ಹಣವನ್ನು ಉಳಿಸಿ ಬೆಳೆಸುವುದು ಹೇಗೆ?

  • ಖಾಸಗಿ ಉದ್ಯೋಗಿ. ಎಸ್​ಐಪಿಯಲ್ಲಿ ಹಣ ಹೂಡಲು ತೀರ್ವನಿಸಿದ್ದೇನೆ. ಮಾಹಿತಿ ನೀಡಿ.
| ಮಲ್ಲೇಶ್ ಬೆಂಗಳೂರು

ಹನಿಗೂಡಿದರೆ ಹಳ್ಳ ಎಂಬ ಮಾತನ್ನು ಕೇಳಿಲ್ಲವೇ? ಸರಳವಾಗಿ ಹೇಳುವುದಾದರೆ ಈ ಗಾದೆಮಾತಿಗೆ ಅನ್ವರ್ಥದಂತೆ ಎಸ್​ಐಪಿ ನಿಲ್ಲುತ್ತದೆ. ಎಸ್​ಐಪಿ ಅಂದರೆ ಮ್ಯೂಚುವಲ್ ಫಂಡ್​ಗಳಲ್ಲಿ ವ್ಯವಸ್ಥಿತವಾಗಿ ಹೂಡುವ ಯೋಜನೆ. ಇದರಲ್ಲಿ ನಿಯತವಾಗಿ ತಿಂಗಳಿಗೊಮ್ಮೆ ನಿರ್ದಿಷ್ಟ ಮೊತ್ತವನ್ನು ಹೂಡಬಹುದು. ತಿಂಗಳಿಗೆ ಕನಿಷ್ಠ 500 ರೂ. ಇದ್ದರೂ ಸರಿ, ಎಸ್​ಐಪಿಯಲ್ಲಿ ಹೂಡಿಕೆ ಆರಂಭಿಸಬಹುದು. ಇದಕ್ಕೆ ಪ್ಯಾನ್ ಕಾರ್ಡ್ ಜತೆ ಕೆವೈಸಿ ಇದ್ದರೆ ಸಾಕು. ಡಿಮ್ಯಾಟ್ ಖಾತೆ ಬೇಕಿಲ್ಲ. ನಿಮ್ಮೂರಿನಲ್ಲಿ ಮ್ಯೂಚುವಲ್ ಫಂಡ್ ಪ್ರತಿನಿಧಿಗಳು ಯಾರಾದರೂ ಇದ್ದರೆ, ಅವರು ಮ್ಯೂಚುವಲ್ ಫಂಡ್ ಆಯ್ಕೆಗೆ ಸಹಕರಿಸುತ್ತಾರೆ. ತಜ್ಞರ ಸಲಹೆ ಪಡೆದು ಆದಷ್ಟು ಲಾಭದಲ್ಲಿರುವ ಫಂಡ್ಸ್ ಆಯ್ಕೆ ಮಾಡಿಕೊಳ್ಳುವುದು ಒಳಿತು. ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಮ್ಯೂಚುವಲ್ ಫಂಡ್​ಗೆ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ ಮೂಲಕ ನಿಗದಿಪಡಿಸಿದಲ್ಲಿ ಸ್ವಯಂಚಾಲಿತವಾಗಿ ಪ್ರತಿ ತಿಂಗಳು ಎಸ್​ಐಪಿ ಖರೀದಿಗೆ ಹಣ ವರ್ಗಾವಣೆಯಾಗುತ್ತದೆ. ನಿಗದಿತ ಮೊತ್ತ ನಿರ್ದಿಷ್ಟ ದಿನಾಂಕದಂದು ಖಾತೆಯಲ್ಲಿಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಒಂದೊಮ್ಮೆ ಮ್ಯೂಚುವಲ್ ಫಂಡ್ ಖರೀದಿ ನಿಲ್ಲಿಸಬೇಕೆಂದರೆ ಬ್ಯಾಂಕ್​ಗೆ ಮೊದಲೇ ಮಾಹಿತಿ ನೀಡಿ. ಇದರಿಂದ ದೀರ್ಘಾವಧಿಯಲ್ಲಿ ಸಂಪತ್ತು ವೃದ್ಧಿ ಸಾಧ್ಯ. ಉದಾ: 5 ವರ್ಷದ ಮಗುವಿನ ಹೆಸರಿನಲ್ಲಿ ಪ್ರತಿ ತಿಂಗಳು 5 ಸಾವಿರ ಉಳಿಸುತ್ತ ಬಂದು ಶೇ. 15ರಷ್ಟು ಲಾಭ ಸಿಕ್ಕರೆ ಆ ಮಗುವಿಗೆ 18 ವರ್ಷ ತುಂಬುವಷ್ಟರಲ್ಲಿ ನಿಮ್ಮ ಕೈಯಲ್ಲಿ 22.3 ಲಕ್ಷ ರೂ. ಇರುತ್ತದೆ. ಇದು ಎಸ್​ಐಪಿಯ ಲೆಕ್ಕಾಚಾರ.

