ಬಾರದ ಮಳೆ ಬೇಸಾಯ ಹಿನ್ನಡೆ

ಶಶಿ ಈಶ್ವರಮಂಗಲ

ಮುಂಗಾರು ಮಳೆ ಈ ಬಾರಿ ಸಮಯಕ್ಕೆ ಸರಿಯಾಗಿ ಆರಂಭಗೊಂಡಿಲ್ಲ. ಮಳೆ ವಿಳಂಬವಾದ ಕಾರಣ ಭತ್ತ ಬೆಳೆಯುವ ಕೃಷಿ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ಭತ್ತದ ಕೃಷಿ ಕಾಯಕಕ್ಕೆ ಇಳಿಯಬೇಕಾಗಿದ್ದ ರೈತ ವರ್ಗ ಆಕಾಶದತ್ತ ಮುಖ ಮಾಡಿ ಮಳೆಗಾಗಿ ಕಾಯುವ ಸ್ಥಿತಿ ಬಂದಿದೆ.

ಸಾಮಾನ್ಯವಾಗಿ ಮುಂಗಾರು ಮಳೆ ಆರಂಭಕ್ಕೆ ಮುನ್ನ ವಾಡಿಕೆ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಪ್ರತಿ ವರ್ಷದಂತೆ ವಾಡಿಕೆ ಮಳೆಯೂ ಇಲ್ಲ, ಮೇ ಅಂತ್ಯದಲ್ಲಿ ಆರಂಭಗೊಳ್ಳಬೇಕಾಗಿದ್ದ ಮುಂಗಾರು ಮಳೆಯೂ ಆರಂಭಗೊಂಡಿಲ್ಲ. ಜೂನ್ ತಿಂಗಳ ಮೊದಲ ವಾರದಲ್ಲಿ ಮಳೆ ಆರಂಭಗೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ.

ಜಿಲ್ಲೆಯಲ್ಲಿ ಬಹುತೇಕ ಕಡೆ ಭತ್ತದ ಗದ್ದೆಗಳು ಮಾಯವಾಗಿವೆ. ರೈತ ವರ್ಗದವರ ಗದ್ದೆಗಳನ್ನು ಅಡಕೆ ತೋಟಗಳು ಆವರಿಸಿದೆ. ಈ ನಡುವೆಯೂ ಗ್ರಾಮೀಣ ಭಾಗದ ಕೆಲವೊಂದು ಕೃಷಿಕರು ಸಾಂಪ್ರದಾಯಿಕ ಬೇಸಾಯ ಪದ್ಧತಿ ಮುಂದುವರಿಸಿಕೊಂಡು ಬಂದಿದ್ದಾರೆ. ತುಳುನಾಡಿನ ಮೂಲ ಬೇಸಾಯ ಪದ್ಧತಿ ಉಳಿಯಬೇಕು ಎಂಬ ನಿಟ್ಟಿನಲ್ಲಿ ಬೇಸಾಯ ಪದ್ಧತಿ ಮುಂದುವರಿಸಿಕೊಂಡು ಬಂದವರಿದ್ದಾರೆ. ಆದರೆ ಮಳೆಯ ಅಪಕೃಪೆಯಿಂದ ಈ ಬಾರಿ ರೈತರ ಉತ್ಸಾಹ ಕುಗ್ಗುವಂತಾಗಿದೆ.

ಹವಾಮಾನ ವರದಿ ಆಧರಿಸಿ ಜೂನ್ ತಿಂಗಳ ಮೊದಲ ವಾರ ಮುಂಗಾರು ಮಳೆ ಆರಂಭವಾಗಬಹುದು, ಅದಕ್ಕೆ ಮೊದಲು ಪ್ರತಿ ವರ್ಷದಂತೆ ಈ ಬಾರಿಯೂ ವಾಡಿಕೆ ಮಳೆಯಾಗಬಹುದು ಎಂದು ರೈತರು ನಂಬಿದ್ದರು. ಆದರೆ ಮಳೆ ಇನ್ನೂ ಆರಂಭವಾಗದ ಕಾರಣ ಬೇಸಾಯದ ಕೆಲಸಕ್ಕೆ ಇಳಿಯುವುದು ಕಷ್ಟವಾಗಿದೆ. ಮುಂಗಾರು ಮಳೆ ಬರುವ ಮೊದಲೇ ಗದ್ದೆ ಹದ ಮಾಡಿ ನೇಜಿ ನಾಟಿಗೆ ತಯಾರಾಗುತ್ತಿದ್ದ ರೈತರು ಈ ಬಾರಿ ಕೈಕಟ್ಟಿ ಕುಳಿತುಕೊಳ್ಳಬೇಕಾಗಿದೆ.

ಭತ್ತದ ಕೃಷಿಯಲ್ಲಿ ಸಾಂಪ್ರದಾಯಿಕ ಉಳುಮೆ ಪದ್ಧತಿ ಬದಲಾಗಿದೆ. ಎತ್ತುಗಳ ಬದಲಿಗೆ ಟ್ರಾೃಕ್ಟರ್ ಬಂದಿದೆ. ನೇಜಿ ನಾಟಿ, ಕೊಯ್ಲು ಯಂತ್ರಗಳ ಮೂಲಕ ನಡೆಯುತ್ತಿದೆ. ಯಂತ್ರಗಳೇ ಕಾರ್ಮಿಕರ ಕೊರತೆ ನೀಗಿಸುತ್ತಿವೆ. ಈ ಹೊಸತನಗಳಿಗೆ ತಮ್ಮನ್ನು ಒಡ್ಡಿಕೊಂಡು ಯಾಂತ್ರೀಕೃತ ಬೆಳೆಗಾರರಾಗಿ ಬೇಸಾಯ ಮುಂದುವರಿಸಿಕೊಂಡು ಬಂದಿರುವ ಭತ್ತದ ಬೆಳೆಗಾರರ ಆಸಕ್ತಿಗೆ ಮಳೆ ಈ ಬಾರಿ ಶಾಕ್ ನೀಡಿದೆ.

