Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಅವಿಶ್ವಾಸದ ಚರ್ಚೆ: ತೀಕ್ಷ್ಣ ವಾಗ್ದಾಳಿಯ ನಂತರ ಮೋದಿಯನ್ನು ಆಲಿಂಗಿಸಿದ ರಾಹುಲ್​

Friday, 20.07.2018, 2:58 PM       No Comments

ಮಧ್ಯಾಹ್ನ 2. 30

ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದೇಶದ ಪ್ರತಿ ಪ್ರಜೆಗೂ 14 ಲಕ್ಷ ರೂಪಾಯಿಗಳನ್ನು ಬ್ಯಾಂಕ್​ ಖಾತೆಗೆ ಹಾಕಲಾಗುವುದು ಎಂದು ಮೋದಿ ಹೇಳಿದರು. ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿದರು, ಹೇಳದೇ ಕೇಳದೆ ರಾತ್ರಿ 8 ಗಂಟೆಯಲ್ಲಿ ನೋಟುಗಳನ್ನು ಅಮಾನ್ಯಗೊಳಿಸಿ ಜನರನ್ನು ಸಂಕಷ್ಟಕ್ಕೆ ದೂಡಿದರು, ಜಿಎಸ್​ಟಿಯಿಂದಾಗಿ ಜನತೆ ಸಮಸ್ಯೆ ಎದುರಿಸುವಂತಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಮೇಲೆ ನನಗೆ ಧ್ವೇಷವಿಲ್ಲ

ತಮ್ಮ ವಿರುದ್ಧ ಬಿಜೆಪಿ ನಾಯಕರು ನಡೆಸುವ “ಪಪ್ಪು” ಎಂಬ ಅಪಪ್ರಚಾರವನ್ನೂ ಮೋದಿ ಅವರ ವಿರುದ್ಧದ ಟೀಕೆಗೆ ಬಳಿಸಿಕೊಂಡ ರಾಹುಲ್​ ” ನೀವು ನನ್ನನ್ನು ಗೇಲಿ ಮಾಡಬಹುದು. ನನ್ನ ಮೇಲೆ ನಿಮಗೆ ಧ್ವೇಷವಿರಬಹುದು. ಅದಕ್ಕಾಗಿಯೇ ನೀವು ನನಗೆ “ಪಪ್ಪು” ಎಂದು ಕುಹಕವಾಡುತ್ತೀರಿ. ಆದರೆ, ನನಗೆ ನಿಮ್ಮ ಮೇಲೆ ಆ ರೀತಿಯ ಧ್ವೇಷವಿಲ್ಲ,” ಎಂದು ಹೇಳಿದರು. ಹೀಗೆ ಹೇಳಿದ ಮರುಗಳಿಗೆಯಲ್ಲೇ ಅವರು ಪ್ರಧಾನಿ ಬಳಿಗೆ ತೆರಳಿ ಅಪ್ಪಿಕೊಂಡರು. ಮೋದಿ ಅವರೂ ಕೂಡ ರಾಹುಲ್​ ಅವರನ್ನು ಮತ್ತೊಮ್ಮೆ ಕರೆದು ಅಪ್ಪಿಕೊಂಡರು. ಇಂಥ ವಿಶೇಷ ಪ್ರಸಂಗಕ್ಕೆ ಸಂಸತ್​ ಕಲಾಪ ಸಾಕ್ಷಿಯಾಯಿತು.

ರಫೆಲ್​ ಒಪ್ಪಂದದ ವಿರುದ್ಧ ಗುಡುಗು

ಫ್ರಾನ್ಸ್​ನೊಂದಿಗೆ ನಡೆದಿರುವ ರಫೆಲ್​ ಒಪ್ಪಂದದಲ್ಲಿ ರಹಸ್ಯ ಒಪ್ಪಂದವೂ ಇದೆ ಎಂದು ರಕ್ಷಣಾ ಸಚಿವರು ಹೇಳುತ್ತಾರೆ. ಆದರೆ, ನಾನು ಫ್ರಾನ್ಸ್​ ಅಧ್ಯಕ್ಷರನ್ನು ಭೇಟಿಯಾದಾಗ ಈ ರಹಸ್ಯ ಒಪ್ಪಂದದ ಬಗ್ಗೆ ವಿಚಾರಿಸಿದ್ದೆ. ಆದರೆ, ಅವರು ಹೇಳಿದರು ಅಂಥ ಯಾವುದೇ ರಹಸ್ಯ ಒಪ್ಪಂದಗಳು ನಡೆದಿಲ್ಲ ಎಂದು ಅವರು ಹೇಳಿದ್ದರು. ಹಾಗಾದರೆ ರಕ್ಷಣಾ ಮಂತ್ರಿ ದೇಶಕ್ಕೆ ಸುಳ್ಳು ಹೇಳಿದ್ದಾರೆ ಎಂದಾಯ್ತು ಎಂದು ಅವರು ಸಚಿವೆ ನಿರ್ಮಲಾ ಸೀತಾರಾಮನ್​ ವಿರುದ್ಧ ಕಿಡಿ ಕಾರಿದರು.

