More

    ಬದುಕುವ ದಾರಿ ತಿಳಿಸುವ ಮಠಗಳು

    ಹಾವೇರಿ: ಮಠಗಳು ಜನಪರ ಕಾಳಜಿಯಲ್ಲಿ ಸರ್ಕಾರ ಮಾಡುವ ಕೆಲಸಗಳನ್ನು ಮಾಡುತ್ತಿವೆ. ಸಮಾಜದ ಎಲ್ಲರಿಗೂ ಅನ್ನ, ಅರಿವು, ಅಕ್ಷರ ನೀಡುವುದರ ಮೂಲಕ ಬದುಕಿಗೆ ದಾರಿ ಮಾಡಿಕೊಡುತ್ತಿವೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

    ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಶಿವಬಸವ ಸ್ವಾಮಿಗಳ 74ನೇ ಹಾಗೂ ಲಿಂ. ಶಿವಲಿಂಗ ಸ್ವಾಮಿಗಳ 11ನೇ ಪುಣ್ಯ ಸ್ಮರಣೋತ್ಸವ ಹಾಗೂ ನಮ್ಮೂರ ಜಾತ್ರೆಯಲ್ಲಿ ಭಾನುವಾರ ರಾತ್ರಿಯ ಧಾರ್ವಿುಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಲು ನಾಡಿನಲ್ಲಿ ಮಠಗಳು ನೀಡುತ್ತಿರುವ ಶೈಕ್ಷಣಿಕ ಹಾಗೂ ಧಾರ್ವಿುಕ ಸಂಸ್ಕಾರವೇ ಕಾರಣವಾಗಿದೆ. ಅದರಲ್ಲಿ ಹುಕ್ಕೇರಿಮಠವೂ ಒಂದು. ಮಠಮಾನ್ಯಗಳ ಜಾತ್ರೆಗಳು ಕೇವಲ ಬೆಂಡು, ಬೆತ್ತಾಸದ ಜಾತ್ರೆಗಳಾಗದೇ ಭಕ್ತರ ಉದ್ಧಾರ ಹಾಗೂ ಸಮಾಜಮುಖಿ ಮತ್ತು ರೈತಮುಖಿಯಾದಾಗ ಅದು ನಿಜವಾದ ಉತ್ಸವಗಳಾಗುತ್ತವೆ. ಆಧುನಿಕ ಬದುಕು ಬಹಳ ಸಂಕೀರ್ಣವಾಗಿದ್ದು, ಹೊಸ ಸಮಸ್ಯೆಗಳು, ಸವಾಲುಗಳು ಎದುರಾಗುತ್ತಿವೆ. ಹಾಗಾಗಿಯೇ ಇದ್ದುದರಲ್ಲಿಯೇ ಸಮಾಧಾನದ ಬದುಕು ನಮ್ಮದಾಗಬೇಕು. ಹಂಸಪಕ್ಷಿಗಿಂತ ಗಿಳಿ ಸುಂದರ, ಗಿಳಿಗಿಂತ ನವಿಲು ಸುಂದರ, ಆದರೆ, ಕಾಗೆ ಕಪ್ಪಗಿದ್ದರೂ ಅದರ ಬದುಕು ಬೇರೆ ಪಕ್ಷಿಗಳಿಗಿಲ್ಲ. ಹಾಗಾಗಿ ಶರಣರು ಕಾಗೆಯ ಸಾಮಾಜಿಕ ಬದುಕನ್ನು ಹೋಲಿಸಿ ಹೇಳಿದ್ದಾರೆ. ನಮಗೆ ಬಣ್ಣ ಮಹತ್ವದ್ದಲ್ಲ, ಬದುಕು ಮಹತ್ವದ್ದಾಗಿರಬೇಕು ಎಂದರು.

    ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಇದ್ದಾಗ ಬರುವವರು ಗುರುಗಳಲ್ಲ. ಬಿದ್ದಾಗ ಬರುವವರು ನಿಜವಾದ ಗುರುಗಳು. ಸಂತನ ಜೀವನ ಸ್ವಂತಕ್ಕಲ್ಲ ಅದು ಭಕ್ತರಿಗೆ ಮಾತ್ರ. ಭೂಮಿಗೆ ತರುವವಳು ತಾಯಿಯಾದರೆ ಭೂಮಿಯಿಂದ ಸ್ವರ್ಗಕ್ಕೆ ಒಯ್ಯುವವನು ಗುರು. ಅಂತಹ ಗುರುಗಳು ಲಿಂ. ಶಿವಬಸವ ಶಿವಲಿಂಗ ಶ್ರೀಗಳು ಎಂದರು.

    ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ನಾಡಿನಲ್ಲಿ ವಿರಕ್ತಮಠಗಳು ಇಲ್ಲದಿದ್ದರೆ ಶೇ. 75ರಷ್ಟು ಜನರು ಅನಕ್ಷರಸ್ಥರಾಗುತ್ತಿದ್ದರು. ಅಂಧಕಾರ ಮತ್ತು ಮೂಢನಂಬಿಕೆಗಳನ್ನು ದೂರಮಾಡಿ, ಕಾಯಕ ಮತ್ತು ದಾಸೋಹದ ಮೂಲಕ ಸಮಾಜೋದ್ಧಾರದ ಕಾರ್ಯ ಮಾಡಿವೆ. ನನ್ನನ್ನು ಬೆಳೆಸಿದ್ದ ನಿಜಲಿಂಗಪ್ಪ ಮತ್ತು ವಿರೇಂದ್ರ ಪಾಟೀಲ ಲಿಂಗಾಯತರು. ಹೀಗಾಗಿ ಈರ-ಪೀರ ಎಂಬುದು ನನ್ನ ಬದುಕಿನಲ್ಲಿ ನಿಜವಾಗಿದೆ ಎಂದರು.

    ಗೊಗ್ಗೆಹಳ್ಳಿಯ ಸಂಗಮೇಶ್ವರ ಶಿವಾಚಾರ್ಯರು, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಶಿವಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಹೇಶ ಚಿನ್ನಿಕಟ್ಟಿ ನಗದು ಬಹುಮಾನ ನೀಡಿದರು.

    ಅಕ್ಕಿಆಲೂರ ಶಿವಬಸವ ಸ್ವಾಮೀಜಿ, ಜಾತ್ರಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಪ್ರಕಾಶ ಶೆಟ್ಟಿ, ರುದ್ರೇಶ ಚಿನ್ನಣ್ಣನವರ, ನಾರಾಯಣ ಲೋಕಂಡೆ, ಶಿವಲಿಂಗ ಗುಂಜೆಟ್ಟಿ, ಪ್ರಕಾಶಗೌಡ ಭಗವಂತಗೌಡರ, ಶೇಖಪ್ಪ ಹಳೇಮನಿ, ಮಾಲತೇಶ ಕಮ್ಮಾರ ಇತರರಿದ್ದರು. ಪಿ.ಡಿ. ಶಿರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ನಡುವಿನಮಠ, ಬಿ. ಬಸವರಾಜ ನಿರೂಪಿಸಿದರು. ತಮ್ಮಣ್ಣ ಮುದ್ದಿ ವಂದಿಸಿದರು.

    ಮಠಗಳು ನಾಡಿನ ಸಾಂಸ್ಕೃತಿಕ ಜೀವಂತಿಕೆ ಪ್ರತೀಕಗಳು. ನೊಂದು ಬೆಂದವರ ಕಣ್ಣೀರು ಒರೆಸುವ ಸಾಂತ್ವನ ಕೇಂದ್ರಗಳಾಗಿವೆ. ಹುಕ್ಕೇರಿಮಠದ ಜಾತ್ರೆಯಲ್ಲಿ ಜಾನುವಾರು ಜಾತ್ರೆ ಮತ್ತು ಕೃಷಿ ಯಂತ್ರೋಪಕರಣಗಳ ಹಾಗೂ ಫಲಪುಷ್ಪ ಪ್ರದರ್ಶನ ಏರ್ಪಡಿಸುವುದರ ಮೂಲಕ ರೈತರಿಗೆ ಅನುಕೂಲವಾಗುವಂತ ಕಾರ್ಯಕ್ರಮ ಮಾಡಿದ್ದು ಶ್ಲಾಘನೀಯ. ಶ್ರೀಮಠದ ಶಿಕ್ಷಣ ಸಂಸ್ಥೆಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ.ಗಳನ್ನು ನೀಡಲಾಗುವುದು.

    | ನೆಹರು ಓಲೇಕಾರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts