ನಿವೇಶನ ವಿತರಣೆಯಲ್ಲಿ ಅವ್ಯವಹಾರ

ತರೀಕೆರೆ: ಕೆಮ್ಮಣ್ಣುಗುಂಡಿ ನಿರಾಶ್ರಿತರಿಗೆ ಲಿಂಗದಹಳ್ಳಿ ಗ್ರಾಪಂ ವ್ಯಾಪ್ತಿಯ ಕಲ್ಲಾಳು ಗ್ರಾಮದಲ್ಲಿ ನೀಡಿರುವ ನಿವೇಶನಕ್ಕೆ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದರು.

ಶುಕ್ರವಾರ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕೆಮ್ಮಣ್ಣುಗುಂಡಿಯ 63ಕ್ಕೂ ಅಧಿಕ ನಿರಾಶ್ರಿತರಿಗೆ ಲಿಂಗದಹಳ್ಳಿ ಗ್ರಾಪಂ ವ್ಯಾಪ್ತಿಯ ಕಲ್ಲಾಳು ಗ್ರಾಮದಲ್ಲಿ ನಿವೇಶನ ವ್ಯವಸ್ಥೆ ಕಲ್ಪಿಸಲಾಗಿದೆ. ಬಡಾವಣೆ ಅಭಿವೃದ್ಧಿಗೆ ರಾಜೀವ್​ಗಾಂಧಿ ವಸತಿ ನಿಗಮ 15 ಲಕ್ಷ ರೂ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಕೆಲವು ಪ್ರಭಾವಿಗಳು ಅಕ್ರಮವಾಗಿ ಹಣ ಪಡೆದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಫಲಾನುಭವಿಗಳಿಂದ ಹಣ ಪಡೆದವರೇ ಇಂದು ಜನರನ್ನು ಮೆಚ್ಚಿಸಲು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆಗೊಳಪಡಿಸಬೇಕು ಎಂದು ಇಒ ಡಾ. ಎ.ಬಿ.ಪ್ರಭಾಕರ್​ಗೆ ಸೂಚನೆ ನೀಡಿದರು.

ಸದಸ್ಯ ಹಾಲಾನಾಯ್ಕ ಮಾತನಾಡಿ, ಎಸ್​ಸಿಪಿ, ಟಿಎಸ್​ಪಿ ಯೋಜನೆಯಡಿ ಮುದುಗುಂಡಿ ಕ್ರಾಸ್​ನಿಂದ ಹೊಸಳ್ಳಿ ತಾಂಡವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ರಸ್ತೆ ಕಾಮಗಾರಿ ಮುಗಿದ ಬಳಿಕ ಎರಡೂ ಕಡೆ ರಸ್ತೆ ಬದಿಯ ಮಣ್ಣು ಹಾಕಲಾಗಿದೆ. ರಸ್ತೆ ಬದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ನೆಟ್ಟ ವಿವಿಧ ಜಾತಿ ಸಸಿಗಳು ನಾಶವಾಗಿವೆ ಎಂದರು.

ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಭೂ ಸೇನಾ ನಿಗಮದಿಂದ ನಿರ್ವಹಿಸಿದ ಬಹುತೇಕ ಕಾಮಗಾರಿಗಳು ಕಳಪೆ ಅಗಿದೆ. ಕೆಲವೊಂದು ಕಾಮಗಾರಿಗಳು ಪೂರ್ಣವೇ ಆಗಿಲ್ಲ. ಭೂಸೇನಾ ನಿಗಮದ ಅಧಿಕಾರಿಗಳು ಯಾರ ಹತೋಟಿಗೂ ಸಿಗುತ್ತಿಲ್ಲ. ಕೆಲವೊಮ್ಮೆ ಸಚಿವರ ಮಾತಿಗೂ ಕಿಮ್ಮತ್ತಿಲ್ಲ. ಮುಂದೆ ಇವರಿಗೆ ಯಾವುದೇ ಕಾಮಗಾರಿ ಕೊಡದಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

ತಾಪಂ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, ತಾಲೂಕಿನ ಕೆಲವೆಡೆ ಶುದ್ಧ ಗಂಗಾ ಘಟಕಗಳಿಗೆ ನಾಮಫಲಕ ಅಳವಡಿಸದೆ ಉದ್ಘಾಟನೆ ಮಾಡಲಾಗುತ್ತಿದೆ. ಹಲವು ಬಾರಿ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜೆಇ ಮಂಜುನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರ್ ಎನ್.ಟಿ.ಧಮೋಜಿರಾವ್, ಇಒ ಡಾ. ಎ.ಬಿ.ಪ್ರಭಾಕರ್, ತಾಪಂ ಉಪಾಧ್ಯಕ್ಷೆ ಜಿ.ಡಿ.ಮಂಜುಳಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಸುರೇಶ್​ಕುಮಾರ್ ಮತ್ತಿತರರಿದ್ದರು.

ಬೇಲೇನಹಳ್ಳಿ ಯೋಜನೆಗೆ ಮರು ಜೀವ: ನನೆಗುದಿಗೆ ಬಿದ್ದ ಬೇಲೇನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮರು ಟೆಂಡರ್ ಕರೆದು ಕಾಮಗಾರಿ ಚುರುಕಗೊಳಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಿರಿಯ ಇಂಜಿನಿಯರ್ ಮಂಜುನಾಥ್ ತಿಳಿಸಿದರು. ಸೊಪ್ಪಿನಮಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಕಾಮಗಾರಿಯ ರೂಪುರೇಷೆ ಬದಲಾಯಿಸಿ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.