ನಂತರ ಇದಕ್ಕೆ ಉತ್ತರಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​, ಈ ಒಪ್ಪಂದ ಆಗಿರುವುದು 2008ರ ಯುಪಿಎ ಅವಧಿಯಲ್ಲಿ ಎಂದರು.

ಸಂವಿಧಾನ ಬದಲಿಸುವ ಮಾತು ಅಂಬೇಡ್ಕರ್​ಗೆ ಮಾಡಿದ ಅಪಚಾರ

ಕೇಂದ್ರ ಮಂತ್ರಿ ಅನಂತ್​ಕುಮಾರ್​ ಹೆಗ್ಡೆ ಅವರ ಸಂವಿಧಾನ ಬದಲಿಸುವ ಮಾತಿಗೂ ರಾಹುಲ್​ ಗಾಂಧಿ ತಿರುಗೇಟು ನೀಡಿದರು. ನೀವು ಸಂವಿಧಾನವನ್ನು ಬದಲಿಸುವ ಮಾತನಾಡುತ್ತೀರಿ. ಪ್ರತಿಭಾರಿ ಆ ಬಗ್ಗೆ ಮಾತನಾಡಿದಾಗಲೆಲ್ಲ ಅದು ಅಂಬೇಡ್ಕರ್​ ಮತ್ತು ಗಾಂಧಿ ಅವರಿಗೆ ಮಾಡಿದ ಅಪಮಾನವಾಗಲಿದೆ ಎಂದು ರಾಹುಲ್​ ಹೇಳಿದರು.

ಮಹಿಳೆಯರಿಗೆ ಅಭದ್ರತೆ

ದೇಶದಲ್ಲಿ ಇದೇ ಮೊದಲಬಾರಿಗೆ ಮಹಿಳೆಯರಿಗೆ ಅಭದ್ರತೆ ಎದುರಾಗಿದೆ. ದಲಿತ, ಆದಿವಾಸಿ, ಅಲ್ಪಸಂಖ್ಯಾತ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲ್ಲಲಾಗುತ್ತಿದೆ. ಆದರೆ, ಪ್ರಧಾನಿಗಳು ಈ ಬಗ್ಗೆ ಒಮ್ಮೆಯೂ ಮಾತನಾಡುವುದಿಲ್ಲ. ಅದಿವಾಸಿ, ಅಲ್ಪಸಂಖ್ಯಾತ ಮಹಿಳೆಯರು ಈ ದೇಶದ ಪ್ರಜೆಗಳಲ್ಲವೇ ಎಂದೂ ಅವರು ಇತ್ತೀಚಿನ ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆಗಳನ್ನು ಕಂಡಿಸಿದರು.

ಕರ್ನಾಟಕದ ಉಲ್ಲೇಖ

ಕರ್ನಾಟಕದಲ್ಲಿ ರೈತರ 32000 ಕೋಟಿ ರೂಪಾಯಿಗಳಷ್ಟು ಸಾಲ ಮನ್ನಾ ಆಗುತ್ತಿರುವ ಹೊತ್ತಲ್ಲಿ ನರೇಂದ್ರ ಮೋದಿ ಅವರು ಕೇವಲ ಭರವಸೆಗಳನ್ನಷ್ಟೇ ನೀಡುತ್ತಾರೆ. ಕನಿಷ್ಟ ಬೆಂಬಲ ಬೆಲೆ ವಿಚಾರದಲ್ಲಿ ಮೋದಿ ಅವರು ಕೇವಲ ಭರವಸೆಗಳನ್ನು ಮಾತ್ರ ನೀಡಿದ್ದಾರೆ ಎಂದು ಆರೋಪಿಸಿದರು.


ಮಧ್ಯಾಹ್ನ 1. 30:  ತೆಲುಗುದೇಶಂ ಪಕ್ಷ ಮತ್ತು ಕಾಂಗ್ರೆಸ್​ ಮತ್ತು ಇತರ ಪಕ್ಷಗಳು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ಬಾರಿ ಕೋಲಾಹಲಕ್ಕೆ ಗುರಿಯಾಯಿತು. ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಚರ್ಚೆ ಸಾಕ್ಷಿಯಾಯಿತು.

