ಬದುಕಿನ ಪಲ್ಲಟಕ್ಕೆ ಚಾರಿತ್ರ್ಯ ನಿರ್ಮಾಣದ ಉತ್ತರ

ಮೂಡುಬಿದಿರೆ: ನಾಲ್ಕು ದಿಕ್ಕುಗಳಿಂದಲೂ ಹರಿದು ಬಂದ ಜನಸಾಗರದ ಮಧ್ಯೆ ಮಕ್ಕಳ ವ್ಯಕ್ತಿತ್ವ ನಿರ್ವಣದಲ್ಲಿ ಗಂಭೀರ ಚಿಂತನೆ, ಪಾಶ್ಚಾತ್ಯರ ಅಂಧಾನುಕರಣೆ, ಹೊಸ ವಸ್ತುಗಳ ಆಗಮನದಿಂದ ಬದುಕಿನಲ್ಲಿ ಪಲ್ಲಟಗಳಾಗುತ್ತಿವೆ. ಯೂಸ್ ಆಂಡ್ ತ್ರೋ ಎಂಬ ಗುಲಾಮಗಿರಿ ನಮ್ಮ ಬದುಕನ್ನು ಆವರಿಸುತ್ತಿದೆ ಎಂಬ ವಾಸ್ತವಾಂಶದ ಮೇಲೆ ಬೆಳಕು ಚೆಲ್ಲುವಂತೆ ಮಾಡಿದ್ದು ‘ಆಳ್ವಾಸ್ ನುಡಿಸಿರಿ 2018’ರ ಎರಡನೇ ದಿನದ ಕಾರ್ಯಕ್ರಮ.

ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಸರ್ಟಿಫಿಕೆಟ್ ಕೊಡುವ ಕಾರ್ಖಾನೆಗಳಾಗಿವೆ. ಮೌಲ್ಯ ಕಲಿಸುವ ಶಿಕ್ಷಣ ಸಂಸ್ಥೆಗಳು ಇಂದು ಕಡಿಮೆಯಾಗುತ್ತಿವೆ ಎಂದು ಪ್ರೊ.ಜಿ.ಬಿ. ಶಿವರಾಜು, ಆಧುನಿಕ ಶೈಕ್ಷಣಿಕ ಪದ್ಧತಿ ಮೇಲೆ ಬೆಳಕು ಚೆಲ್ಲಿದರು. ಉತ್ತಮ ಶಿಕ್ಷಣ ಸಿಕ್ಕಿದರೆ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂಬ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಮಕ್ಕಳಿಗೆ ಏನು ಕಲಿಸಬೇಕು ಎಂಬುದರ ಸೂಕ್ಷ್ಮವನ್ನು ಪ್ರತಿಪಾದಿಸಿದರು. ಪಾಶ್ಚಾತ್ಯ ದೇಶಗಳು ಭಾರತದ ಸಂಸ್ಕೃತಿ, ಇಲ್ಲಿನ ಆಚಾರ- ವಿಚಾರ ಅನುಸರಿಸಲು ಮುಂದಾಗುತ್ತಿರುವಾಗ ನಾವು ವಿದೇಶದ ಸಂಸ್ಕೃತಿ ಕಡೆಗೆ ಒಲವು ಬೆಳೆಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾದುದು ದಿನದ ಹೈಲೈಟ್ಸ್. ಎರಡು ವಿಶೇಷೋಪನ್ಯಾಸಗಳಲ್ಲಿ ಈ ಅಂಶದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಗಮನ ಸೆಳೆದರು. ಒಟ್ಟು ಎರಡನೇ ದಿನ ಕರ್ನಾಟಕ ದರ್ಶನ- ಬಹುರೂಪಿ ಆಯಾಮಗಳು ವಿಷಯದಲ್ಲಿ ಧ್ವನಿಸಿದ್ದು ಭಾರತೀಯತೆಯ ತುಡಿತ. ಪಾಶ್ಚಾತ್ಯ ಅನುಕರಣೆ ಕೀಳರಿಮೆ ಮನೋಭಾವ ಸೃಷ್ಟಿಸಿದೆ. ಇದರಿಂದ ನಾವು ಸ್ವಾಭಿಮಾನ ಕಳೆದುಕೊಂಡಿದ್ದೇವೆ. ಆಡುವ ಮಾತು, ತಿನ್ನುವ ಆಹಾರ, ಉಡುಗೆ-ತೊಡುಗೆಯಲ್ಲೂ ಕೀಳರಿಮೆ ಹೊಂದುತ್ತಿದ್ದೇವೆ ಎಂದು ಚಿಂತನೆಗೆ ಹಚ್ಚಿದ್ದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ.

ಸಾಫ್ಟ್​ವೇರ್ ಹಾರ್ಡ್​ವೇರ್

ನಮ್ಮ ಮಕ್ಕಳು ಸಾಫ್ಟ್​ವೇರ್ ಇಂಜಿನಿಯರ್ ಆಗಬೇಕೆಂದು ಹೆಚ್ಚಿನ ಹೆತ್ತವರು ಬಯಸುತ್ತಾರೆ. ಆದರೆ, ಸಾಫ್ಟ್​ವೇರ್​ನ ಕೆಟ್ಟ ಆಸೆಯಿಂದ ಜೀವನ ಹಾರ್ಡ್​ವೇರ್ ಆಗುತ್ತಿದೆ. ಸಾಫ್ಟ್ ವೇರ್​ನ ಭರದಲ್ಲಿ ಚಾರಿತ್ರ್ಯ ನಿರ್ವಣದ, ಮೌಲ್ಯ ಕಲಿಸಿಕೊಡುವ ಒತ್ತಾಸೆ ಕರಗುತ್ತಿದೆ ಎಂಬ ಅಂಶವೂ ನುಡಿಸಿರಿ ಎರಡನೇ ದಿನದ ವಿಶೇಷೋಪನ್ಯಾಸದಲ್ಲಿ ವ್ಯಕ್ತವಾಯಿತು. ಸ್ವಾರ್ಥಕೇಂದ್ರಿತ ಬದುಕು ಸಹಬಾಳ್ವೆಯ ಚಿಂತನೆಯನ್ನು ಕೊಲ್ಲುತ್ತಿದೆ ಎಂಬ ಸೂಕ್ಷ್ಮವೂ ಸುಳಿದು ಹೋಯಿತು.