ಐದು ಅಂಗಡಿಗಳಲ್ಲಿ ಸರಣಿ ಕಳ್ಳತನ

ಮೂಡಿಗೆರೆ: ಪಟ್ಟಣದ ಕೆಎಂ ರಸ್ತೆಯ ನಾಲ್ಕೈದು ಅಂಗಡಿಗಳಲ್ಲಿ ಶನಿವಾರ ರಾತ್ರಿ ಸರಣಿ ಕಳವು ನಡೆದಿದ್ದು, ಚಿಲ್ಲರೆ ಹಣ ದೋಚಿದ್ದಾರೆ. ಕೃತ್ಯ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮಂಚೇಗೌಡ, ಕೇಶವ ಸುವರ್ಣ ವೈನ್ಸ್, ಹಾಸನದ ನಾರಾಯಣ ಗೌಡರ ಬಾರ್, ಉಮರ್ ಅವರ ಮೆಡಿಕಲ್ಸ್, ಪಟ್ಟಣ ಹೊರವಲಯ ಬಿಳಗುಳದ ಎ.ಸಿ.ಆಸಿಫ್ ಎಂಬುವವರ ಹಾರ್ಡ್​ವೇರ್ ಶಾಪ್​ಗಳ ರೋಲಿಂಗ್ ಶೆಟರ್ ಮುರಿದು ಕಳ್ಳರು ಒಳನುಗ್ಗಿ ಹಣಕ್ಕಾಗಿ ಜಾಲಾಡಿದ್ದಾರೆ.

ಕಳ್ಳರು ತಡರಾತ್ರಿ 1ರಿಂದ 2 ಗಂಟೆ ಅವಧಿಯಲ್ಲಿ ಈ ಎಲ್ಲ ಅಂಗಡಿಗಳಿಗೂ ನುಗ್ಗಿರುವುದು ಸಿಸಿ ಟಿವಿ ದೃಶ್ಯಾವಳಿಯಿಂದ ಗೊತ್ತಾಗಿದೆ. 4 ಮಂದಿ ಯುವಕರು ಸ್ವಿಫ್ಟ್ ಡಿಸೈರ್ ಕಾರೊಂದರಲ್ಲಿ ಬಂದು ಕೃತ್ಯವೆಸಗಿದ್ದಾರೆ. ಎಲ್ಲ ಅಂಗಡಿಗಳಿಂದ ಸೇರಿ ಅಂದಾಜು 50 ಸಾವಿರ ರೂ. ನಗದು ದೋಚಿದ್ದಾರೆ. ಕಳ್ಳರು ಕೆ.ಎಂ.ರಸ್ತೆಯ ವೈನ್​ಶಾಪ್​ಗಳನ್ನೇ ಗುರಿಯಾಗಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮೂಡಿಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂಡಿಗೆರೆ ಸಿಪಿಐ ಜಗದೀಶ್, ಠಾಣಾಧಿಕಾರಿ ರಾಜಶೇಖರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.

ಎರಡು ವರ್ಷಗಳ ಹಿಂದೆ ಉಮರ್ ಅವರ ಮೆಡಿಕಲ್ ಸೇರಿ 3 ಅಂಗಡಿಗಳನ್ನು ಇದೇ ರೀತಿ ರೋಲಿಂಗ್ ಶೆಟರ್ ಮುರಿದು ಚಿಲ್ಲರೆ ದೋಚಿದ್ದರು. ಮತ್ತೊಮ್ಮೆ ಅದೇ ರೀತಿಯ ಕಳ್ಳತನ ನಡೆದಿದೆ. ಪಟ್ಟಣದಲ್ಲಿ ರಾತ್ರಿ ವೇಳೆ ಅನುಮಾನಾಸ್ಪದವಾಗಿ ತಿರುಗಾಡುವವರ ಮೇಲೆ ಇತ್ತೀಚೆಗೆ ಪೊಲೀಸರು ಕ್ರಮ ಕೈಗೊಳ್ಳದಿರುವುದು ಇಂತಹ ಕೃತ್ಯಕ್ಕೆ ಆಸ್ಪದ ನೀಡಿದಂತಾಗಿದೆ. ಸರಣಿ ಕಳ್ಳತನ ಕೃತ್ಯದಿಂದ ಪಟ್ಟಣದಲ್ಲಿ ಭಯದ ವಾತಾವರಣ ಮೂಡಿಸಿದ್ದು, ಪೊಲೀಸರು ರಾತ್ರಿ ಗಸ್ತು ಹೆಚ್ಚಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.