ಮೋದಿ ಅವರ ಸರ್ಕಾರದ ವೈಫಲ್ಯಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಒಂದೊಂದಾಗಿ ಟೀಕಿಸಲು ನಿಂತರು. ಈ ವೇಳೆ ಅವರು ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಾಗ್ದಾಳಿಗೆ ಗುರಿಯಾಗಬೇಕಾಯಿತು. ನೋಟು ಅಮಾನ್ಯ, ಉದ್ಯೋಗ ಸೃಷ್ಟಿ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದೇ ಇರುವುದು ಸೇರಿದಂತೆ ಹಲವು ವಿಷಯಗಳನ್ನಿಟ್ಟುಕೊಂಡು ಅವರು ಸರ್ಕಾರವನ್ನು ಟೀಕಿಸಿದರು.

ಈ ವೇಳೆ ಮೋದಿ ಅವರನ್ನು ಕುರಿತು ರಾಹುಲ್​ ಆಡಿದ ಮಾತೊಂದು ಸದನವನ್ನು ನಗೆಗಡಲಲ್ಲಿ ತೇಲಿಸಿತು.  ರಾಹುಲ್​ ಮಾತನಾಡುವಾಗ ಮುಗುಳ್ನಗುತ್ತಿದ್ದ ಮೋದಿ ಅವರನ್ನು ಟೀಕಿಸಲು ಮುಂದಾದ ರಾಹುಲ್​ ಗಾಂಧಿ ” ಪ್ರಧಾನಿ ನರೇಂದ್ರ ಮೋದಿ ಅವರ ಮುಖದಲ್ಲಿ ನನಗೆ ನಗುವೇನೋ ಕಾಣುತ್ತಿದೆ. ಆದರೆ, ಆ ನಗುವಿನಲ್ಲಿ ಭಯದ ಸ್ಪರ್ಶವೂ ಇದೆ. ಅವರಿಗೆ ನನ್ನನ್ನು ನೋಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಬೇರೆಡೆ ದೃಷ್ಟಿ ನೆಟ್ಟಿದ್ದಾರೆ. ಅದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅವರಿಗೆ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಮೋದಿ ಸತ್ಯನಿಷ್ಠರಲ್ಲ ಎಂದು ಹೇಳಿದರು.

ರಾಹುಲ್​ ಅವರ ಈ ಮಾತು ಸದನವನ್ನು ನಗೆಗಡಲಲ್ಲಿ ಮುಳುಗಿಸಿತು. ಅಲ್ಲದೆ, ಮೋದಿ ಅವರು ಸತ್ಯನಿಷ್ಠರಲ್ಲ ಎಂಬ ಮಾತು ವಿರೋಧ ಪಕ್ಷಗಳು ಮತ್ತು ಬಿಜೆಪಿ ಸದಸ್ಯರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಹೀಗಾಗಿ ಕಲಾಪವನ್ನು 15 ನಿಮಿಷ ಮುಂದೂಡಲಾಯಿತು.


ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​, ತೆಲುಗುದೇಶಂ ಪಾರ್ಟಿ ಮತ್ತಿತರ ಪಕ್ಷಗಳು ಮಂಡಿಸುತ್ತಿರುವ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಇಂದು ಸಮಯ ನಿಗದಿಯಾಗಿದ್ದು ಅದರಂತೆ, ಸಂಸತ್​ ಕಲಾಪ ಆರಂಭಗೊಂಡಿದೆ.

ಗೊತ್ತುವಳಿಯನ್ನು ಮತಕ್ಕೆ ಹಾಕುವ ಪ್ರಕ್ರಿಯೆಯನ್ನು ಸಂಜೆ 6 ಗಂಟೆಗೆ ನಿಗದಿಪಡಿಸಿರುವುದಾಗಿ ಸ್ಪೀಕರ್​ ಸುಮಿತ್ರ ಮಹಾಜನ್​ ಸದನಕ್ಕೆ ತಿಳಿಸಿದರು.

ಚರ್ಚೆಯ ಆರಂಭದಲ್ಲೇ ಒಡಿಶಾದ ಬಿಜು ಜನತಾದಳ (ಬಿಜೆಡಿ) ಸದಸ್ಯರು ಸಭಾತ್ಯಾಗ ಮಾಡಿದರು. ಈ ನಡುವೆ ಸಂಸತ್​ ಕಲಾಪ ಆರಂಭವಾಗುವುದಕ್ಕೂ ಮೊದಲು ಸಭೆ ನಡೆಸಿದ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಕಲಾಪದಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿತು.

