ನುಂಕೆಮಲೆ ಸಿದ್ದೇಶ್ವರಸ್ವಾಮಿ ಸಿಡಿ ಉತ್ಸವ

ಮೊಳಕಾಲ್ಮೂರು: ಪಟ್ಟಣದ ಉತ್ತರ ದಿಕ್ಕಿನ ಬೆಟ್ಟದ ತಪ್ಪಲಲ್ಲಿ ನೆಲೆಸಿರುವ ಶ್ರೀ ನುಂಕೆಮಲೆ ಸಿದ್ದೇಶ್ವರಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿಡಿ ಉತ್ಸವ ವಿಜೃಂಭಣೆಯಿಂದ ಜರುಗಿತು.

ಆಂಧ್ರಪ್ರದೇಶ ಹಾಗೂ ಕರ್ನಾಟಕದೆಲ್ಲೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು, ಸಿಡಿ ಕಂಬಕ್ಕೆ ಬಾಳೆಹಣ್ಣು, ಸೂರುಬೆಲ್ಲ, ಮೆಣಸು ತೂರಿ ಭಕ್ತಿ ಸಮರ್ಪಿಸಿದರು. ಸಿಡಿಕಾರ ಪ್ರದಕ್ಷಿಣೆ ಮಾಡಿ ಕೆಳಗಿಳಿಯುತ್ತಿದ್ದಂತೆ ಮಕ್ಕಳನ್ನು ಸಿಡಿ ಕಂಬಕ್ಕೆ ಮುಟ್ಟಿಸುವ ಕಾರ್ಯ ನೆರವೇರಿತು. ಹೀಗೆ ಮಾಡುವುದರಿಂದ ಭವರೋಗ ದೂರವಾಗಿ ಪೀಡೆ-ಪಿಶಾಚಿಗಳ ಕಾಟ ತಪ್ಪುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ವ್ಯಾಪಾರ ಜೋರು: ಜಾತ್ರೆಯಲ್ಲಿ ಮಕ್ಕಳ ಆಟಿಕೆ, ವಿಶೇಷವಾಗಿ ಖಾರ-ಮಂಡಕ್ಕಿ, ಬೆಂಡು-ಬೆತ್ತಾಸು, ಬಳೆ, ಗೃಹಬಳಕೆ ವಸ್ತುಗಳ ವ್ಯಾಪಾರ ಜೋರಾಗಿತ್ತು. 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಶ್ರೀಸ್ವಾಮಿ ಕೃಪೆಗೆ ಪಾತ್ರರಾದರು. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಸ್ಥಳೀಯ ಆಡಳಿತ ಮತ್ತು ದೇವಸ್ಥಾನ ಕಮಿಟಿ, ದೇವರ ದರ್ಶನ, ಕುಡಿವ ನೀರು ಸೇರಿ ಭಕ್ತರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿತ್ತು.

ಗುರುವಾರ ಬೆಟ್ಟದಲ್ಲಿ ಸಿದ್ದಬುಕ್ತಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

Leave a Reply

Your email address will not be published. Required fields are marked *