ಆಳ್ವಾಸ್ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಚಾಂಪಿಯನ್ಸ್

ಮೂಡುಬಿದಿರೆ: ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದ 64ನೇ ರಾಷ್ಟ್ರೀಯ ಪದವಿಪೂರ್ವ ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಕೂಟ ಹಾಗೂ ಮಚಲಿಪಟ್ನಂನ ಕೃಷ್ಣ ವಿವಿ ಆಶ್ರಯದಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಅಂತರ್ ವಿವಿ ಮಹಿಳಾ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಅಮೋಘ ಸಾಮರ್ಥ್ಯ ತೋರಿದ್ದಾರೆ. ರಾಜ್ಯ ಹಾಗೂ ಮಂಗಳೂರು ವಿವಿ ತಂಡಗಳು ಚಾಂಪಿಯನ್​ಷಿಪ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದರು.

64ನೇ ರಾಷ್ಟ್ರೀಯ ಪದವಿಪೂರ್ವ ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಕೂಟದಲ್ಲಿ ರಾಜ್ಯ ತಂಡ 12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಗಳಿಸಿದೆ. ರಾಜ್ಯ ತಂಡದಲ್ಲಿ ಆಡಿದ ಐವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಂಬುದು ಗಮನಾರ್ಹ. ಈ ಕೂಟದಲ್ಲಿ ಕಂಚಿನ ಪದಕ ಪಡೆದ ರಾಜ್ಯ ಬಾಲಕರ ತಂಡದಲ್ಲಿ ಆಡಿದ್ದ ಪ್ರಮುಖ 5 ಮಂದಿ ಆಟಗಾರರು ಆಳ್ವಾಸ್ ವಿದ್ಯಾರ್ಥಿಗಳು ಎಂದು ತಿಳಿಸಿದರು.

ಅಂತರ್ ವಿವಿಯಲ್ಲಿ ದಾಖಲೆ ಸಾಧನೆ: ಮಚಲಿಪಟ್ನಂನ ಕೃಷ್ಣ ವಿವಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿವಿ ಮಹಿಳಾ ಬಾಲ್ ಬ್ಮಾಡಿಂಟನ್ ಕೂಟದಲ್ಲಿ ಮಂಗಳೂರು ವಿವಿ ಸತತ 15ನೇ ಬಾರಿಗೆ ಲೀಗ್ ಅರ್ಹತೆ ಪಡೆದು 8ನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ವಿಜೇತ ಮಂಗಳೂರು ವಿವಿ ತಂಡದ ಆಟಗಾರ್ತಿಯರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು. ಮಂಗಳೂರು ವಿವಿಯೂ ಅಖಿಲ ಭಾರತ ಅಂತರ್ ವಿವಿ ಕೂಟದಲ್ಲಿ ನಿರಂತರ 5ನೇ ಬಾರಿಗೆ ಚಾಂಪಿಯನ್​ಷಿಪ್ ಪಡೆದಿದ್ದು, ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿದ್ದಾರೆ ಎಂದರು.