ಕೊನೆಗೂ ಸೆರೆ ಸಿಕ್ಕ ಮಂಗ

ಆಲಮಟ್ಟಿ: 15 ದಿನಗಳಿಂದ ಒಬ್ಬಂಟಿ ವ್ಯಕ್ತಿಗಳಿಗೆ ಕಚ್ಚುತ್ತಿದ್ದ ಮಂಗ ಮಂಗಳವಾರ ನಸುಕಿನ ಜಾವ ಸೆರೆ ಸಿಕ್ಕಿದೆ.

ಸೋಮವಾರ ಐವರಿಗೆ ಕಚ್ಚಿದ ಈ ಮಂಗನನ್ನು ಶತಾಯಗತಾಯ ಬಂಧಿಸಲೇಬೆಕೆಂದು ಆಲಮಟ್ಟಿ ಪಿಎಸ್​ಐ ಎಸ್.ವೈ. ನಾಯ್ಕೋಡಿ, ಅರಣ್ಯ ಇಲಾಖೆ ಸಿಬ್ಬಂದಿ ಸಹಯೋಗದೊಂದಿಗೆ ಚೋಳಚಗುಡ್ಡದಿಂದ ಬಂದ ಮಂಗ ಹಿಡಿಯುವವರು ಇಡೀ ರಾತ್ರಿ ಸಂಚರಿಸಿದರೂ ಮಂಗ ತಪ್ಪಿಸಿಕೊಂಡು ಹೋಗುತ್ತಿತ್ತು. ಅಲ್ಲದೆ ಅವರ ಮೇಲೆಯೇ ಎರಗುತ್ತಿತ್ತು. ಆದರೆ, ಮಂಗಳವಾರ ಇಲ್ಲಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿದ್ದ ಮಂಗನನ್ನು ಚೋಳಚಗುಡ್ಡದ ವೀರಯ್ಯ ಗಣಾಚಾರಿ ಹಾಗೂ ಈರಣ್ಣ ಕಟಗೇರಿ ಸೆರೆ ಹಿಡಿದಿದ್ದಾರೆ.

ಪಂಜರದೊಳಗಿಂದ ಹೊರಬರಲು ತವಕಿಸುತ್ತಿದ್ದ ಮಂಗ ತೀವ್ರವಾಗಿ ಆಕ್ರೋಶ ಹೊರಹಾಕುತ್ತಿತ್ತು. ಮಂಗ ಬಂಧಿಸುವ ಕಾರ್ಯಾಚರಣೆಯಲ್ಲಿ ಮಂಗನಿಂದಲೇ ಗಾಯಗೊಂಡದ್ದ ಆರ್​ಎಫ್​ಒ ಶ್ರೀಕಾಂತ ಪೋಳ, ಎಸ್.ಬಿ. ದಳವಾಯಿ, ಎಸ್.ವೈ. ಕೋಲಕಾರ, ಸತೀಶ ಗಲಗಲಿ ಸೇರಿದಂತೆ ಕೆಬಿಜೆಎನ್​ಎಲ್ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಅದಕ್ಕೆ ಪಶು ವೈದ್ಯರ ಬಳಿ ಪರೀಕ್ಷಿಸಲಾಗಿದ್ದು, ರೇಬಿಸ್ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆಂದು ಆರ್​ಎಫ್​ಒ ಮಹೇಶ ಪಾಟೀಲ ತಿಳಿಸಿದರು.