ಮುಂಗಾರು ಅಬ್ಬರಕ್ಕೆ ಜನ ತತ್ತರ ಹೊಳೆಗೆ ಬಿದ್ದು ಮಹಿಳೆ ಸಾವು

ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಶನಿವಾರ ಬಿರುಸುಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿತು.

ಗಾಳಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಹೊಳೆ ಬದಿ ನಡೆದುಕೊಂಡು ಹೋಗುತ್ತಿದ್ದ ರೇವತಿ (50) ಎಂಬುವರು ಹೊಳೆಗೆ ಬಿದ್ದು ಮೃತಟ್ಟಿದ್ದಾರೆ. ಮಂಗಳೂರು ಸೆಂಟ್ರಲ್ ಮಾರ್ಕೆಟ್ ಭವಂತಿ ಸ್ಟ್ರೀಟ್‌ನಲ್ಲಿ ಹಳೇ ಕಟ್ಟಡ ಬಿದ್ದು ಎರಡು ಬೈಕ್‌ಗಳು ಹಾನಿಗೊಂಡಿವೆ. ಸುರತ್ಕಲ್ ಹೊಸಬೆಟ್ಟುವಿನಲ್ಲಿ ಮರ ಉರುಳಿ ಮನೆಗೆ ಭಾಗಶಃ ಹಾನಿಯಾಗಿದೆ. ಹಲವೆಡೆ ಗಾಳಿಗೆ ರಸ್ತೆ ಮೇಲೆ ಮರ ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿತು. ಮಂಗಳೂರು ಕರಾವಳಿ ವೃತ್ತದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವನ್ನು ತೆರವುಗೊಳಿಸಲಾಯಿತು.

ವಿದ್ಯುತ್ ಕಡಿತ: ಮುಂಜಾನೆಯಿಂದಲೇ ಜಿಲ್ಲಾದ್ಯಂತ ವಿದ್ಯುತ್ ಕಡಿತಗೊಂಡಿದೆ. ಗ್ರಾಮೀಣ ಭಾಗದಲ್ಲಿ ಶುಕ್ರವಾರ ರಾತ್ರಿಯಿಂದಲೇ ವಿದ್ಯುತ್ ಕಡಿತಗೊಂಡು ಜನರಿಗೆ ಸಮಸ್ಯೆಯಾಯಿತು. ತಂತಿ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಗೆ ಅಡಚಣೆಯಾಯಿತು. ಮೆಸ್ಕಾಂ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಗ್ಗಿನಿಂದಲೇ ಅಲ್ಲಲ್ಲಿ ರಸ್ತೆ ಮತ್ತು ವಿದ್ಯುತ್ ತಂತಿ ಮೇಲೆ ಬಿದ್ದ ಮರ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಧರ್ಮಸ್ಥಳ, ಸುಬ್ರಹ್ಮಣ್ಯ, ಕುಂದಾಪುರ, ಸಿದ್ದಾಪುರದಲ್ಲಿ ತಲಾ 8 ಸೆಂ.ಮೀ, ಮೂಡುಬಿದಿರೆ, ಮೂಲ್ಕಿ, ಪಣಂಬೂರು, ಉಡುಪಿಯಲ್ಲಿ ತಲಾ 7 ಸೆಂ.ಮೀ., ಮಂಗಳೂರು, ಕೋಟಾದಲ್ಲಿ ತಲಾ 5 ಸೆಂ.ಮೀ, ಸುಳ್ಯದಲ್ಲಿ 4 ಸೆಂ.ಮೀ. ಮಳೆಯಾಗಿದೆ. ಜೂನ್ 11ರವರೆಗೂ ಕರಾವಳಿಯಲ್ಲಿ ಭಾರಿ ಮಳೆ ಮುಂದುವರಿಯಲಿದೆ. ಮೀನುಗಾರರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ವರದಿ ತಿಳಿಸಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಶನಿವಾರ ಬಾರಿ ಮಳೆಯಾಗಿದ್ದು ವಿದ್ಯುತ್ ದೂರವಾಣಿ ಅಸ್ತವ್ಯಸ್ಥಗೊಂಡಿದೆ. ಪಣಕಜೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಮದ್ದಡ್ಕ ಉಜಿರೆ ಹಳೆಪೇಟೆ ಮುಂತಾದೆಡೆ ರಸ್ತೆಯಲ್ಲಿ ನೀರು ತುಂಬಿ ಪ್ರಯಾಣಿಕರು ಪರದಾಡುವಂತಾಗಿದೆ.

ಗಾಳಿ ಮಳೆ 9 ಮನೆಗಳಿಗೆ ಹಾನಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಕಾಪು ತಾಲೂಕಿನಲ್ಲಿ 8 ಮನೆ ಹಾಗೂ ಕಾರ್ಕಳ ತಾಲೂಕಿನಲ್ಲಿ 1 ಮನೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 9 ಮನೆಗಳಿಗೆ ಮರ ಬಿದ್ದು ಹಾನಿಯಾಗಿದ್ದು, ಅಂದಾಜು 2.67 ಲಕ್ಷ ರೂ. ನಷ್ಟ ಸಂಭವಿಸಿದೆ.

