ಮಂಗನಕಾಯಿಲೆಗೆ ಹೆದರಿ ಊರು ತೊರೆದರು!

|ದೀಪಕ್ ಸಾಗರ

ಶಿವಮೊಗ್ಗ: ಮಲೆನಾಡಿಗೆ ಮಂಗನ ಕಾಯಿಲೆ ಶಾಪವಾಗಿ ಪರಿಣಮಿಸಿದೆ. ವಿಶೇಷವಾಗಿ ಶರಾವತಿ ಹಿನ್ನೀರು ಪ್ರದೇಶದ ಗ್ರಾಮಗಳ ಜನ ಮಂಗನಕಾಯಿಲೆ ದಾಳಿಗೆ ಬೆಚ್ಚಿ ಬಿದ್ದಿದ್ದಾರೆ.

ಕೆಲವರು ಹೆದರಿ ಊರು ಬಿಟ್ಟಿದ್ದರೆ, ಕೆಲವರು ನೆಂಟರ ಮನೆ ಸೇರಿದ್ದಾರೆ. ಒಂದೆಡೆಯಿಂದ ಮತ್ತೊಂದೆಡೆ ಮಂಗಗಳು ಗುಂಪಾಗಿ ಚಲಿಸುತ್ತಿವೆ. ಅಡಕೆ, ಭತ್ತದ ಕೆಲಸಕ್ಕೆ ಜನರೇ ಬರುತ್ತಿಲ್ಲ. ಮಂಗನ ಕಾಯಿಲೆಯಿಂದ ಮಲೆನಾಡಿಗೆ ಗರ ಬಡಿದಂತಾಗಿದೆ.

ಮಂಗನ ಕಾಯಿಲೆಗೆ ಹೆದರಿ ಮಂಡವಳ್ಳಿಯ ಬಾಲಚಂದ್ರ ಕುಟುಂಬ ಜಾನುವಾರುಗಳೊಂದಿಗೆ ಶಿರಸಿಯ ನೆಂಟರ ಮನೆಗೆ ಹೋಗಿದೆ. ಊರಿನಲ್ಲಿ ಆರೇಳು ಜನ ಸಾವನ್ನಪ್ಪಿದರೆ ಎಂಥವರಿಗೂ ಭಯವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಅರಳಗೋಡಿನ ಸುತ್ತಮುತ್ತ ಒಬ್ಬರಾದ ಮೇಲೊಬ್ಬರು ಮನೆಗಳಿಗೆ ಬೀಗ ಹಾಕಿ ಊರು ಬಿಡುತ್ತಿದ್ದಾರೆ. ಗುಳೇ ಹೋಗುವವರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ಅಂಗಡಿ ಮಾಲೀಕ ಮೇಘರಾಜ್. ಆದರೂ ಊರು ಬಿಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅರಳಗೋಡಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಗುಳೇ ಹೋಗಲು ಆರಂಭಿಸಿದ್ದಾರೆ.

ಮನೆಗಳಿಗೆ ಬೀಗ: ಅರಳಗೋಡಿನ ದಿನೇಶ್ ಜೈನ್, ತಮ್ಮ ಹೆಂಡತಿ ರಾಜಮತಿಗೆ ಮಣಿಪಾಲದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ‘ಒಂದೂವರೆ ತಿಂಗಳಿಂದ ಮನೆಗೆ ಬೀಗ ಹಾಕಿದ್ದೇವೆ. ಅಲ್ಲಿ ಹೋಗಲು ಹೆದರಿಕೆಯಾಗುತ್ತದೆ’ ಎಂದರು.

ಶಾಲೆಗೆ ಬಾರದ ಮಕ್ಕಳು: ಅರಳಗೋಡಿನ ಶಾಲೆ ಬಾಗಿಲು ತೆರೆದಿದ್ದರೂ ಯಾವುದೇ ಮಕ್ಕಳಿಲ್ಲ. ಶಿಕ್ಷಕರು ಶಾಲೆ ಎದುರು ಮಕ್ಕಳಿಗಾಗಿ ಕಾದು ಕುಳಿತಿದ್ದಾರೆ.

ಅಡಕೆ ಕೊನೆ ಕೊಯ್ಲು ಆಗಿಲ್ಲ

ತೋಟದ ಕೆಲಸ ಮಾಡದೆ ಒಂದೂವರೆ ತಿಂಗಳು ಕಳೆಯಿತು. ಮಂಗ ಎಲ್ಲಿ ಬರುತ್ತದೆಯೋ, ಉಣುಗು ಎಲ್ಲಿ ಕಚ್ಚುತ್ತದೆಯೋ ಎಂಬ ಹೆದರಿಕೆ ಕೂಲಿ ಕಾರ್ವಿುಕರನ್ನು ಕಾಡುತ್ತಿದೆ. ಕೊನೆ ಕೊಯ್ಲು ಮಾಡಲು ಯಾರೂ ಹೋಗುತ್ತಿಲ್ಲ. ಪರಿಸ್ಥಿತಿ ಸರಿ ಹೋಗುತ್ತದೆ ಎಂದು ಕಾಯುತ್ತಲೇ ಕುಳಿತ್ತಿದ್ದೇವೆ. ಆದರೆ ಸಾಯುವ ಮಂಗಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ ಎನ್ನುತ್ತಾರೆ ಕಾರ್ವಿುಕ ದಾವೂದ್ ಸಾಬ್.

ಮತ್ತೆರಡು ಮಂಗಗಳ ಸಾವು

ಸಿದ್ದಾಪುರ: ತಾಲೂಕಿನ ಮಾವಿನಗುಂಡಿ ಹಾಗೂ ವಂದಾನೆ ಸಮೀಪದ ಬಾಳಗೋಡಿನಲ್ಲಿ ತಲಾ ಒಂದು ಮಂಗ ಸಾವನ್ನಪ್ಪಿದೆ. ಸ್ಥಳಕ್ಕೆ ವೈದ್ಯರು, ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಗಡಿಭಾಗ ಮನಮನೆ, ಆಡುಕಟ್ಟಾ, ಹಲಗೇರಿ, ಮಾವಿನಗುಂಡಿ, ಕೊರ್ಲಕೈ ವ್ಯಾಪ್ತಿಯಲ್ಲಿ ಕಾಯಿಲೆ ಹರಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.

21 ಮಂದಿಗೆ ಕಾಯಿಲೆ ಇರುವುದು ದೃಢ

ಉಡುಪಿ: ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ 59 ಜನರು ಶಂಕಿತ ಕಾಯಿಲೆಗೆ ಚಿಕಿತ್ಸೆ ಪಡೆಯಲು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 21 ಜನರಿಗೆ ಮಂಗನ ಕಾಯಿಲೆ ದೃಢಪಟ್ಟಿದೆ. ದಾಖಲಾದವರಲ್ಲಿ 34 ಮಂದಿಗೆ ಕಾಯಿಲೆ ಇಲ್ಲ ಎಂಬ ವರದಿ ಬಂದಿದೆ. ಈಗಾಗಲೇ 33 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೆಎಂಸಿ ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *