ಶಿವಮೊಗ್ಗ ಆವರಿಸಿದ ನಂತರ ಕೇರಳಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ವೈಯನಾಡು: ಶಿವಮೊಗ್ಗ ಜಿಲ್ಲೆಯಲ್ಲಿ ಹತ್ತಾರು ಮಂದಿಯನ್ನು ಬಲಿ ಪಡೆದಿರುವ ಮಂಗನ ಕಾಯಿದೆ (ಕ್ಯಾಸನೂರು ಅರಣ್ಯ ಕಾಯಿಲೆ-ಕೆಎಫ್​ಡಿ) ಈಗ ಕೇರಳಕ್ಕೂ ಕಾಲಿಟ್ಟಿದ್ದು, ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮತ್ತೊಬ್ಬ ರೋಗಿಯಲ್ಲೂ ಇದೇ ಮಾದರಿಯ ಲಕ್ಷಣಗಳು ಕಂಡು ಬಂದಿದ್ದು, ಜಿಲ್ಲಾಡಳಿತ ಇನಷ್ಟೇ ಖಚಿತಪಡಿಸಬೇಕಾಗಿದೆ.

ಕರ್ನಾಟಕದ ಕೊಡಗಿಗೆ ಹೊಂದಿಕೊಂಡಂತೇ ಇರುವ ವಯನಾಡಿನಲ್ಲಿ ಮಂಗನ ಕಾಯಿಲೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಅಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

” ಕರ್ನಾಟಕದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಾಗಿನಿಂದ ಜಿಲ್ಲೆಯಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ನೀಡಲಾಗುತ್ತಿರುವ ಲಸಿಕೆಯನ್ನು ಜಿಲ್ಲೆಯಲ್ಲಿ ನೀಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ,” ಎಂದು ಕೇರಳ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್​ ಸದಾನಂದನ್​ ತಿಳಿಸಿದ್ದಾರೆ.

ವಯನಾಡಿನ ಅರನಪ್ಪಾರ ಬಳಿಯ ಅತಟ್ಟುಕುನ್ನು ಕಾಲೋನಿಯ 36 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತದ ಮಾದರಿಗಳನ್ನು ಪರಿಶೀಲಿಸಿದಾಗ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಆದರೆ, ರೋಗಿ ಅಪಾಯದಿಂದ ಪಾರಾಗಿದ್ದಾರೆ.

ಇನ್ನೊಂದೆಡೆ ತೋನಿಕ್ಕಡವು ಬಳಿಯ 27 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೋಯಿಕ್ಕೋಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಅವರಲ್ಲಿಯೂ ಮಂಗನ ಕಾಯಿಲೆಯ ಲಕ್ಷಣಗಳು ಗೋಚರಿಸಿವೆ. ಆದರೆ, ಇನ್ನೂ ದೃಢಪಟ್ಟಿಲ್ಲ.