More

  ಪಡಿತರ ಬಯೋಮೆಟ್ರಿಕ್​ಗಾಗಿ ಹಣ ವಸೂಲಿ

  ಬ್ಯಾಡಗಿ: ಪಡಿತರ ಪಡೆಯುವಾಗ ಬಯೋಮೆಟ್ರಿಕ್​ಗಾಗಿ 10 ರೂ. ಅಕ್ರಮವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ನೆಲ್ಲಿಕೊಪ್ಪ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದರು.

  ಗ್ರಾಮದಲ್ಲಿ 300ಕ್ಕೂ ಹೆಚ್ಚು ಪಡಿತರ ಚೀಟಿಗಳಿದ್ದರೂ ಗ್ರಾಮದಲ್ಲಿ ಪಡಿತರ ವಿತರಿಸುತ್ತಿಲ್ಲ. ವೃದ್ಧರು, ಅಂಗವಿಕಲರು ಸೇರಿ ಪ್ರತಿ ಕುಟುಂಬದ ಸದಸ್ಯರು ಒಮ್ಮೆ ಬಯೋಮೆಟ್ರಿಕ್ ನೀಡಲು, ಇನ್ನೊಮ್ಮೆ ಆಹಾರ ಧಾನ್ಯ ಪಡೆಯಲು 3-4 ಕಿ.ಮೀ. ಅಂತರದ ಕುಮ್ಮೂರು ಗ್ರಾಮಕ್ಕೆ ತೆರಳಬೇಕು. ಕೂಡಲೆ ಸಮಸ್ಯೆ ಬಗೆಹರಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.

  ತಹಸೀಲ್ದಾರ್ ಶರಣಮ್ಮ ಕಾರಿ ಪ್ರತಿಕ್ರಿಯಿಸಿ, ಸರ್ಕಾರದಿಂದ ಯಾವುದೇ ಸಹಕಾರಿ ಸಂಘ, ಪರವಾನಗಿ ಹೊಂದಿದ ವಿತರಕರು ಸಾರ್ವಜನಿಕರಿಂದ ಹಣ ವಸೂಲು ಮಾಡುವುದು ಅಪರಾಧ. ಘಟನೆಯ ಗಂಭೀರತೆ ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಹಣ ನೀಡಬಾರದು ಎಂದು ಸ್ಪಷ್ಟಪಡಿಸಿದರು.

  ಗ್ರಾಮಲೆಕ್ಕಾಧಿಕಾರಿ ನಿರ್ಲಕ್ಷ್ಯಕ್ಕೆ ಆಕ್ರೋಶ: ಅಟಲ್​ಜಿ ಜನಸ್ನೇಹಿ ಕೇಂದ್ರದ ಆದೇಶದಂತೆ ಗ್ರಾಮಲೆಕ್ಕಾಧಿಕಾರಿ ಪ್ರತಿ ಮನೆಗೂ ತೆರಳಿ ಜಾತಿ, ಆದಾಯದ ವರದಿ ಸಿದ್ಧಪಡಿಸಿ, ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಬೇಕು. ಆದರೆ, ಅವರ ತಪ್ಪಿನಿಂದ ಗ್ರಾಮಸ್ಥರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಜಾತಿ, ಆದಾಯ ಪತ್ರಕ್ಕೆ ಕಚೇರಿಗೆ ಅಲೆದಾಡುವುದು ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್, ಕಂದಾಯ ಇಲಾಖೆ ಅಧಿಕಾರಿ ಆರ್.ವೈ. ಬೋಗಾರ ಅವರು ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

  ಬರಿದಾದ ಮೀಸಲು ಅರಣ್ಯಭೂಮಿ: ವಲಯ ಅರಣ್ಯ ಇಲಾಖೆಯ 200 ಎಕರೆ ಪ್ರದೇಶದಲ್ಲಿ ನೆಪಮಾತ್ರಕ್ಕೆ ಸಸಿಗಳನ್ನು ಹಚ್ಚಿ ಖರ್ಚು ತೋರಿಸಲಾಗುತ್ತಿದೆ. ಕಾವಲುಗಾರನು ಇಲ್ಲ, ನೀರು ಸಹ ಹಾಕಿಲ್ಲ. ದಾಖಲೆಯಲ್ಲಿ ಲಕ್ಷಾಂತರ ರೂ. ಖರ್ಚು ತೋರಿಸುತ್ತಿದ್ದು, ಸಸಿಗಳನ್ನು ಬೆಳೆಸಲು ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ವಿಷಯಕ್ಕೆ ಪ್ರತಿಕ್ರಿಯಸಬೇಕಾಗಿದ್ದ ವಲಯ ಅರಣ್ಯಾಧಿಕಾರಿ ಗೈರಾಗಿದ್ದರು. ಅಧಿಕಾರಿಗಳ ನಿರ್ಲಕ್ಷ್ಯ್ಕೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

  ಗ್ರಾಮಕ್ಕೆ ಹೊಂದಿಕೊಂಡಂತೆ, ನೀರುಗಾಲುವೆ ಹಾಗೂ ರೈತರ ಹೊಲದ ರಸ್ತೆ ಕುರಿತು ಭೂಮಾಲೀಕನೊಬ್ಬ ತಕರಾರು ಮಾಡುವ ಮೂಲಕ ತೊಂದರೆ ಉಂಟು ಮಾಡುತ್ತಿದ್ದಾನೆ. ಗ್ರಾಮ ಪಂಚಾಯಿತಿಯಲ್ಲಿ ಠರಾವು ಮಾಡಿ, ಕಾಮಗಾರಿ ನಡೆಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಕಾಯ್ದೆ ಪ್ರಕಾರ ಮೂಲ ದಾರಿ ಹುಡುಕಿಕೊಡಿ ಎಂದು ಗದಿಗೆಪ್ಪ ಲಮಾಣಿ ಹಾಗೂ ಗ್ರಾಮಸ್ಥರು ಅರ್ಜಿ ನೀಡಿ ಒತ್ತಾಯಿಸಿದರು.

  ತಹಸೀಲ್ದಾರರು ಪ್ರತಿಕ್ರಿಯಿಸಿ, ಹದ್ದುಬಸ್ತು ಮಾಡಿಸಲು ಸೂಚಿಸಲಾಗುವುದು. ತಕರಾರು ಮಾಡಿದಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ನೀಲಪ್ಪ ಕಜ್ಜರಿ ಅವರಿಗೆ ತಿಳಿಸಿದರು.

  ತಾಪಂ ಸದಸ್ಯ ಮಹೇಶಗೌಡ್ರ ಪಾಟೀಲ, ಗ್ರಾಪಂ ಅಧ್ಯಕ್ಷೆ ಲಲಿತವ್ವ ಲಮಾಣಿ, ತಾಪಂ ಇಒ ಅಬೀದ್ ಗದ್ಯಾಳ, ತೋಟಗಾರಿಕೆ ಇಲಾಖೆ ನಿರ್ದೇಶಕಿ ಟಿ. ವಿಜಯಲಕ್ಷ್ಮೀ, ಹೆಸ್ಕಾಂ ಇಂಜಿನಿಯರ್ ಹಾಲೇಶ ಅಂತರವಳ್ಳಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts