ಅಪ್ಪ, ಅಮ್ಮ ತಪ್ಪದೆ ಮತ ಹಾಕಿ

ಉಡುಪಿ: ಅಪ್ಪಾ, ಅಮ್ಮಾ… ತಪ್ಪದೇ 2019ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ.. ಯಾವ ಆಮಿಷಗಳಿಗೂ ಒಳಗಾಗಬೇಡಿ…

-ಹೀಗೆ ದೂರದ ಊರಿನಿಂದ ಉಡುಪಿ ಜಿಲ್ಲೆಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸಿದ ವಿದ್ಯಾರ್ಥಿಗಳು ಹೆತ್ತವರಿಗೆ ಅಂಚೆ ಕಾರ್ಡ್‌ನಲ್ಲಿ ಪತ್ರಗಳನ್ನು ಬರೆದು ಜಾಗೃತಿ ಮೂಡಿಸುತ್ತಿದ್ದಾರೆ.

ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಮತದಾನ ಜಾಗೃತಿಗಾಗಿ ಕೈಗೊಂಡಿರುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯ ಐಟಿಡಿಪಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ ಮತ್ತು ಆಶ್ರಮ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ, ಬಂಧು ಬಳಗದವರಿಗೆ, ಆತ್ಮೀಯರಿಗೆ ಪತ್ರ ಬರೆದು ಮತದಾನದ ಮಹತ್ವ ಸಾರುತ್ತಿದ್ದಾರೆ.

ಸ್ವೀಪ್ ಸಮಿತಿಯಿಂದಲೇ ಕಾರ್ಡ್: ವಿದ್ಯಾರ್ಥಿಗಳಿಗೆ ಪತ್ರ ಬರೆಯಲು ಅಗತ್ಯವಿರುವ ಅಂಚೆ ಕಾರ್ಡ್‌ಗಳನ್ನು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನೀಡಲಾಗುತ್ತಿದ್ದು, ಮಕ್ಕಳು ತಮ್ಮ ಪೋಷಕರಿಗೆ, ಹಿತೈಷಿಗಳಿಗೆ, ಸಂಬಂಧಿಕರಿಗೆ ಎಷ್ಟು ಪತ್ರ ಬೇಕಾದರೂ ಬರೆಯಬಹುದಾಗಿದೆ. ಪತ್ರದಲ್ಲಿ ವಿಳಾಸ ನಮೂದಿಸಿ, ಪತ್ರಗಳನ್ನು ಹಾಸ್ಟೆಲ್‌ಗಳ ವಾರ್ಡನ್‌ಗಳಿಗೆ ನೀಡಬೇಕು. ವಾರ್ಡನ್‌ಗಳು ಆ ಪತ್ರಗಳನ್ನು ಅಂಚೆ ಕಚೇರಿಗೆ ತಲುಪಿಸಿ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಾರೆ. ಉಡುಪಿ ಜಿಲ್ಲೆಯಲ್ಲಿ ಐಟಿಡಿಪಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಒಟ್ಟು 61 ಹಾಸ್ಟಲ್‌ಗಳ 5,000 ವಿದ್ಯಾರ್ಥಿಗಳಿಂದ ಈ ಪತ್ರ ಅಭಿಯಾನ ನಡೆಯಲಿದೆ.

ಮೆಟ್ರಿಕ್ ಪೂರ್ವ ಹಾಸ್ಟೆಲ್ ವಿದ್ಯಾರ್ಥಿಗಳು ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನ ಮಾಡಲು ಮನವಿ ಮಾಡುತ್ತಿದ್ದಾರೆ. ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಮತ್ತು ಮತಯಂತ್ರ ಹಾಗೂ ವಿವಿ ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ತರಬೇತಿ ನೀಡಲಾಗುತ್ತಿದೆ.
| ಹಾಕಪ್ಪ ಆರ್. ಲಮಾಣಿ.
ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಧಿಕಾರಿ

ಇಂದಿನ ಇಲೆಕ್ಟ್ರಾನಿಕ್ ಯುಗದಲ್ಲಿ ಪತ್ರ ಬರೆಯುವ ಸಂಸ್ಕೃತಿ ಮರೆಯಾಗುತ್ತಿದೆ. ಆದರೂ, ಪತ್ರ ಸಂದೇಶದಲ್ಲಿ ಇರುವ ಆತ್ಮೀಯತೆ ಇಲೆಕ್ಟ್ರಾನಿಕ್ ಯಂತ್ರದಲ್ಲಿಲ್ಲ. ಮಕ್ಕಳು ತಮ್ಮ ಮುದ್ದು ಅಕ್ಷರದಲ್ಲಿ ಬರೆದಿರುವ ಪತ್ರವನ್ನು ಓದುವ ಪೋಷಕರು ಖಂಡಿತವಾಗಿ ಮಕ್ಕಳ ಮನವಿಗೆ ಸ್ಪಂದಿಸಿ, ಮತದಾನದಲ್ಲಿ ಭಾಗವಹಿಸುತ್ತಾರೆ ಎಂಬುದು ನಮ್ಮ ನಿರೀಕ್ಷೆ.
| ಸಿಂಧೂ ಬಿ.ರೂಪೇಶ್,
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