ಮುಂದುವರಿಸಬೇಕೇ, ಬೇಡವೇ ಎಂಬ ಗೊಂದಲ
ಭತ್ತ ಬೇಸಾಯಗಾರರು ಪ್ರತಿ ವರ್ಷ ಸಾಮಾನ್ಯವಾಗಿ ಮೇ ತಿಂಗಳ ಕೊನೆಯಲ್ಲಿ ಚಾಪೆ ನೇಜಿ ತಯಾರು ಮಾಡುತ್ತಿದ್ದರು. ಆದರೆ ಈ ಬಾರಿ ಅದರ ಉಸಾಬರಿಗೇ ಹೋಗಿಲ್ಲ. ಚಾಪೆ ನೇಜಿ ಕನಿಷ್ಠ 15 ದಿನಗಳೊಳಗಾಗಿ ನೇಜಿ ನಾಟಿ ಮಾಡಬೇಕು. ನೇಜಿ ನಾಟಿ ಮಾಡಲು ಗದ್ದೆ ಹದ ಮಾಡಬೇಕು. ಮಳೆಯೇ ಇಲ್ಲದ ಕಾರಣ ಗದ್ದೆ ಹದ ಮಾಡಲು ಕಷ್ಟವಾಗಿದೆ. ಸಾಮಾನ್ಯ ಪ್ರಮಾಣದಲ್ಲಿ ವಾಡಿಕೆ ಮಳೆಯಾದ ಬಳಿಕ ಗದ್ದೆಗೆ ಹಸಿರೆಲೆ ಗೊಬ್ಬರ ಹಾಕಿ ಗದ್ದೆ ಹದ ಮಾಡುವುದು ರೂಢಿ. ಆದರೆ ವಾಡಿಕೆ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ಮುಂಗಾರು ಕೂಡ ವಿಳಂಬವಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಭತ್ತದ ಕೃಷಿ ಮುಂದುವರಿಸಬೇಕೇ, ಬೇಡವೇ ಎಂಬ ಗೊಂದಲದಲ್ಲಿ ರೈತರಿದ್ದಾರೆ.

ಅಡಕೆಯೂ ಇಲ್ಲ-ಭತ್ತವೂ ಇಲ್ಲ..!
ಬಿಸಿಲ ಝಳದಿಂದ, ನೀರಿಲ್ಲದೆ ಅಡಕೆ ಮರಗಳನ್ನು ಕಳೆದುಕೊಳ್ಳುತ್ತಿರುವ ಕೃಷಿಕರು ಇನ್ನೊಂದಡೆ ಭತ್ತದ ಬೆಳೆಯಿಂದಲೂ ವಂಚಿತರಾಗುವಂತಾಗಿದೆ. ನೇಜಿ ನಾಟಿ ವಿಳಂಬವಾದರೆ ಮತ್ತೆ ನೀರಿನ ಸಮಸ್ಯೆಯಿಂದ ಬೆಳೆದ ಬೆಳೆ ರಕ್ಷಿಸಿಕೊಳ್ಳಲು ಪರದಾಡಬೇಕಾದ ಸ್ಥಿತಿ ರೈತನದ್ದಾಗುತ್ತದೆ. ಕ್ಷೀಣವಾದ ಮುಂಗಾರು ಮಳೆ ಇನ್ನಿಲ್ಲದಂತೆ ರೈತವರ್ಗವನ್ನು ಕಾಡುತ್ತಿದೆ.

ಈ ಬಾರಿ ವಾಡಿಕೆ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಇದರಿಂದ ಭತ್ತದ ಗದ್ದೆಗಳನ್ನು ಹದ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ. ಮಳೆಯನ್ನೇ ನಂಬಿ ನಾವು ಭತ್ತ ಬೆಳೆಸುವುದರಿಂದ ಮಳೆಯ ಕೊರತೆ ಕಂಗೆಡಿಸಿದೆ. ಮಳೆ ಬರದೆ ನೇಜಿ ತಯಾರು ಮಾಡಲು ಭಯವಾಗುತ್ತಿದೆ. ಹಾಗಾಗಿ ಈ ಬಾರಿ ಭತ್ತದ ಬೆಳೆ ಮಾಡುವುದು ಕಷ್ಟವಾಗಿ ಕಂಡು ಬರುತ್ತಿದೆ. ಬಿಸಿಲಿನ ಝಳಕ್ಕೆ ಅಡಕೆ ಬೆಳೆ ಈಗ ಅರ್ಧಾಂಶ ನಾಶವಾಗಿದೆ. ಭತ್ತದ ಬೆಳೆಯೂ ಆತಂಕದಲ್ಲಿದೆ.
ರಾಮಣ್ಣ ಗೌಡ ಪಾಲೆತ್ತಾಡಿ, ಕೃಷಿಕ

Leave a Reply

Your email address will not be published. Required fields are marked *