ಯಲ್ಲಾಪುರ: ದತ್ತ ಮಂದಿರ ಭಕ್ತರಿಗೆ ನೆರಳಾಗಬೇಕು. ಅನ್ನದಾನ, ಗೋ ಸೇವೆ ನಡೆಯಬೇಕು. ದತ್ತ ಭೀಕ್ಷೆ ನಿರಂತರವಾಗಿ ನಡೆಯಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ನಾಯಕನಕೆರೆಯ ದತ್ತ ಮಂದಿರ ಲೋಕಾರ್ಪಣಾ ಕಾರ್ಯಕ್ರಮದ ಮೂರನೇ ದಿನ ಬ್ರಹ್ಮ ಕಲಶಾಭಿಷೇಕದಲ್ಲಿ ಸಾನ್ನಿಧ್ಯ ವಹಿಸಿ, ಕಾರ್ಯಕರ್ತರು, ಶಿಷ್ಯರು, ಭಕ್ತರನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.
ಶಿವಾನಂದರ ಗುರುಮೂರ್ತಿಗೆ ಸುಂದರ ಆವರಣವಾಗಬೇಕು. ಇದಕ್ಕೆ ಹಣ, ಸ್ಥಳ ಗೌಣ. ದತ್ತನ ಕರುಣೆ, ಜನರ ಸಹಕಾರ ಬೇಕು. ಮುಂದಿನ ದತ್ತ ಜಯಂತಿಗೆ ಭೀಕ್ಷಾ ಮಂದಿರ ನಿರ್ವಣವಾಗಬೇಕು ಎಂದು ಆದೇಶಿಸಿದರು.
ದತ್ತ ಮಂದಿರ ಯಲ್ಲಾಪುರದ ಪುಷ್ಪಕ ವಿಮಾನ. ಎಲ್ಲದಕ್ಕೂ ಎಲ್ಲರಿಗೂ ಅವಕಾಶ ಇಲ್ಲಿದೆ. ಪ್ರತಿ ವರ್ಷ ಇಲ್ಲಿ ದತ್ತ ಜಯಂತಿಯ ಪ್ರಯುಕ್ತ ದತ್ತ ಯಾತ್ರೆ ನಡೆಯಬೇಕು. ಮೊದಲು ಯಲ್ಲಾಪುರ, ನಂತರ ಎಲ್ಲಾ ಪುರಗಳನ್ನು ತಲುಪಲಿ ಎಂದು ಆಶಿಸಿದರು. ದತ್ತ ಮಂದಿರದ ಉಸ್ತುವಾರಿ ಮಹೇಶ ಚಟ್ನಳ್ಳಿ ನಿರೂಪಿಸಿದರು.