  • 35 ವರ್ಷದ ಉದ್ಯಮಿ. 1 ಕೋಟಿ ಮೊತ್ತದ ಕವರೇಜ್ ಇರುವ ಟಮ್ರ್ ಲೈಫ್ ಇನ್ಶೂರೆನ್ಸ್ ಮಾಡಿಸಲು ಯೋಚಿಸಿದ್ದೇನೆ. ಕಳೆದ ವಾರದ ನಿಮ್ಮ ಅಂಕಣದಲ್ಲಿ 40 ವರ್ಷದ ವ್ಯಕ್ತಿ ವಾರ್ಷಿಕ 19,056 ರೂ. ಪ್ರೀಮಿಯಂ ಪಾವತಿಸಿದರೆ 1 ಕೋಟಿ ರೂ. ಮೊತ್ತದ ಟಮ್ರ್ ಲೈಫ್ ಇನ್ಶೂರೆನ್ಸ್ ಸಿಗುತ್ತದೆ ಎಂದು ತಿಳಿದುಕೊಂಡೆ. ಆದರೆ ಅದರಲ್ಲಿ ಮೆಚ್ಯೂರಿಟಿ ಯಾವಾಗ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ.

| ಮಿಥುನ್ ನಂಜನಗೂಡು

ಟಮ್ರ್ ಲೈಫ್ ಇನ್ಶೂರೆನ್ಸ್​ನಲ್ಲಿ ಮೆಚ್ಯೂರಿಟಿ ಎಂಬ ಅಂಶವೇ ಇಲ್ಲ. ವ್ಯಕ್ತಿಯ ಮರಣದ ನಂತರವೂ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ವಿಮೆಯೇ ಟಮ್ರ್ ಲೈಫ್ ಇನ್ಶೂರೆನ್ಸ್ ಪಾಲಿಸಿ. ಇದು ಪ್ರತಿ ಕುಟುಂಬದ ಆಪತ್ಬಾಂಧವ. ಟಮ್ರ್ ಇನ್ಶೂರೆನ್ಸ್ ಯೋಜನೆಯು ಪಾಲಿಸಿದಾರರು ಆಕಸ್ಮಿಕ ಸಾವಿನ ವಿರುದ್ಧ ಪಡೆಯುವ ವಿಮೆ ರಕ್ಷಣೆ ಸೌಲಭ್ಯವನ್ನೊಳಗೊಂಡಿರುತ್ತದೆ. ಒಂದುವೇಳೆ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಮೃತಪಟ್ಟರೆ, ಗರಿಷ್ಠ ಮೊತ್ತದ ವಿಮಾ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ. ಟಮ್ರ್ ಇನ್ಶೂರೆನ್ಸ್ ಅತಿ ಅಗ್ಗದ ಉತ್ತಮ ಜೀವವಿಮೆ. ಆದರೂ ವಿಮಾ ಕಂಪನಿಗಳು ಟಮ್ರ್ ಇನ್ಶೂರೆನ್ಸ್ ಮಾರಾಟಕ್ಕೆ ಒತ್ತು ನೀಡುವುದಿಲ್ಲ. ಅವು ಎಂಡೋಮೆಂಟ್ ಅಥವಾ ಯುಲಿಪ್ ಥರದ ಪಾಲಿಸಿಗಳನ್ನು ಮಾತ್ರ ಮಾರುಕಟ್ಟೆಯಲ್ಲಿ ಪ್ರೋತ್ಸಾಹಿಸುತ್ತವೆ. ಬಹಳ ಜನ ಟಮ್ರ್ ಇನ್ಶೂರೆನ್ಸ್ ಬಗ್ಗೆ ಮಾತಾಡುವಾಗ ಅದು ನಷ್ಟದ ಹೂಡಿಕೆ ಎನ್ನುತ್ತಾರೆ. ಇದಕ್ಕೆ ಅವರು ಕೊಡುವ ಮುಖ್ಯ ಕಾರಣ, ಈ ವಿಮೆಯಲ್ಲಿ ಕಟ್ಟಿದ ಹಣ ವಾಪಸ್ ಬರದು ಎಂಬುದು. ಬಹುತೇಕರು ಹಣ ವಾಪಸ್ ನೀಡುವ (ಮನಿ ಬ್ಯಾಕ್) ಪಾಲಿಸಿಗಳೇ ಲಾಭಕರ ಎಂಬ ವಾದವನ್ನು ಒಪ್ಪಿಬಿಟ್ಟಿದ್ದಾರೆ. ಅಸಲಿ ವಿಚಾರವೇನೆಂದರೆ ವಿಮೆಗಾಗಿ ಕಟ್ಟಿದ ದುಡ್ಡು ಯಾವ ಪಾಲಿಸಿಯಲ್ಲೂ ಮರಳಿ ಸಿಗದು. ಟಮ್ರ್ ಪಾಲಿಸಿಯಲ್ಲಿ ನಾವು ವಿಮೆಯ ಪ್ರೀಮಿಯಂ ಮಾತ್ರ ಕಟ್ಟುತ್ತೇವೆ. ಹೂಡಿಕೆ ಸಹಿತದ ಇತರ ಪಾಲಿಸಿಗಳಲ್ಲಿ ವಿಮಾ ಪ್ರೀಮಿಯಂ ಜತೆ ಹೂಡಿಕೆಯ ಮೊತ್ತವನ್ನೂ ಕಟ್ಟುತ್ತೇವೆ. ಎರಡೂ ಸಂದರ್ಭಗಳಲ್ಲೂ ವಿಮಾ ಪ್ರೀಮಿಯಂ ಹಣ ವಾಪಸ್ ಬರದು. ಹೂಡಿಕೆ ಮೊತ್ತವಷ್ಟೇ ಮರಳಿ ಬರುತ್ತದೆ.

