ಮೊಮೊ ಬಾರಿಸುತಿದೆ ಮರಣಮೃದಂಗ

ಬ್ಲೂವೇಲ್ ಚಾಲೆಂಜ್​ನಿಂದಾದ ಅನಾಹುತವನ್ನು ಮರೆಯಲಾಗದು. ಕಳೆದ ವರ್ಷ ಕಾಡಿದ ಅನಾಹುತಕಾರಿ ಮೊಬೈಲ್ ಗೇಮ್ ಇದು. ಈ ಆಟದ ಸೆಳೆತಕ್ಕೆ ಸಿಲುಕಿ ಸಾವಿನ ಮನೆ ಪ್ರವೇಶಿಸಿದ ಮಕ್ಕಳ ಸಂಖ್ಯೆಯೇನೂ ಕಡಿಮೆಯಲ್ಲ. ಮಕ್ಕಳ ಚಲನವಲನದ ಬಗ್ಗೆ ನಿಗಾ ಇರಿಸಿದ ಕೆಲವು ಪಾಲಕರು, ಶಿಕ್ಷಕರಿಗಷ್ಟೇ ಈ ಅಪಾಯಕಾರಿ ಆಟದ ಸೆಳೆತದಿಂದ ಅವರನ್ನು ಪಾರು ಮಾಡಲು ಸಾಧ್ಯವಾಗಿರಬಹುದು. ಈಗ ಅಂಥದ್ದೇ ಮತ್ತೊಂದು ಅಪಾಯ ‘ಮೊಮೊ’ ಎಂಬ ಆನ್​ಲೈನ್ ಆಟದ ಮೂಲಕ ಎದುರಾಗಿದೆ.

| ಉಮೇಶ್​ ಕುಮಾರ್​ ಶಿಮ್ಲಡ್ಕ

ಮೊಮೊ ಎಂದರೆ ಸಹಜವಾಗಿಯೇ ನೆನಪಾಗುವುದು ಉತ್ತರ ಭಾರತದ ತಿನಿಸು. ಆದರೆ, ‘ಮೊಮೊ ಚಾಲೆಂಜ್’ ಎಂದರೆ ಆ ತಿನಿಸನ್ನು ತಿನ್ನುವ ಚಾಲೆಂಜ್ ಅಲ್ಲವೇ ಅಲ್ಲ. ಗೂಗಲ್ ಸರ್ಚ್​ನ ಇಮೇಜ್ ವಿಭಾಗಕ್ಕೆ ಹೋಗಿ ‘ಮೊಮೊ ಚಾಲೆಂಜ್’ ಎಂದು ಹುಡುಕಾಟ ಆರಂಭಿಸಿದರೆ ಕಾಣ ಸಿಗುವ ಚಿತ್ರ ಎಂಥದ್ದು ಗೊತ್ತೆ? ಕೋಲು ಮುಖ, ಬೋಳು ತಲೆಗೆ ಹೊದಿಸಿದಂತೆ ಹಣೆ ಮೇಲೂ ಚದುರಿದಂತಿರುವ ಕೂದಲು, ಅಲ್ಲೇ ಕೆಳಗೆ ಕಣ್ಣಗುಡ್ಡೆ ಕಿತ್ತುಕೊಂಡು ಇನ್ನೇನು ಹೊರಬೀಳುತ್ತದೆ ಎಂಬಂತೆ ಭಾಸವಾಗುತ್ತಿರುವ ಕಣ್ಣುಗಳು, ಹಕ್ಕಿಯ ಕೊಕ್ಕಿನ ಆಕಾರದಲ್ಲಿ ಚೂಪಾಗಿ ಇಂಗ್ಲಿಷ್​ನ ವಿ ಅಕ್ಷರದ ಆಕಾರದಲ್ಲಿರುವ ಬಾಯಿ, ಅದರ ಮೇಲೊಂದು ಮೂಗು. ಮೇಲ್ನೋಟಕ್ಕೆ ವಿಕಾರ ರೂಪದ ಮನುಷ್ಯ ಆಕಾರ ಕಂಡರೂ, ಶರೀರ ಪಕ್ಷಿಯದ್ದು, ಆದರೆ ರೆಕ್ಕೆಗಳಿಲ್ಲ, ಬಲಿಷ್ಠ ಕಾಲುಗಳಿರುವ ಚಿತ್ರ. ಅದೊಂಥರಾ ವಿಕಾರ ರೂಪದ ಮರಣದ ಛಾಯೆ ಆ ಚಿತ್ರದಲ್ಲಿದೆ. ಇದನ್ನು ಒಳಗೊಂಡ ‘ಮೊಮೊ ಚಾಲೆಂಜ್’ ಆಟ ಆಡುವಂತೆ ವಾಟ್ಸ್​ಆಪ್ ಮೂಲಕ ಆಹ್ವಾನ ತಲುಪುತ್ತದೆ. ಇದನ್ನು ಆಡಲು ಮುಂದಾದರೆ ಪ್ರಾಣವನ್ನೇ ಬೆಲೆಯಾಗಿ ತೆರಬೇಕಾಗುತ್ತದೆ.

ಏನಿದು ಆಟ?: ನಮ್ಮನ್ನು ನಾವೇ ಘಾಸಿಗೊಳಿಸಿಕೊಳ್ಳುವಂತಹ ವಿವಿಧ ಮಾದರಿಯ ಸವಾಲುಗಳನ್ನು ಹೊಂದಿರುವ ಆಟ ಇದು. ಆರಂಭಿಕ ಹಂತದಲ್ಲಿ ಸಣ್ಣ ಸಣ್ಣ ಹಾನಿಯ ಸವಾಲುಗಳನ್ನು ನೀಡುತ್ತ, ಕೊನೆಯ ಹಂತ ತಲುಪಿದಾಗ ಆತ್ಮಹತ್ಯೆಯ ಸವಾಲನ್ನೇ ಮುಂದೊಡ್ಡಿಬಿಡುತ್ತದೆ ಈ ಆಟ. ಅದರ ಸೆಳೆತಕ್ಕೆ ಸಿಲುಕಿದವರು ಸಾವಿನ ಮನೆ ಪ್ರವೇಶಿಸಿ ಪ್ರಾಣವನ್ನೇ ಕಳೆದುಕೊಂಡುಬಿಡುತ್ತಾರೆ. ಹದಿಹರೆಯದವರು ಮತ್ತು ಶಾಲಾ ಮಕ್ಕಳೇ ಈ ಆಟದ ಟಾರ್ಗೆಟ್.

ಕಾಡುವುದು ಹೇಗೆ?

ಈ ಆಟ ಮಕ್ಕಳನ್ನು ಹೇಗೆ ಕಾಡುತ್ತೆ ಗೊತ್ತ್ತಾ? – ವಾಟ್ಸ್​ಆ್ಯಪ್​ಗೆ ಬರುವ ಫಾರ್ವರ್ಡ್ ಸಂದೇಶಗಳ ಪೈಕಿ ಈ ‘ಮೊಮೊ ಚಾಲೆಂಜ್’ನ ಲಿಂಕ್​ನಲ್ಲಿರುವ ವಿಕಾರ ರೂಪದ ಚಿತ್ರ ಮೊದಲ ಆಕರ್ಷಣೆ. ಆ ಚಿತ್ರ ಜಪಾನ್​ನಲ್ಲಿ ಪ್ರಚಲಿತದಲ್ಲಿರುವ ‘ಮೊಮೊ’ ಹೆಸರಿನ ಬೊಂಬೆಯದ್ದು. ಅದರ ಆಕರ್ಷಣೆಗೆ ಬಿದ್ದು ಅದನ್ನು ವಾಟ್ಸ್​ಆ್ಯಪ್​ಗೆ ಕಾಂಟ್ಯಾಕ್ಟ್ ಲಿಸ್ಟ್​ಗೆ ಹದಿಹರೆಯದವರು, ಮಕ್ಕಳು ಸೇರಿಸಿಕೊಂಡುಬಿಡುತ್ತಾರೆ. ಅಲ್ಲಿಂದಾಚೆಗೆ ಅವರ ಮೊಬೈಲ್​ಗೆ ಸವಾಲಿನ ಸಂದೇಶಗಳು ರವಾನೆಯಾಗತೊಡಗುತ್ತವೆ. ಒಂದೊಂದೇ ಸವಾಲುಗಳನ್ನು ಮಕ್ಕಳು, ಹದಿಹರೆಯದವರು ಸ್ವೀಕರಿಸಲಾರಂಭಿಸಿದರೆ ಅದರ ಸೆಳೆತಕ್ಕೆ ಬಿದ್ದರೆಂದೇ ಲೆಕ್ಕ. ಒಂದೊಮ್ಮೆ ಆಟಗಾರರು ನಿರ್ದೇಶನವನ್ನು ಪಾಲಿಸದೇ ಇದ್ದರೆ, ಆಗ ಆಟಗಾರರನ್ನು ಬೆದರಿಸುವ ವಿಡಿಯೋ, ಫೋಟೊ, ಆಡಿಯೋಗಳು ರವಾನೆಯಾಗುತ್ತವೆ. ಇದಕ್ಕೆ ಹೆೆದರಿ ಅನೇಕರು ಸವಾಲನ್ನು ಸ್ವೀಕರಿಸಿ ಅಪಾಯಕ್ಕೆ ಸಿಲುಕಿಕೊಳ್ಳುತ್ತಾರೆ.

