ಮೊಳಕಾಲ್ಮೂರು: ನುಂಕಪ್ಪನ ಪರಿಷೆ ಮುನ್ನ ಜರುಗುವ ಪಟ್ಟಣದ ಗ್ರಾಮ ದೇವತೆ ಮಾರಮ್ಮನ ಜಾತ್ರೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಸಂಪ್ರದಾಯದಂತೆ ಮಾರಮ್ಮ ದೇವಿ ಮತ್ತು ಇಬ್ಬರು ಮಕ್ಕಳ ಪ್ರತಿಮೆಯನ್ನು ರಥದಲ್ಲಿ ಕೂರಿಸಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ಬಳಿಕ ಮಧ್ಯರಾತ್ರಿವರೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಮಾರ್ಕಂಡೆಯಸ್ವಾಮಿ ದೇವಸ್ಥಾನ ಪಕ್ಕದಲ್ಲಿರುವ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ರೀತಿಯ ಹರಕೆ ಸಮರ್ಪಿಸಿದರು.
ಬುಧವಾರ ಬೆಳಗಿನ ಜಾವ ದೇವಿಗೆ ಅರ್ಪಿಸಿದ್ದ ಅನ್ನದೆಡೆಯನ್ನು ಊರಿನ ಸುತ್ತ ಚರಗ ಚೆಲ್ಲಲಾಯಿತು. ನಂತರ ದೇವಿಯನ್ನು ಮೆರವಣಿಗೆ ಮೂಲಕ ಕರೆದೊಯ್ದು ಆಂಧ್ರ ಮತ್ತು ಕರ್ನಾಟಕದ ಗಡಿ ಅಂಚಿನಲ್ಲಿರುವ ಗಾಳಿ ಮಾರಮ್ಮನ ಸನ್ನಿಧಾನ ಸೇರಿಸುವ ಮೂಲಕ ಜಾತ್ರೆಗೆ ತೆರೆ ಬಿತ್ತು.
ಜಾತ್ರೆಯ ಹಿನ್ನೆಲೆ: ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಇತಿಹಾಸ ಪ್ರಸಿದ್ಧ ನುಂಕೆಮಲೆ ಸಿದ್ದೇಶ್ವರಸ್ವಾಮಿ ಜಾತ್ರೆಗೂ ಮುನ್ನ ಗ್ರಾಮ ದೇವತೆ ಮಾರಮ್ಮದೇವಿ ಪರಿಷೆ ನಡೆಸುವ ವಾಡಿಕೆ ಹಿಂದಿನಿಂದಲೂ ನಡೆದಿದೆ. ಇದಕ್ಕಾಗಿ ಕಾಡು ಮರವನ್ನು ಕಡಿದು ತಂದು ನಗರದ ಜಿನಗಾರ ಮನೆಯಲ್ಲಿಡಲಾಗುತ್ತದೆ. ಇದರಿಂದ ಅರ್ಚಕರು ದೇವಿ ಮತ್ತು ಇಬ್ಬರು ಮಕ್ಕಳ ಪ್ರತಿಮೆ ತಯಾರಿಸಿ ಅವುಗಳಿಗೆ ದೈವ ಸ್ವರೂಪ ನೀಡುತ್ತಾರೆ. ಮಂಗಳವಾರ ಸಂಜೆ ಜಿನಗಾರ ವಂಶಸ್ಥರಿಂದ ದೇವಿಗೆ ಸೀರೆ, ಬಳೆ, ಕುಂಕುಮ, ಹೂ, ಅಕ್ಕಿ-ಬೆಲ್ಲವನ್ನು ಶಾಸ್ತ್ರೋಕ್ತವಾಗಿ ಮಡಿಲು ತುಂಬಿದ ಬಳಿಕ ಉತ್ಸವ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ರಥದಲ್ಲಿ ಕೂರಿಸಿ ಉತ್ಸವ ನಡೆಸಲಾಗುತ್ತದೆ.