  • ನಾನು ಉಪನ್ಯಾಸಕ. ಐಟಿ ರಿಟರ್ನ್ಸ್ ನೀಡಬೇಕು. ಆದಾಯ ತೆರಿಗೆ ನಿಯಮದಂತೆ ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದರೇನು?

| ಚಂದ್ರಶೇಖರ ಶೆಟ್ಟಿ ಕುಂದಾಪುರ

ತೆರಿಗೆದಾರರ ನಿರ್ದಿಷ್ಟ ಹಣವನ್ನು ತೆರಿಗೆ ರಹಿತವನ್ನಾಗಿಸುವ ಪ್ರಕ್ರಿಯೆಯನ್ನು ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನಬಹುದು. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಇದನ್ನು ಜಾರಿಗೆ ತರಲಾಗಿದೆ. 2019-2020ರ ಆರ್ಥಿಕ ವರ್ಷದಿಂದ ಇದು ಅನ್ವಯಿಸಲಿದೆ. 2018ರಲ್ಲಿ ಹಣಕಾಸು ಕಾಯ್ದೆಯಲ್ಲಿ ಬದಲಾವಣೆ ತಂದು ಸ್ಟ್ಯಾಂಡರ್ಡ್ ಡಿಡಕ್ಷನ್ ಜಾರಿಗೆ ತರಲಾಗಿದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 16ರ ಪ್ರಕಾರ ಸ್ಟ್ಯಾಂಡರ್ಡ್ ಡಿಡಕ್ಷನ್ ಅನುಷ್ಠಾನಕ್ಕೆ ಬಂದಿದೆ. ಇದರಂತೆ ಮಾಸಿಕ ಸಂಬಳ ಪಡೆಯುತ್ತಿರುವ ವ್ಯಕ್ತಿ ಅಥವಾ ಪೆನ್ಷನ್ ಪಡೆಯುತ್ತಿರುವ ವ್ಯಕ್ತಿ ತಮ್ಮ ಆದಾಯದಲ್ಲಿ 50 ಸಾವಿರಕ್ಕೆ (2019-20ನೇ ಆರ್ಥಿಕ ವರ್ಷದಲ್ಲಿ) ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಸಾಮಾನ್ಯ ಪ್ರಕ್ರಿಯೆಯಲ್ಲಿ ತೆರಿಗೆ ವಿನಾಯಿತಿಗೆ ಮನವಿ ಸಲ್ಲಿಸುವಾಗ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆದರೆ ಸ್ಟ್ಯಾಂಡರ್ಡ್ ಡಿಡಕ್ಷನ್ ಪಡೆಯಲು ಯಾವುದೇ ಖರ್ಚುವೆಚ್ಚ ಅಥವಾ ಆದಾಯದ ದಾಖಲೆ ನೀಡಬೇಕಿಲ್ಲ.