ಬಚಾವ್ ಆಗೋದು ಮುಖ್ಯ

ಈ ಅಪಾಯಕಾರಿ ಆಟದಿಂದ ಬಚಾವ್ ಆಗುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆ. ಮಕ್ಕಳು ಮತ್ತು ಹದಿಹರೆಯದವರು ಸ್ವತಃ ಬಯಸುವುದಾದರೆ ಏನು ಮಾಡಬೇಕು ಎಂಬ ಅಂಶ ಮುಖ್ಯವಾಗುತ್ತದೆ. ಅದೇ ರೀತಿ, ಈ ಅಪಾಯಕಾರಿ ಆಟದ ಸೆಳೆತಕ್ಕೆ ಸಿಲುಕಿದವರನ್ನು ಅದರಿಂದ ಹೊರತರುವುದು ಹೇಗೆ ಎಂಬ ಪಾಲಕರ ಚಿಂತೆ ಮತ್ತೊಂದು ಮುಖ್ಯ ಅಂಶ.

ಸಾವಿನ ಸಂಖ್ಯೆ ಊಹಾಪೋಹ..

ಮೊಮೊ ಚಾಲೆಂಜ್​ಗೆ ಬಲಿಯಾದವರ ನಿಖರ ಸಂಖ್ಯೆ ಲಭ್ಯವಿಲ್ಲ. ಆದರೆ, ಈ ಆಟ ಸದ್ಯ ಭಾರತ, ಅರ್ಜೆಂಟೀನಾ, ಬ್ರೆಜಿಲ್, ಕೆನಡಾ, ಕೊಲಂಬಿಯಾ, ಯುರೋಪ್, ಮೆಕ್ಸಿಕೋ, ಪಾಕಿಸ್ತಾನ, ಸ್ಪೇನ್, ಅಮೆರಿಕಗಳಲ್ಲಿ ಬಳಕೆಯಲ್ಲಿದೆ. ಈ ವರ್ಷ ಜುಲೈನಲ್ಲಿ ಮೊದಲ ಸಲ ಇದು ಸಾರ್ವಜನಿಕರ ಗಮನಸೆಳೆಯಿತು. ಯೂಟ್ಯೂಬ್ ಬಳಕೆದಾರ ರೆಗಿನ್​ಬೋಟ್ ಇದನ್ನು ಮೊದಲು ಗಮನಿಸಿದ್ದು. ನಂತರದಲ್ಲಿ ಇದು ಜಗತ್ತಿನಾದ್ಯಂತ ಪಸರಿಸಿತು. ಭಾರತದಲ್ಲಿ ಆಗಸ್ಟ್ 29ರಂದು ಪಶ್ಚಿಮ ಬಂಗಾಳದ ಇಬ್ಬರು ಹದಿಹರೆಯದವರ ಸಾವಿಗೆ ಮೊಮೊ ಕಾರಣ ಎಂಬ ಮಾತು ಕೇಳಿ ಬಂತು. ಇದರ ಬೆನ್ನಲ್ಲೇ ಅಲ್ಲಿನ ಸಿಐಡಿ ಪೊಲೀಸರಿಗೆ ಸಾಬೀತುಪಡಿಸಲು ಸಾಕ್ಷ್ಯ ದೊರೆಯಲಿಲ್ಲ. ಆದಾಗ್ಯೂ, ಅದು ಪ್ರಾಣ ಕಂಠಕ ಎಂಬುದನ್ನು ಪೊಲೀಸರು ಅಲ್ಲಗಳೆದಿಲ್ಲ. ಇದಾಗಿ ಚೆನ್ನೈನಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೂ ಈ ಆಟಕ್ಕೂ ನಂಟು ಬೆಸೆಯಲಾಗಿತ್ತು. ಆದರೆ ಯಾವುದನ್ನೂ ಪೊಲೀಸರು ದೃಢೀಕರಿಸಿಲ್ಲ.

