ಇಂದು ಬಂದ್ ಬಿಸಿ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿರುವ ಭಾರತ್ ಬಂದ್​ಗೆ ರಾಜ್ಯದಲ್ಲೂ ಬೆಂಬಲ ಸಿಕ್ಕಿದ್ದು, ಜನಜೀವನದ ಮೇಲೆ ಪರಿಣಾಮ ಬೀರಲಿದೆ. ಬಂದ್​ಗೆ ರಾಜ್ಯದಲ್ಲಿ ಅಧಿಕಾರ ಹಂಚಿಕೊಂಡಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲ ಘೋಷಿಸಿವೆ.

ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಸೇರಿ ವಿಪಕ್ಷಗಳು ಸೋಮವಾರ (ಸೆ.10) ಕರೆ ನೀಡಿರುವ ಭಾರತ್ ಬಂದ್​ಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೆಂಬಲ ಘೋಷಿಸಿದ್ದು, ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಲಿದೆ. ರಾಜ್ಯಾದ್ಯಂತ ಸರ್ಕಾರಿ ಬಸ್, ಆಟೋ, ಟ್ಯಾಕ್ಸಿ ಸೇವೆ ವ್ಯತ್ಯಯವಾಗಲಿದೆ. ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.

ಸಮಯದ ಗೊಂದಲ: ಕಾಂಗ್ರೆಸ್ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಬಂದ್​ಗೆ ಕರೆ ನೀಡಿದೆ. ಆದರೆ ಕೆಲ ಸಂಘಟನೆಗಳು ತಮ್ಮದೇ ಸಮಯ ಹೇಳುತ್ತಿವೆ. ಆಪ್ ಆಧಾರಿತ ಟ್ಯಾಕ್ಸಿ ಚಾಲಕರ ಸಂಘಟನೆ ಬೆಳಗ್ಗೆ 6ರಿಂದ ಬಂದ್ ಎನ್ನುತ್ತಿದೆ. ಇದೇ ರೀತಿ ಹಲವು ಸಂಘಟನೆಗಳು ತಮ್ಮದೇ ಸಮಯ ನಿಗದಿಪಡಿಸಿಕೊಂಡಿವೆ.

ಇಂಧನ ಜಿಎಸ್​ಟಿ ವ್ಯಾಪ್ತಿಗೆ ಬರಲಿ: ಬಂದ್​ನಿಂದ ತಟಸ್ಥವಾಗಿರಲು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್ಸ್ ಸಂಘಗಳ ಒಕ್ಕೂಟ ನಿರ್ಧರಿಸಿದೆ. ಇಂಧನದ ಮೇಲೆ ಕೇಂದ್ರ ಸರ್ಕಾರ 15 ರೂ. ಹಾಗೂ ರಾಜ್ಯ ಸರ್ಕಾರ 12.50 ರೂ. ತೆರಿಗೆ ಹೇರಿದೆ. ಇಂಧನ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳೂ ಕಾರಣ. ಇಂಧನ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಬರಬೇಕು ಎಂದು ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಆಗ್ರಹಿಸಿದ್ದಾರೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಭಾರತ್ ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿದೆ. ಬೀದರ್ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಬಂದ್ ಆಚರಿಸಲಾಗುತ್ತಿಲ್ಲ.

ಬಂದ್ ಮಾಡಲ್ಲ, 1 ಗಂಟೆ ಹೆಚ್ಚು ಕೆಲಸ!

ರಾಜಕೀಯ ಪಕ್ಷವೊಂದು ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಂದ್ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆೆ. ಆದರ್ಶ ಆಟೋ ಸಂಘಟನೆ, ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್ಸ್ ಸಂಘಗಳ ಒಕ್ಕೂಟ, ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಸಂಘಟನೆ ಭಾರತ್ ಬಂದ್ ‘ರಾಜಕೀಯ ಪ್ರೇರಿತ’ ಎಂಬ ಕಾರಣ ನೀಡಿ ಬೆಂಬಲ ನೀಡದೆ ಹಿಂದೆ ಸರಿದಿದೆ. ರಾಜ್ಯ ಸೇರಿ ದೇಶಾದ್ಯಂತ ಕೆಲ ಅಂಗಡಿ ಮಾಲೀಕರು ಬಂದ್ ವಿರೋಧಿಸಿ ಸೆ.10ರಂದು ಪ್ರತಿನಿತ್ಯಕ್ಕಿಂತ ಮಳಿಗೆಯನ್ನು 1 ಗಂಟೆ ಹೆಚ್ಚು ತೆರೆದಿರಲು ನಿರ್ಧರಿಸಿದ್ದಾರೆ. ಬಂದ್ ದಿನ 1 ಗಂಟೆ ಹೆಚ್ಚಾಗಿ ಅಂಗಡಿ ತೆರೆದಿರಲಿದೆ ಎಂದು ಮುಂಭಾಗದಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ.

