ಗುಳೆ ಹೋಗಿದ್ದ ಕಾರ್ಮಿಕರು ಯುಗಾದಿ ಹಬ್ಬಕ್ಕೆ ಆಗಮನ

ಕೆ. ಕೆಂಚಪ್ಪ ಮೊಳಕಾಲ್ಮೂರು
ಸತತ ಬರ ಮತ್ತು ಜೀವನ ನಿರ್ವಹಣೆಗೆ ಗುಳೆ ಹೋಗಿದ್ದ ತಾಲೂಕಿನ ಜನತೆ ಯುಗಾದಿ ಹಬ್ಬಕ್ಕಾಗಿ ವಾರದಿಂದೀಚೆಗೆ ಊರುಗಳ ಕಡೆ ಮುಖ ಮಾಡುತ್ತಿದ್ದಾರೆ.

ಯುಗಾದಿ ಎಂದರೆ ನಗರ ಪ್ರದೇಶಗಳಿಗಿಂತ ಹಳ್ಳಿಗರಲ್ಲಿ ಸಂಭ್ರಮ ಜೋರು. ಹೊಸವರ್ಷವೆಂದು ಸಂತಸದಿಂದ ಆಚರಿಸುತ್ತಾರೆ. ಏ.5-6 ರಂದು ಹಬ್ಬವಿದ್ದು, ಸಿದ್ಧತೆ ಮಾಡಿಕೊಳ್ಳಲು ಒಂದು ವಾರ ಮುಂಚೆಯೇ ಕಾಫಿ ಸೀಮೆ, ಬೆಂಗಳೂರು, ಮಂಗಳೂರಿನಂತಹ ನಗರಗಳಿಗೆ ಗುಳೆ ಹೋಗಿದ್ದ ಕೂಲಿ ಕಾರ್ಮಿಕರು ವಾಪಸಾಗುತ್ತಿದ್ದಾರೆ. ರೈಲು, ಬಸ್‌ಗಳಲ್ಲಿ ಗಂಟು ಮೂಟೆಗಳೊಂದಿಗೆ ಬಂದು ಇಳಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ನಾಲ್ಕಾರು ತಿಂಗಳಿಂದ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್, ಫ್ಯಾಕ್ಟರಿ, ಗಾರೆ ಕೆಲಸ ಮಾಡಿ ಕೂಡಿಟ್ಟುಕೊಂಡಿದ್ದ ಹಣದಲ್ಲಿ ಹಬ್ಬಕ್ಕೆ ಹೊಸ ಬಟ್ಟೆ, ಗೃಹೋಪಯೋಗಿ ವಸ್ತುಗಳು, ಟಿವಿ ಮತ್ತಿತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಸಮೇತ ಬರುತ್ತಿದ್ದಾರೆ. ಅವರ ಆಗಮನದಿಂದ ಊರಿನಲ್ಲಿರುವ ವೃದ್ಧರು, ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿದೆ. ಹಬ್ಬಕ್ಕೆ ಮನೆಗಳಲ್ಲಿ ಧೂಳು ಹೊಡೆದು, ಸುಣ್ಣ-ಬಣ್ಣ ಬಳಿಯುವ ಕೆಲಸ ಚುರುಕಾಗಿದೆ. ಮಹಿಳೆಯರು ಬಿಡುವಿಲ್ಲದಂತೆ ಮನೆ ಕೆಲಸದಲ್ಲಿ ನಿರತರಾಗಿದ್ದಾರೆ.

ಮತದಾನ ಹೆಚ್ಚಳ ಸಾಧ್ಯತೆ: ಏ.18ರಂದು ಲೋಕಸಭೆ ಚುನಾವಣೆ ಇದೆ. ಇದಕ್ಕೂ ಮುಂಚೆ ಊರುಗಳಿಗೆ ಕೂಲಿ ಕಾರ್ಮಿಕರು ವಾಪಸಾಗಿರುವುದು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗುವ ಮುನ್ಸೂಚನೆ ಸಿಕ್ಕಿದೆ.

ಹಬ್ಬ ಮತ್ತು ಚುನಾವಣೆ ಎರಡೂ ಉದ್ದೇಶದೊಂದಿಗೆ ಊರಿಗೆ ಬರುತ್ತಿರುವ ಕಾರ್ಮಿಕರು ಯುಗಾದಿ, ಮತದಾನ ಮುಗಿಸಿಕೊಂಡು ಹೊರಡುವ ಸಾಧ್ಯತೆ ಇದೆ. ಹಣಕೊಟ್ಟು ಕರೆದರೂ ಬರದ ಸ್ಥಿತಿಯಲ್ಲಿದ್ದ ಕಾರ್ಮಿಕರು ಹಬ್ಬಕ್ಕೆ ಬರುತ್ತಿರುವುದು ಚುನಾವಣೆ ಅಭ್ಯರ್ಥಿಗಳಿಗೆ ಖುಷಿಯ ವಿಚಾರ.

ತಾಲೂಕು ಆಡಳಿತ ಮತ್ತು ಸ್ವೀಪ್ ಸಮಿತಿ ಪ್ರತಿ ಹಳ್ಳಿಗಳಲ್ಲೂ ಶೇ.100 ರಷ್ಟು ಮತದಾನ ಗುರಿ ತಲುಪಲು ಮತ ಜಾಗೃತಿ ಮೂಡಿಸುತ್ತಿವೆ.

ತಾಲೂಕನ್ನು ಬರ ಬೆಂಬಿಡದೆ ಕಾಡುತ್ತಿದೆ. ಜಮೀನಿನಲ್ಲಿ ವರಮಾನ ಇಲ್ಲದೆ ಗುಳೆ ಹೋಗಿಯೇ ಜೀವನ ನಿರ್ವಹಿಸಬೇಕಿದೆ. ಪ್ರತಿವರ್ಷ ಯುಗಾದಿ, ಮಾರಮ್ಮನ ಹಬ್ಬ, ನುಂಕಪ್ಪನ ಜಾತ್ರೆಗೆ ಬಂದು ಮರಳುತ್ತಿದ್ದೆವು. ಈ ಬಾರಿ ಚುನಾವಣೆ ಬಂದಿರುವುದರಿಂದ ಮತದಾನ ಮಾಡಿ ಹೋಗುತ್ತೇವೆ.
> ತಾಯಮ್ಮ, ದುರುಗಪ್ಪ, ಸಿದ್ದಾಪುರ-ರಾಮಸಾಗರ ನಿವಾಸಿಗಳು