ಪಾಲಕರೇನು ಮಾಡಬೇಕು?

ಮಕ್ಕಳ ಮೇಲೆ ಅವರ ಅರಿವಿಗೆ ಬಾರದಂತೆ ನಿಗಾ ಇರಿಸಬೇಕು. ಅವರಲ್ಲಿನ ಭಾವನಾತ್ಮಕ ಬದಲಾವಣೆಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಬೇಕು. ಒಂದೊಮ್ಮೆ ಒತ್ತಡದಲ್ಲಿ ಇರುವಂತೆ ಕಂಡುಬಂದರೆ, ಆ ಬಗ್ಗೆ ವಿಚಾರಿಸಿ, ಅವರ ಸಂಕಟಗಳನ್ನು ಹಂಚಿಕೊಳ್ಳುವಂತೆ ನೋಡಿಕೊಳ್ಳಿ. ಸಂಕಟದ ಸನ್ನಿವೇಶಗಳ ಬಗ್ಗೆ ಹೇಳಿದರೆ ಅದರಿಂದಾಗುವ ಮಾನಸಿಕ ಪರಿಣಾಮಗಳನ್ನು ಮಕ್ಕಳಿಗೆ ವಿವರಿಸಿ. ಮಕ್ಕಳ ಸಾಮಾಜಿಕ ಜಾಲತಾಣಗಳ ಚಟುವಟಿಕೆ ಮೇಲೆ ನಿಗಾ ಇರಿಸಿ. ಅವರು ಯಾವುದೇ ಅಪಾಯಕಾರಿ ಆಟದಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಖಚಿತಪಡಿಸುತ್ತಲೇ ಇರಿ. ಮೊಬೈಲ್​ನಲ್ಲಿ ಉತ್ತಮ ಮೊಬೈಲ್ ಪೇರೆಂಟಿಂಗ್ ಆಪ್ ಚಾಲ್ತಿಯಲ್ಲಿರಿಸಿ. ಯಾವುದೇ ಕಾರಣಕ್ಕೂ ನೀವಾಗಿ ನೀವೇ ಮಕ್ಕಳು ಈಗಾಗಲೇ ಆ ಅಪಾಯಕಾರಿ ಆಟದ ಸೆಳೆತಕ್ಕೆ ಸಿಲುಕಿದ್ದಾರೆಂಬ ನಿರ್ಧಾರಕ್ಕೆ ಬರಬೇಡಿ. ಅಲ್ಲದೇ ಆ ಆಟದ ವಿಚಾರ ಪ್ರಸ್ತಾಪ ಮಾಡಬೇಡಿ. ಅದರ ಬಗ್ಗೆ ಚ ರ್ಚಿಸುವುದೂ ಬೇಕಾಗಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಮಕ್ಕಳು ಮತ್ತಷ್ಟು ವ್ಯಗ್ರರಾಗಿ ಆ ಆಟವನ್ನು ಮುಂದುವರಿಸಬಹುದು.