ಯಾರ್ಯಾರ ಬೆಂಬಲ

ರಾಜ್ಯದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಜ್ಯ ಸಮಿತಿ ಹಾಗೂ ಕೆಎಸ್​ಆರ್​ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್, ಓಲಾ ಮತ್ತು ಊಬರ್ ಚಾಲಕರ ಸಂಘ, ಕೆಲ ಕನ್ನಡ ಪರ ಸಂಘಟನೆಗಳು, ಕನ್ನಡ ಚಳವಳಿ ವಾಟಾಳ್ ಪಕ್ಷ, ಸಿಐಟಿಯು ಸಂಯೋಜಿತ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ನೌಕರರ ಸಂಘಟನೆ, ಕರ್ನಾಟಕ ಜ್ಯೂವೆಲ್ಲರಿ ಅಸೋಸಿಯೇಷನ್.

ನೋ ವರ್ಕ್ ನೋ ಪೇ!

ಕೆಎಸ್​ಆರ್​ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಬಂದ್​ಗೆ ಬೆಂಬಲ ನೀಡಿ, ನೌಕರರಿಗೆ ಬಂದ್​ನಲ್ಲಿ ಭಾಗವಹಿಸಲು ಕರೆ ನೀಡಿದ ಬೆನ್ನಲ್ಲೇ ಸೋಮವಾರ ಗೈರಾಗುವ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿಗಮ ಸುತ್ತೋಲೆ ಹೊರಡಿಸಿದೆ.

ಬಂದ್ ಸಂವಿಧಾನ ವಿರೋಧಿ. ಇದರಿಂದ ಉಂಟಾಗಬಹುದಾದ ನಷ್ಟವನ್ನು ಕರೆ ನೀಡಿದವರೇ ಭರಿಸಬೇಕು. ಕಾಂಗ್ರೆಸ್ ಕರೆ ನೀಡಿದ್ದು, ಪಕ್ಷವೇ ಅನುಭವಿಸಬೇಕಾಗುತ್ತದೆ.

| ಬಿ.ಜನಾರ್ದನ ಪೂಜಾರಿ, ಕೇಂದ್ರ ಮಾಜಿ ಸಚಿವ

ರಾಜ್ಯ ಸರ್ಕಾರ ತೆರಿಗೆ ಇಳಿಸಲಿ!

2017 ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿ ಬಳಿಕ ಅಂದಿನ ಸರ್ಕಾರ ಕರ್ನಾಟಕ ಪ್ರವೇಶ ತೆರಿಗೆ ಶೇ.5 ರದ್ದುಪಡಿಸಿತ್ತು. ಇದರಿಂದಾಗಿ ಅಂದಾಜು ಪ್ರತಿ ಲೀಟರ್ ಪೆಟ್ರೋಲ್ ದರ 3.37 ರೂ. ಹಾಗೂ ಡೀಸೆಲ್ ದರ 2.79 ರೂ. ಕಡಿಮೆಯಾಗಿತ್ತು. ಆಗ ಪ್ರತಿ ಲೀಟರ್ ಪೆಟ್ರೋಲ್ ದರ 64.29 ರೂ., ಡೀಸೆಲ್ 54.28 ರೂ. ಇತ್ತು. ಈಗಿನ ಸಮ್ಮಿಶ್ರ ಸರ್ಕಾರ ಜುಲೈನಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಶೇ.30ರಿಂದ ಶೇ.32ಕ್ಕೆ ಹಾಗೂ ಡೀಸೆಲ್ ಮೇಲಿನ ತೆರಿಗೆ ಶೇ.19ರಿಂದ ಶೇ.21ಕ್ಕೆ ಏರಿಸಿತ್ತು. ಇದರಿಂದ ಪೆಟ್ರೋಲ್ ದರ 1.14 ರೂ. ಹಾಗೂ ಡೀಸೆಲ್ ದರ 1.12 ರೂ. ಹೆಚ್ಚಿತ್ತು. ಈಚೆಗೆ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಸರ್ಕಾರಗಳು ಇಂಧನ ಮೇಲಿನ ತೆರಿಗೆ ಇಳಿಸಿದ್ದರಿಂದ ದರವೂ ಇಳಿದಿತ್ತು.

ಯುಪಿಎ ಅಧ್ವಾನ

ನವದೆಹಲಿ: ತೈಲ ಬೆಲೆ ಮಿತಿಮೀರಿ ಏರಿಕೆಯಾಗಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗಿದೆ ಎಂದು ಪ್ರಧಾನಿ ಮೋದಿ ಸರ್ಕಾರವನ್ನು ಗುರಿಯಾಗಿಸಿ ಭಾರತ್ ಬಂದ್​ಗೆ ಕರೆ ನೀಡಿರುವ ಕಾಂಗ್ರೆಸ್, ಯುಪಿಎ ಅವಧಿಯಲ್ಲಿ ಮಾಡಿದ ಸಾಲದ ಹೊರೆಯನ್ನು ಎನ್​ಡಿಎ ಸರ್ಕಾರ ತೀರಿಸಿದೆ ಎಂಬುದನ್ನು ಮರೆಮಾಚುತ್ತಿದೆಯೇ? ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದಕ್ಕೆ ಪೂರಕವೆಂಬಂತೆ ಕಳೆದ ಜೂನ್ 26ರಂದು ಪೆಟ್ರೋಲಿಯಂ ಸಚಿವರ ಧಮೇಂದ್ರ ಪ್ರಧಾನ್, ‘ತೈಲ ಬಾಂಡ್​ಗಳ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿದ್ದ 2 ಲಕ್ಷ ಕೋಟಿ ರೂ. ಸಾಲವನ್ನು ಎನ್​ಡಿಎ ಸರ್ಕಾರ ತೀರಿಸಿದೆ’ ಎಂದಿದ್ದರು. ತುರ್ತಪರಿಸ್ಥಿತಿಯ 43 ವರ್ಷದ ಹಿನ್ನೆಲೆ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ್ದರು. ತಮ್ಮ ಆಡಳಿತಾವಧಿಯಲ್ಲಿ ನಡೆದ ಸರಣಿ ಹಗರಣಗಳಿಂದಾಗಿ ಮತ್ತೆ ಅಧಿಕಾರಕ್ಕೇರುವುದು ಅಸಾಧ್ಯ ಎಂದು ಕಾಂಗ್ರೆಸ್​ಗೆ ತಿಳಿದಿತ್ತು. ಹಾಗಾಗಿ ಯುಪಿಎ ಸರ್ಕಾರ 1.44 ಲಕ್ಷ ಕೋಟಿ ರೂ. ಆಯಿಲ್ ಬಾಂಡ್ ಖರೀದಿಸಿತ್ತು. ಮೋದಿ ಅವರ ಸರ್ಕಾರ ರಚನೆಯಾದ ಮೇಲೆ ಅದು ನಮಗೆ ವರ್ಗವಾಯಿತು. 70 ಸಾವಿರ ಕೋಟಿ ರೂ. ಬಡ್ಡಿ ಸೇರಿ ಒಟ್ಟು 2 ಲಕ್ಷ ಕೋಟಿ ರೂ. ಅನ್ನು ಮೋದಿ ಸರ್ಕಾರ ತೀರಿಸಿದೆ ಎಂದು ಪ್ರಧಾನ್ ವಿವರಿಸಿದ್ದರು.

ಯಾರ ಬೆಂಬಲವಿಲ್ಲ

ಪೆಟ್ರೋಲ್ ಬಂಕ್ ಮಾಲೀಕರ ಸಂಘಟನೆ, ಹೋಟೆಲ್ ಉದ್ದಿಮೆದಾರರ ಸಂಘ, ಕೆಲ ಆಟೋ ಸಂಘಟನೆಗಳು, ಮಾಲ್​ಗಳು, ಕೆಲ ಸಂಘಟನೆಗಳು ನೈತಿಕ ಬೆಂಬಲ ನೀಡಿವೆ. ಬಿಎಂಆರ್​ಸಿಎಲ್, ಲಾರಿ ಮಾಲೀಕರ ಸಂಘ ಮತ್ತು ಪ್ರವಾಸಿ ವಾಹನ ಮಾಲೀಕರ ಸಂಘ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಬಂದ್ ಬೆಂಬಲಿಸಿಲ್ಲ.