  • ಟಮ್ರ್ ಲೈಫ್ ಇನ್ಶೂರೆನ್ಸ್​ನಲ್ಲಿ ಕ್ಲೇಮ್ ಸೆಟಲ್​ವೆುಂಟ್ ರೇಷಿಯೋ ಎಂದರೇನು? ಇದರ ಮಾಹಿತಿ ಎಲ್ಲಿ ಸಿಗುತ್ತದೆ? ಟಮ್ರ್ ಲೈಫ್ ವಿಮೆ ಪಡೆದುಕೊಳ್ಳುವಾಗ ಇದರ ಪ್ರಾಮುಖ್ಯತೆ ಏನು?

| ಕರಿಬಸವ ಹುಬ್ಬಳ್ಳಿ

ಯಾವುದೇ ವಿಮೆ ಕೊಳ್ಳುವಾಗ ಕ್ಲೇಮ್ ಸೆಟಲ್​ವೆುಂಟ್ ರೇಷಿಯೋ (ಅನುಪಾತ) ಪರಿಗಣಿಸುವುದು ಬಹಳ ಮುಖ್ಯ. ಇನ್ಶೂರೆನ್ಸ್ ಕ್ಲೇಮ್ಾಗಿ ಅರ್ಜಿ ಸಲ್ಲಿಸಿರುವವರ ಪೈಕಿ ಎಷ್ಟು ಜನರ ಕ್ಲೇಮ್ ಅರ್ಜಿಯನ್ನು ವಿಮಾ ಕಂಪನಿ ಪುರಸ್ಕರಿಸಿದೆ ಎನ್ನುವುದನ್ನು ಕ್ಲೇಮ್ ಸೆಟಲ್​ವೆುಂಟ್ ರೇಷಿಯೋ ಎಂದು ಕರೆಯಲಾಗುತ್ತದೆ. ಕ್ಲೇಮ್ ಸೆಟಲ್​ವೆುಂಟ್ ರೇಷಿಯೋ ಶೇ. 90ಕ್ಕಿಂತ ಕಡಿಮೆ ಇದ್ದಲ್ಲಿ ಅಂತಹ ಕಂಪನಿಗಳ ವಿಮೆ ಪಡೆದುಕೊಳ್ಳುವುದು ಅಷ್ಟು ಸುರಕ್ಷಿತವಲ್ಲ. ಹೆಚ್ಚು ಕ್ಲೇಮ್ ರೇಷಿಯೋ ಇರುವ ವಿಮಾ ಕಂಪನಿಗಳ ಇನ್ಶೂರೆನ್ಸ್ ಪಡೆದುಕೊಂಡರೆ ನಿಮಗೆ ಹೆಚ್ಚು ಸುರಕ್ಷತೆ ಇರುತ್ತದೆ. ಐಆರ್​ಡಿಎಐ (ಇನ್ಶೂರೆನ್ಸ್ ರೆಗ್ಯೂಲೇಟರ್ ಅಥಾರಿಟಿ ಆಫ್ ಇಂಡಿಯಾ) ಪ್ರತಿ ವರ್ಷ ಎಲ್ಲ ವಿಮಾ ಕಂಪನಿಗಳ ಕ್ಲೇಮ್ ಸೆಟಲ್​ವೆುಂಟ್ ರೇಷಿಯೋ ಪ್ರಕಟಿಸುತ್ತದೆ. ಇದು ಅತ್ಯಂತ ನಿಖರ ಮತ್ತು ವಿಶ್ವಾಸಾರ್ಹ ಅಂಕಿಅಂಶ. ಐಆರ್​ಡಿಎಐ ವೆಬ್​ಸೈಟ್​ನಲ್ಲಿ ಇದರ ಸಂಪೂರ್ಣ ಮಾಹಿತಿ ಸಿಗುತ್ತದೆ. ವೆಬ್​ಸೈಟ್: https://www.irdai.gov.in

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ – ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.

ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]

ಉಚಿತವಾಗಿ ಕ್ರೆಡಿಟ್ ಸ್ಕೋರ್ ಪರೀಕ್ಷಿಸಿ

IndianMoney.com ವೆಬ್​ಸೈಟ್​ಗೆ ಲಾಗಿನ್ ಆಗಿ. ಕ್ರೆಡಿಟ್ ಸ್ಕೋರ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಪ್ಯಾನ್ ಕಾರ್ಡ್ ನಂಬರ್ ಸೇರಿ ಕೆಲ ಮಾಹಿತಿ ನೀಡಿ. ಕೆಲವೇ ಸೆಕೆಂಡುಗಳಲ್ಲಿ ಕ್ರೆಡಿಟ್ ಸ್ಕೋರ್ ಲಭ್ಯ.