ಮೋದಿ ಕಳಂಕ ರಹಿತ ಆಡಳಿತವೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ: ಶಾಸಕ ಶ್ರೀರಾಮುಲು ಅಭಿಮತ

ಮೊಳಕಾಲ್ಮೂರು: ಕಳೆದ 5 ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಳಂಕರಹಿತ ಆಡಳಿತ ನಡೆಸಿದ್ದೇ ಬಿಜೆಪಿ ಬಹುಮತಕ್ಕೆ ಶ್ರೀರಕ್ಷೆಯಾಯಿತು ಎಂದು ಶಾಸಕ ಬಿ. ಶ್ರೀರಾಮುಲು ಅಭಿಪ್ರಾಯಪಟ್ಟರು.

ಪಪಂ ಚುನಾವಣೆ ಹಿನ್ನೆಲೆ 2ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಲೀಲಾವತಿ ಪರ ಶುಕ್ರವಾರ ಮತಯಾಚಿಸಿ ಮಾತನಾಡಿದರು.

ದೇಶದೆಲ್ಲೆಡೆ ಬೇರೂರಿದ್ದ ಕಾಂಗ್ರೆಸ್ ಮೋದಿ ಮೇನಿಯಾಕ್ಕೆ ಸಿಲುಕಿ ಬುಡಮೇಲಾಗಿದೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮೋದಿ ಜನರಿಗೆ ಬೇಕಿದ್ದರಿಂದಲೇ ಮತ್ತೊಮ್ಮೆ ಅವರನ್ನು ಪ್ರಧಾನಿಯಾಗಿಸಲು ಬಹುಮತ ನೀಡಿದ್ದಾರೆ ಎಂದರು.

ಕೇಂದ್ರದ ನೂತನ ಸಚಿವ ಸಂಪುಟದಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಥಾನಮಾನಗಳು ಸಿಗಲಿದ್ದು, ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಜತೆಗೆ ರೈತರ ಹಿತ ಕಾಪಾಡಲು ಹಾಗೂ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಲಾಗುವುದು ಎಂದರು.
ಮೊಳಕಾಲ್ಮೂರು ರೇಷ್ಮೆ ಸೀರೆಗೆ ಪ್ರಸಿದ್ಧಿ. ನೇಕಾರರ ಹಿತ ಕಾಪಾಡುವುದು ನಮ್ಮ ಧರ್ಮ. ಜವಳಿ ಪಾರ್ಕ್ ನಿರ್ಮಾಣಕ್ಕೆ ನೂತನ ಸಂಸದರು ಹಾಗೂ ನಾನು ಶಕ್ತಿ ಮೀರಿ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ ಮಾತನಾಡಿ, ಅಪವಿತ್ರ ಮೈತ್ರಿ ಬೇಡವೆಂಬ ತೀರ್ಮಾನವನ್ನು ಜನ ಈಗಾಗಲೇ ತಿಳಿಸಿದ್ದಾರೆ. ಈಗಾಗಲೇ ಮೈತ್ರಿ ಆಡಳಿತ ವೈಖರಿ ವಿರುದ್ಧ ಅಸಮಾಧಾನಗೊಂಡ ಕಾಂಗ್ರೆಸ್-ಜೆಡಿಎಸ್‌ನ ಶಾಸಕರು ಪಕ್ಷದಿಂದ ಹೊರ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.

ನಗರ ಅಧ್ಯಕ್ಷ ಶಾಂತಾರಾಮ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ತಾಪಂ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಸಣ್ಣತಿಪ್ಪೇಸ್ವಾಮಿ, ಚಂದ್ರಶೇಖರಗೌಡ್ರು, ಶ್ರೀ ರಾಮ ರೆಡ್ಡಿ, ಡಾ. ಮಂಜುನಾಥ್, ರವಿಕುಮಾರ್ ಇತರರು ಇದ್ದರು.

Leave a Reply

Your email address will not be published. Required fields are marked *