ಶ್ರದ್ಧಾಭಕ್ತಿಯ ಮೊಂತಿ ಹಬ್ಬ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಏಸುಕ್ರಿಸ್ತರ ತಾಯಿ ಕನ್ಯಾಮರಿಯಮ್ಮ ಹುಟ್ಟಿದ ದಿನವನ್ನು ಸಂಭ್ರಮಿಸುವ ಮೊಂತಿ ಹಬ್ಬವನ್ನು ದ.ಕ. ಜಿಲ್ಲಾದ್ಯಂತ ಕ್ರೈಸ್ತರು ಭಕ್ತಿ ಭಾವ, ಸಡಗರ, ಸಂಭ್ರಮದಿಂದ ಶನಿವಾರ ಆಚರಿಸಿದರು.
ಮಂಗಳೂರಿನ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರ ನೇತೃತ್ವದಲ್ಲಿ ಬಲಿಪೂಜೆ ಮೂಲಕ ಮರಿಯಮ್ಮ ಹುಟ್ಟುಹಬ್ಬ ಮತ್ತು ತೆನೆ ಹಬ್ಬ ಆಚರಿಸಲಾಯಿತು. ಬಿಷಪ್ ಅವರನ್ನು ಸನ್ಮಾನಿಸಲಾಯಿತು. 22 ವರ್ಷಗಳಿಂದ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಸೇವೆ ಮಾಡುವ ಅವಕಾಶ ಲಭ್ಯವಾಗಿದೆ. ಎಲ್ಲರೂ ಉತ್ತಮ ಸಹಕಾರ ನೀಡಿದ್ದೀರಿ. ಇದೇ ರೀತಿ ಮುಂದಿನ ಬಿಷಪ್ ಅವರಿಗೂ ಸಹಕಾರ ನೀಡಬೇಕು ಎಂದ ಬಿಷಪ್, ಮಾತೆ ಮರಿಯಾಳ ಜನ್ಮ ದೇವರ ಪ್ರೀತಿಯನ್ನು ಭೂಮಿಗೆ ಸಾರುತ್ತದೆ. ಮರಿಯಾಳ ವಿಶ್ವಾಸಭರಿತ ಜೀವನ, ಪ್ರತಿಯೊಬ್ಬ ಕ್ರೈಸ್ತನಿಗೂ ಆದರ್ಶ. ಅವರ ಜನ್ಮದಿನವನ್ನು ನಮ್ಮ ಕುಟುಂಬದ ಹಬ್ಬ(ತೆನೆ ಹಬ್ಬ)ವಾಗಿ ಆಚರಣೆ ಮಾಡುವುದು ನಮ್ಮ ಸೌಭಾಗ್ಯ ಎಂದು ಸಂದೇಶದಲ್ಲಿ ಹೇಳಿದರು.

ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ:  ಬೆಂದೂರು, ಬಿಜೈ, ವಾಮಂಜೂರು, ಮಿಲಾಗ್ರಿಸ್ ಸೇರಿದಂತೆ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ ಮಾಡಲಾಯಿತು. ಮುಂಜಾನೆಯಿಂದ ಭತ್ತದ ತೆನೆ ಮತ್ತು ಕಬ್ಬನ್ನು ಗುರಿಕಾರರು ಚರ್ಚ್‌ಗೆ ಮೆರವಣಿಗೆಯಲ್ಲಿ ತಂದಿದ್ದರು. ಮಾತೆ ಮರಿಯಮ್ಮ ಅವರ ಬಾಲ ರೂಪಕ್ಕೆ ಮಕ್ಕಳು ಬಣ್ಣ ಬಣ್ಣದ ಹೂವುಗಳ ಮಳೆಗರೆದರು. ಚರ್ಚ್ ಗುರುಗಳು ತೆನೆ ಪೂಜೆ ನಡೆಸಿ ಭಕ್ತರಿಗೆ ಹಂಚಿದರು. ಕಬ್ಬು ಮತ್ತು ತೆನೆಯನ್ನು ಕ್ರೈಸ್ತರು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದು ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದರು.

ಹೊಸ ಅಕ್ಕಿಯ ಊಟ:  ಕೆಥೊಲಿಕ್ ಕ್ರೈಸ್ತರು ತಮ್ಮ ಮನೆಗಳಲ್ಲಿ ಮೊಂತಿ ಹಬ್ಬದ ಹಿನ್ನೆಲೆಯಲ್ಲಿ ಭತ್ತದ ಕಾಳಿನ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಲು, ತೆಂಗಿನ ಹಾಲು, ಪಾಯಸ ಮೂಲಕ ಮಾಡುವ ಹೊಸ ಅಕ್ಕಿಯ ಊಟ ಮಾಡಿ ಸವಿದರು. ಕೆಲವೆಡೆ ಕೆಸುವಿನ ಎಲೆ ಮತ್ತು ಹರಿವೆ ಸೊಪ್ಪಿನ ದಂಟಿನಿಂದ ತಯಾರಿಸಿದ ಆಳುದೆಂಟೊ ತಯಾರಿಸಿದ್ದರು. ದೂರ ದೂರ ನೆಲೆಸಿರುವ ಕುಟುಂಬದ ಸದಸ್ಯರೆಲ್ಲಾ ಒಂದುಗೂಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಮೇರಿ ಮಾತೆಗೆ ಗೌರವ ಸಲ್ಲಿಸಿದರು.