ಕಲಾಪ ಆರಂಭವಾಗುತ್ತಲೇ ತೆಲುಗುದೇಶಂ ಪಕ್ಷದ ಸಂಸದ ಜಯದೇವ್​ ಗಲ್ಲಾ ಅವಿಶ್ವಾಸ ಗೊತ್ತುವಳಿಯನ್ನು ಸಂಸತ್‌ನಲ್ಲಿ ಮಂಡಿಸಿದರು. ನಂತರ ಮಾತನಾಡಿ, ಮೋದಿ ಮತ್ತು ಅಮಿತ್​ಶಾ ಅವರದ್ದು ಖಾಲಿ ಭರವಸೆಗಳು ಎಂದರು.

2014ರ ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕೆಂದು ಆಂಧ್ರ ಪ್ರದೇಶಕ್ಕೆ ಬಂದಿದ್ದ ನರೇಂದ್ರ ಮೋದಿ ಅವರು ” ಕಾಂಗ್ರೆಸ್​ ಪಕ್ಷ ತಾಯಿಯನ್ನು ಕೊಂದಿತು, ಮಗುವನ್ನು ಉಳಿಸಿತು (ಆಂಧ್ರ ಪ್ರದೇಶ ಇಬ್ಭಾಗದ ಕುರಿತು).  ಆದರೆ ನಾನು ತಾಯಿಯನ್ನೂ ರಕ್ಷಿಸುತ್ತೇನೆ. ಮೋದಿ ಅವರು ತಾಯಿಯನ್ನು ರಕ್ಷಿಸುತ್ತಾರೆಯೇ ಎಂದು  ಆಂಧ್ರದ ಜನ ನಾಲ್ಕು ವರ್ಷಗಳಿಂದ ಕಾಯುತ್ತಲೇ ಇದ್ದಾರೆ,” ಎಂದು ತರಾಟೆಗೆ ತೆಗೆದುಕೊಂಡರು.

ಈ ನಡುವೆ ಬಿಹಾರದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ನಿತೀಶ್​ ಕುಮಾರ್​,  ನಾವು (ಜೆಡಿಯು) ಸರ್ಕಾರದ ಪರವಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಕಲಾಪ ಆರಂಭವಾಗುವುದಕ್ಕೂ ಮೊದಲು ಸಂಸತ್​ನ ಹೊರಗೆ ಮಾತನಾಡಿದ ಸಚಿವ ಅನಂತ್​ಕುಮಾರ್​, ನಾವು ವಿಶ್ವಾಸ ಗೆಲ್ಲುತ್ತೇವೆ ಎಂದು ತಿಳಿಸಿದರು.

ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ದೇಶದ 130 ಕೋಟಿ ನಾಗರಿಕರ ಸಮಸ್ಯೆಗಳು ಮತ್ತು ಸರ್ಕಾರದ ವೈಫಲ್ಯಗಳನ್ನು ಬಯಲಿಗೆಳೆಯಲು ಇದು ಸೂಕ್ತ ಸಮಯ. ಸ್ಪೀಕರ್​ ಅವರು ಪ್ರತಿಯೊಂದು ಪಕ್ಷದ ಪ್ರತಿನಿಧಿಗಳಿಗೆ ಮಾತನಾಡಲು 30 ನಿಮಿಷ ಕಾಲವಕಾಶ ನೀಡಬೇಕಿತ್ತು. ಆದರೆ, ಅತಿದೊಡ್ಡ ವಿರೋಧ ಪಕ್ಷಕ್ಕೆ 38 ನಿಮಿಷ ಸಮಯ ನಿಗದಿ ಮಾಡಿರುವುದು ಸರಿಯಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು, ಸಚಿವ ರಾಜನಾಥ್​ ಸಿಂಗ್​, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಹತ್ವದ ಸಭೆ ನಡೆಸಿ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದರು.

ಅವಿಶ್ವಾಸ ಗೊತ್ತುವಳಿಯ ಚರ್ಚೆಯಲ್ಲಿ ಇಂದು ಬಿಜೆಪಿಯಿಂದ ಸಚಿವ ರಾಜ್​ನಾಥ್​ ಸಿಂಗ್​, ರಾಕೇಶ್​ ಸಿಂಗ್​, ವಿರೇಂದ್ರ ಸಿಂಗ್​ ಮಸ್ತ್​ ಮತ್ತು ಅರ್ಜುನ್​ ರಾಮ್​ ಮೇಘ್ವಾಲ್​ ಮಾತನಾಡಲಿದ್ದಾರೆ ಎಂದು ಗೊತ್ತಾಗಿದೆ.

Leave a Reply

Your email address will not be published. Required fields are marked *

Back To Top