. ನಿಮ್ಮ ಕಷ್ಟಗಳ ಸರಮಾಲೆ ಭವಿಷ್ಯದ ಪೀಳಿಗೆಗೆ ಮುಂದುವರೆಯುವುದು ಬೇಡ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸರ್ಕಾರ ಹಲವು ಸೌಲಭ್ಯ ನೀಡಿದ್ದು, ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಮಾತನಾಡಿ, ಪ್ರತಿಯೊಬ್ಬರೂ ಅಕ್ಷರಜ್ಞಾನ ಪಡೆದರೆ, ವಿವಿಧ ರಂಗಗಳ ತಿಳಿವಳಿಕೆ ಪಡೆಯಬಹುದು. ಇದರಿಂದ ಆರ್ಥಿಕ ಪ್ರಗತಿ, ಸ್ವಸ್ಥ, ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಸಿಇಒ ಪಿ.ಎನ್. ರವೀಂದ್ರ ಮಾತನಾಡಿ, ಆರ್ಥಿಕ ಸಬಲತೆಗೆ ಪರ್ಯಾಯ ನೈತಿಕ ಮಾರ್ಗ ಶೋಧಿಸುವರು ಯಶಸ್ವಿಯಾಗುತ್ತಾರೆ. ಕೂಲಿ ಅರಸಿ ಗುಳೆ ಹೋಗುವ ಚಿಂತನೆ ಬಿಡಿ. ದುಡಿಯುವ ಕೈಗಳಿಗೆ ನರೇಗಾ ಯೋಜನೆ ಅಡಿ ಸಮುದಾಯ ಆಧಾರಿತ ಕೆಲಸ ನೀಡುತ್ತೇವೆ ಎಂದು ತಿಳಿಸಿದರು.

ನರೇಗಾ ಕಾಮಗಾರಿಗೆ ಜೆಸಿಬಿ ಯಂತ್ರ ಬಳಸುವಂತಿಲ್ಲ. ಕೆರೆ, ಗೋಕಟ್ಟೆ, ಕೃಷಿಹೊಂಡ, ಜಮೀನು ಅಭಿವೃದ್ಧಿ ನಡೆಯಲಿ. ಪ್ರತಿಯೊಬ್ಬ ಫಲಾನುಭವಿಗೆ 150 ದಿನ ಕೆಲಸ ನೀಡುತ್ತೇವೆ. ಜಾಬ್ ಕಾರ್ಡ್ ಅಗತ್ಯವಿಲ್ಲ. ಕೆಲಸಕ್ಕಾಗಿ ಬಿಳಿ ಹಾಳೆಯಲ್ಲಿ ಬ್ಯಾಂಕ್ ಖಾತೆ ಸಂಖ್ಯೆ ಸಹಿತ ಪಿಡಿಒಗೆ ಅರ್ಜಿ ಸಲ್ಲಿಸಿದ ದಿನವೇ ಕೆಲಸಕ್ಕೆ ಹಾಜರಾಗಬಹುದು. ಕುಂಟು ನೆಪ ಹೇಳಿ ಕೆಲಸ ನಿರಾಕರಿಸುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇನೆ. ತಹಸೀಲ್ದಾರ್ ಎಸ್. ಅನಿತಾಲಕ್ಷ್ಮೀ ಮಾತನಾಡಿ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಸಂಪ್ರದಾಯ ಕೈಬಿಡಬೇಕು ಎಂದರು.

ಕಾನೂನು ಪಾಲನೆ ಕುರಿತು ಎಸ್ಪಿ ಡಾ.ಕೆ.ಅರುಣ್ ಜಾಗೃತಿ ಮೂಡಿಸಿದರು. ಗ್ರಾಪಂ ಅಧ್ಯಕ್ಷೆ ರಾಮುಲಕ್ಕ, ಇಒ ಡಾ.ಶ್ರೀಧರ್, ಬಿಇಒ ಎನ್. ಸೋಮಶೇಖರ್, ಉಪನಿರ್ದೇಶಕ ಕೆ.ಎಸ್. ರಾಜಾನಾಯ್ಕ, ವಕೀಲರ ಸಂಘದ ಉಪಾಧ್ಯಕ್ಷ ಪಿ. ಪಾಪಯ್ಯ, ಕಾರ್ಯದರ್ಶಿ ಮಂಜುನಾಥ ಇತರರಿದ್ದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಮಹಿಳೆ ಶಿಕ್ಷಣದ ಮುಖ್ಯವಾಹಿನಿಗೆ ಬಂದರೆ ಕುಟುಂಬದ ಆರ್ಥಿಕ ಸುಧಾರಣೆ ಸಾಧ್ಯ. ಮಹಿಳೆರಿಗೂ ಆಸ್ತಿ ಹಕ್ಕಿದೆ. ಅಮಿಷಗಳಿಗೆ ಮರುಳಾಗಬೇಡಿ.
> ಆರ್. ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