ಮೂಡಿಗೆರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ

ಮೂಡಿಗೆರೆ: ಕೇಂದ್ರ ರಸ್ತೆ ನಿಧಿ (ಸಿಆರ್​ಎಫ್) ಯೋಜನೆಯಡಿ ರಾಜ್ಯದಲ್ಲೇ ಅತೀ ಹೆಚ್ಚು ಅನುದಾನವನ್ನು ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ನೀಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಜನ್ನಾಪುರ ಸಮೀಪ ಮಣ್ಣೀಕೆರೆ ರಸ್ತೆಯಲ್ಲಿ ಜನ್ನಾಪುರ-ಮಣ್ಣೀಕೆರೆ, ಚಂದ್ರಾಪುರ-ಮಾಕೋನಹಳ್ಳಿ-ಸಂರ್ಪಸುವ 4 ಕಿಮೀ ರಸ್ತೆ ಅಭಿವೃದ್ಧಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಸಿಆರ್​ಎಫ್ ಯೋಜನೆಯಡಿ ಮೂಡಿಗೆರೆ ತಾಲೂಕಿಗೆ ಒಟ್ಟು 47 ಕೋಟಿ ರೂ. ಅನುದಾನ ನೀಡಿದೆ. ಇದರಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿಗೆ ಅವಕಾಶ ದೊರೆತಿದೆ. ಮಲೆನಾಡು ಭಾಗದಲ್ಲಿ ಮಳೆ ಬಂದರೆ ರಸ್ತೆ ಅಭಿವೃದ್ಧಿಗೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಸೂಕ್ತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ಸಂಪರ್ಕ ಜಾಲ ವಿಸ್ತರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಉಜ್ವಲ ಯೋಜನೆಯಡಿ ಗ್ಯಾಸ್, ಶೌಚಗೃಹ ನಿರ್ವಣ, ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸೌಲಭ್ಯ, ಕೃಷಿ ಸಿಂಚನ ಯೋಜನೆಯಡಿ ಶೇ.90 ರಷ್ಟು ಹನಿ ನೀರಾವರಿಗೆ ನೀಡಲಾಗುವುದು ಎಂದು ತಿಳಿಸಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಜನ್ನಾಪುರದಿಂದ ಮಣ್ಣೀಕೆರೆ ಮಾರ್ಗದ 4 ಕಿ.ಮೀ ರಸ್ತೆಯನ್ನು 2.50 ಕೋಟಿ ರೂ.ಅನುದಾನದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಶೀಘ್ರ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಾಪಂ ಅಧ್ಯಕ್ಷ ಕೆ.ಸಿ.ರತನ್, ಜಿಪಂ ಸದಸ್ಯೆ ಅಮಿತಾ ಮುತ್ತಪ್ಪ, ಗ್ರಾಪಂ ಅಧ್ಯಕ್ಷ ಸುನೀಲ್ ನಿಡಗೋಡು, ತಾಪಂ ಉಪಾಧ್ಯಕ್ಷೆ ಸವಿತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್​ಕುಮಾರ್, ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ, ಬಿಜೆಪಿ ಅಧ್ಯಕ್ಷ ಪ್ರಮೋದ್ ದುಂಡುಗ, ಮುಖಂಡರಾದ ಜೆ.ಎಸ್.ರಘು, ವಿನೋದ್ ಕಣಚೂರು, ವಿಜೇಂದ್ರ, ಶಂಕರಾಚಾರ್ಯ, ಶೇಷಪ್ಪ, ಸಣ್ಣಪ್ಪ, ವೆಂಕಟೇಶ್, ಭರತ್ ವಾಲೆಕರಟಿ, ಪ್ರವೀಣ್, ನವಕರ್ನಾಟಕ ಯುವ ಶಕ್ತಿ ಸಂಘಟನೆ ಪದಾಧಿಕಾರಿಗಳು, ಪಿಡಿಒ ಮಹೇಶ್ ಇದ್ದರು.

ಗೋಣಿಬೀಡು, ಹಂತೂರುರಿಗೆ ಭೇಟಿ: ತಾಲೂಕಿನ ಗೋಣಿಬೀಡು ಹಾಗೂ ಹಂತೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ಜಿಪಂ ಸದಸ್ಯೆ ಅಮಿತಾ ಮುತ್ತಪ್ಪ ಅವರ ವಿಶೇಷ ಅನುದಾನದಲ್ಲಿ 1.35 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರೀಶಿಲಿಸಿದರು. ಉಗ್ಗೇಹಳ್ಳಿಯಿಂದ ಕನ್ನೇಹಳ್ಳಿ ರಸ್ತೆ, ಹೊಸಪುರ ರಸ್ತೆ, ಹೊಸಪುರದಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿರುವ ಗಿರಿಜನರ ಸಾಂಸ್ಕೃತಿಕ ಭವನ, ಆನೆದಿಬ್ಬ ರಸ್ತೆ ದೇವರಮಕ್ಕಿ ರಸ್ತೆ ಸಹಿತ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.

ಗ್ರಾಮಸಡಕ್ ಅನುದಾನ ಕಡಿತ: ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಅಡಿ ಹಿಂದೆ ಬರುತ್ತಿದ್ದ ಅನುದಾನ ಕಡಿತ ಮಾಡಲಾಗಿದೆ. ಶ್ರೀಕಂಠಪ್ಪನವರ ಕಾಲದಲ್ಲಿ ಆ ನಂತರದ ದಿನಗಳಲ್ಲಿ ಸಾಕಷ್ಟು ಅನುದಾನ ಲಭ್ಯವಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ನೀಡಿರುವ ಅನುದಾನದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಬೇರೆ ರಾಜ್ಯಗಳಿಗೆ ಈಗ ಅನುದಾನ ಸರಿದೂಗಿಸಲು ನಮ್ಮ ರಾಜ್ಯಕ್ಕೆ ಪ್ರಧಾನ ಮಂತ್ರಿ ಗ್ರಾಮಸಡಕ್ ಅನುದಾನ ಕಡಿತಗೊಂಡಿದೆ.