ಈ ಆಟದಿಂದ ಪಾರಾಗಲು ಮಕ್ಕಳೇನು ಮಾಡಬಹುದು?

ಮೊಮೊ ಎಂಬ ಅಪಾಯಕಾರಿ ಆಟದಿಂದ ಪಾರಾಗಲು ನೀವೇನು ಮಾಡಬಹುದು ಗೊತ್ತೆ? ಮೊಬೈಲ್​ನಲ್ಲಿ ಅಥವಾ ಪರ್ಸನಲ್ ಕಂಪ್ಯೂಟರ್ ಅಥವಾ ಲ್ಯಾಪ್​ಟಾಪ್​ನಲ್ಲಿ ಗೇಮ್್ಸ ಆಡುವಾಗ ವಿಚಿತ್ರವೆನಿಸುವ ಸಂದೇಶಗಳು ಕಾಣಿಸಿಕೊಂಡರೆ ಪಾಲಕರ ಗಮನಕ್ಕೆ ತರಬೇಕು. ನಿಮ್ಮನ್ನು ನೀವೇ ಘಾಸಿ ಮಾಡಿಕೊಳ್ಳುವ ಅಥವಾ ನಿಮಗೆ ನೀವೇ ಹಾನಿ ಮಾಡಿಕೊಳ್ಳುವ ನಿರ್ದೇಶನಗಳನ್ನು ಆಟ ಆಡಿಸುವವರು ನೀಡಿದರೆ ಅದನ್ನೂ ಪಾಲಕರ ಗಮನಕ್ಕೆ ತರಬೇಕು. ಶಾಲೆಯಲ್ಲಿದ್ದರೆ ನಿಮ್ಮ ನೆಚ್ಚಿನ ಶಿಕ್ಷಕರ ಗಮನಕ್ಕೆ ತರಬೇಕು. ಬೇರೆ ಮಕ್ಕಳು ಈ ರೀತಿಯ ಆಟದಲ್ಲಿ ತೊಡಗಿದ್ದು ಕಂಡು ಬಂದರೆ ಅದನ್ನೂ ನಿಮ್ಮ ಪಾಲಕರಿಗೆ ಅಥವಾ ನೆಚ್ಚಿನ ಶಿಕ್ಷಕರಿಗೆ ತಿಳಿಸಿ.

ಸೈಬರ್ ಟ್ರಿವಿಯಾ ಮದ್ದು…

‘ಮೊಮೊ’, ‘ಬ್ಲೂವೇಲ್ ಚಾಲೆಂಜ್’ಗಳಂತಹ ಅಪಾಯಕಾರಿ ಆಟಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ‘ಸೈಬರ್ ಟ್ರಿವಿಯಾ’ ಎಂಬ  ಆ್ಯಪ್ ಬಿಡುಗಡೆ ಮಾಡಿದ್ದಾಗಿ ಸುದ್ದಿಯಾಗಿತ್ತು. ಈ ಆಪ್ ಗೂಗಲ್ ಪ್ಲೇಸ್ಟೋರ್​ನಲ್ಲಿ (https://play.google.com/store/apps/details?id=com.cybertrivia.kesh) ಲಭ್ಯವಿದೆ. ಇದರ ಐಕಾನ್ ಕೂಡ ಬಹುಬೇಗ ಗಮನ ಸೆಳೆಯುವಂತಿದೆ. ಮೂರು ಹಂತದ ಪಝುಲ್ ಇದಾಗಿದ್ದು ಇದರ ಮೂಲಕ ಅಪಾಯಕಾರಿ ಆಟಗಳ ವಿಚಾರದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಮಕ್ಕಳಲ್ಲಿ ಪರೋಕ್ಷವಾಗಿ ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆದಿದೆ. ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ಪಝುಲ್​ನಂತಿರುವ ಈ ಆ್ಯಪ್  ನೆರವನ್ನೂ ಪಾಲಕರು ಪಡೆಯಬಹುದಾಗಿದೆ.