ಬಾಲ್ಯ ವಿವಾಹ ತಡೆ ಸಾರ್ವಜನಿಕರಿಂದ ಸಾಧ್ಯ

ಮೊಳಕಾಲ್ಮೂರು: ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಸಮಾಜದ ಧ್ಯೇಯವಾಗಬೇಕು ಎಂದು ತಹಸೀಲ್ದಾರ್ ಎಸ್. ಅನಿತಾಲಕ್ಷ್ಮಿ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವುದು ದಡ್ಡತನ. ಇದರರ್ಥ ಹಿಂದಿನ ಸಂಪ್ರದಾಯ, ಆಚರಣೆ ಕೈಬಿಡಬೇಕೆಂದಲ್ಲ. ಸಮಾಜ, ವ್ಯಕ್ತಿಗೆ ತೊಂದರೆ ಆಗುವಂತಹ ಆಚರಣೆ, ಮೂಢನಂಬಿಕೆ ತೊಡೆದು ಹಾಕಬೇಕು. ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳಾದಿಯಾಗಿ ಸಾರ್ವಜನಿಕರೂ ಪಣ ತೊಡಬೇಕು ಎಂದರು.
ಮಕ್ಕಳನ್ನು ದುಡಿಮೆ ಹಚ್ಚುವುದು, ಚಿಕ್ಕಂದಿನಲ್ಲೇ ವಿವಾಹ ಮಾಡುವುದು ಅಪರಾಧ. ಇದರಿಂದ ಪಾಲಕರು ದೂರವಿರಬೇಕು. ಅವರಿಗೆ ಶಿಕ್ಷಣ ಕೊಡಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಅನುಕೂಲ ಮಾಡಿಕೊಡಬೇಕು. ಇದರಿಂದ ಕುಟುಂಬ, ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಬಿಇಒ ಎನ್. ಸೋಮಶೇಖರ್ ಮಾತನಾಡಿ, ಗಡಿ ಭಾಗದ ಗ್ರಾಮಗಳಲ್ಲಿ ಈಗಲೂ ಬಾಲ್ಯ ವಿವಾಹ ಆಚರಣೆಯಲ್ಲಿರುವುದು ದುರಂತ. ಇದರ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು. ಮದುವೆ ಮಾಡಿ ಮಕ್ಕಳ ಬಾಲ್ಯ ಕಸಿದುಕೊಳ್ಳುವುದನ್ನು ಪ್ರತಿಯೊಬ್ಬರೂ ತಡೆಯಬೇಕು. ಈ ಕೆಲಸ ಮಾಡಿದವರನ್ನು ಕಾನೂನು ರಕ್ಷಿಸುತ್ತದೆ. ಈ ಬಗ್ಗೆ ಶಿಕ್ಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಿಡಿಪಿಒ ಹೊನ್ನಪ್ಪ, ವಕೀಲೆ ಅನುಸೂಯ, ಟಿಎಸ್‌ಡಬ್ಲ್ಯು ಟಿ. ಗುರುಮೂರ್ತಿ, ಉಪ ಪ್ರಾಚಾರ್ಯ ಸುರೇಂದ್ರನಾಥ, ಪ್ರೌಢಶಾಲೆ ಮುಖ್ಯಶಿಕ್ಷಕರಾದ ಷಣ್ಮುಖಪ್ಪ, ಎಂ. ಮಲ್ಲಿಕಾರ್ಜುನ, ಡಿ.ವಿ. ಕೃಷ್ಣಮೂರ್ತಿ, ಪಿಡಿಒಗಳಿದ್ದರು.