ಕಾಪು ತಾಲೂಕಿನ ಹೆಜಮಾಡಿ ಗ್ರಾಮ ರಮೇಶ್ ಎಂಬುವರ ಮನೆಗೆ ಗಾಳಿ ಮಳೆಯಿಂದಾಗಿ ಮರ ಬಿದ್ದು 60 ಸಾವಿರ ರೂ. ಹಾನಿ ಸಂಭವಿಸಿದೆ. ತೆಂಕ ಗ್ರಾಮದ ಸುಂದರಿ ಮುಲ್ತಿ ಇವರ ಮನೆಯ ಮೇಲ್ಚಾವಣಿ ಮತ್ತು ಗೋಡೆ ಕುಸಿದು 47 ಸಾವಿರ ರೂ., ತೆಂಕ ಗ್ರಾಮದ ಸರಸು ಅವರ ಮನೆಯ ಶೌಚಗೃಹದ ಮೇಲೆ ಮರ ಬಿದ್ದು 15 ಸಾವಿರ, ಬೆಳ್ಳೆ ಗ್ರಾಮದ ಪ್ರಭಾಕರ ಅವರ ಮನೆಗೆ ಮರ ಬಿದ್ದು 25,000, ನಂದಿಕೂರು ಗ್ರಾಮದ ಭವಾನಿ ಮುರಾರಿ ಅವರ ಮನೆಯ ಹಟ್ಟಿ ಮೇಲೆ ಗೇರು ಮರ ಬಿದ್ದು 25 ಸಾವಿರ, ಪಲಿಮಾರು ಗ್ರಾಮದ ದುಗ್ಗಪ್ಪ ಆಚಾರ್ಯ ಎಂಬುವರ ಮನೆಗೆ ಮರ ಬಿದ್ದು 10 ಸಾವಿರ ರೂ, ನಡ್ಸಾಲು ಗ್ರಾಮದ ಸುಂದರಿ ಆಚಾರ್ತಿ ಮನೆಗೆ ಮರ ಬಿದ್ದು 40 ಸಾವಿರ ರೂ., ಬೆಳಪು ಗ್ರಾಮದ ಪಂಚಾಯಿತಿ ವಾಣಿಜ್ಯ ಕಟ್ಟಡದ ಮೇಲೆ ಮರ ಬಿದ್ದು 15 ಸಾವಿರ ರೂ, ಕಾರ್ಕಳ ತಾಲೂಕು ಹೆರ್ಮುಂಡೆ ಗ್ರಾಮದ ವಿಷ್ಣುಮೂರ್ತಿ ದೇವಸ್ಧಾನದ ಆವರಣ ಗೋಡೆ ಕುಸಿದು 30 ಸಾವಿರ ರೂ. ನಷ್ಟ ಸಂಭವಿಸಿದೆ.

ಉಡುಪಿಯಲ್ಲಿ 62. 6, ಕುಂದಾಪುರದಲ್ಲಿ 87.1, ಕಾರ್ಕಳದಲ್ಲಿ 66.3 ಮಿ.ಮೀ. ಮಳೆಯಾಗಿದೆ.

ಹೊಳೆಗೆ ಬಿದ್ದು ಮಹಿಳೆ ಸಾವು: ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಅರ್ಕಿಜಡ್ಕ ನಿವಾಸಿ ರೇವತಿ (50) ಎಂಬವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಮಳೆಗೆ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ನೀರಿಗೆ ಬಿದ್ದು ಮುಳುಗುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಿಸಿದರೂ ಜೀವ ಉಳಿಸಲಾಗಲಿಲ್ಲ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೇವತಿ ಅವರ ಪತಿ ಈ ಹಿಂದೆ ನಿಧನರಾಗಿದ್ದು, ಇಬ್ಬರು ಮಾತು ಬಾರದ ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು. ಉಳಿದ ಇಬ್ಬರು ಪುತ್ರಿಯರಿಗೆ ವಿವಾಹವಾಗಿದೆ.
ವತ್ತಿನೆಣೆ ಸ್ಲೋಪ್ ಕುಸಿತಕ್ಕೆ ಸಿಕ್ಕಿತು ತಾತ್ಕಾಲಿಕ ಪರಿಹಾರ: ಶುಕ್ರವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ವತ್ತಿನೆಣೆ ಸ್ಲೋಪ್ ಪ್ರೊಟೆಕ್ಷನ್ ವಾಲ್‌ನ ಒಳಭಾಗದಲ್ಲಿ ನೀರು ಹರಿದು, ಗುಡ್ಡದ ಮಣ್ಣು ರಸ್ತೆಯ ಚರಂಡಿಗೆ ಬಿದ್ದ ಹಿನ್ನೆಲೆಯಲ್ಲಿ ರಾ.ಹೆ. ವಿಸ್ತರಣೆ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರು ಶನಿವಾರ ಕುಸಿತ ಕಂಡ ಗುಡ್ಡದ ತಳಭಾಗದಲ್ಲಿ ಮರಳಿನ ಚೀಲವಿಟ್ಟು ತುರ್ತು ಪರಿಹಾರ ಕಾರ‌್ಯ ಕೈಗೊಂಡಿದ್ದಾರೆ. ಶಾಶ್ವತ ಪರಿಹಾರ ಇನ್ನಷ್ಟೇ ಆಗಬೇಕಿದೆ. ಪ್ರಸಕ್ತ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಈಗ ತೊಂದರೆಯಿಲ್ಲ. ಮಣ್ಣು ಕೆಳಗಿನಿಂದ ತೋಡಿಗೆ ಬಿದ್ದು ನೀರಿನೊಂದಿಗೆ ಹರಿಯಲಾರಂಭಿಸಿದೆ.

Leave a Reply

Your email address will not be published. Required fields are marked *