ನಲಿಕಲಿ ಪದ್ಧತಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮೆಟ್ಟಿಲಿದ್ದಂತೆ

ಮೊಳಕಾಲ್ಮೂರು: ಬಹುವರ್ಗ ಮತ್ತು ಸ್ವ-ವೇಗದ ಕಲಿಕೆ ಒಳಗೊಂಡಿರುವ ನಲಿಕಲಿ ಪದ್ಧತಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮೆಟ್ಟಿಲಿದ್ದಂತೆ ಎಂದು ಸಂಪನ್ಮೂಲ ಅಧಿಕಾರಿ ಓಂಕಾರಪ್ಪ ಹೇಳಿದರು.

ತಾಲೂಕಿನ ರಾಯಪುರ ಮ್ಯಾಸರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಪಶ್ಚಿಮ ಮತ್ತು ಪೂರ್ವ ವಲಯ ಕ್ಲಸ್ಟರ್ ಮಟ್ಟದ ಶಾಲೆಗಳ ನಲಿಕಲಿ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿಸದೆ, ಸ್ಪಷ್ಟವಾಗಿ ಓದು ಬರಹ ಬರುವಂತೆ ಮಾರ್ಗದರ್ಶಿಸಬೇಕು. ಓದಿದ್ದನ್ನು ಮನನ ಮಾಡಿಕೊಳ್ಳುವ ಕೌಶಲ ಬೆಳೆಸಬೇಕು. ಕಲಿಕೆ ಸಂಬಂಧಿತ ಸಮಸ್ಯೆಗಳನ್ನು ಶಾಲಾ ಹಂತದಲ್ಲಿಯೇ ನಿವಾರಿಸುವ ಕೆಲಸ ಶಿಕ್ಷಕರಿಂದಾಗಬೇಕು ಎಂದರು.

ಬಿಆರ್‌ಪಿ ಜೆ.ಸಿ. ಮೋಹನ್ ಮಾತನಾಡಿ, ಶಿಕ್ಷಕರು ಇಲಾಖೆ ಕಾರ್ಯಕ್ರಮಗಳ ಅನುಷ್ಠಾನದ ಜತೆಗೆ ವಿಶೇಷ ತರಗತಿ, ಬೋಧನಾ ವಿಧಾನದಲ್ಲಿನ ಬದಲಾವಣೆ ತಂದುಕೊಳ್ಳಬೇಕು. ಮಕ್ಕಳೊಂದಿಗೆ ಪ್ರೀತಿ ಸ್ನೇಹದಿಂದ ಇರಬೇಕು ಎಂದ ಅವರು, 2019ರ ನಲಿಕಲಿ ಮೈಕ್ರೊ ಅಧ್ಯಯನದಲ್ಲಿ ‘ಎ’ ಗ್ರೇಡ್ ಶಾಲೆಗಳಾಗಿ ಪರಿವರ್ತಿಸಿಕೊಳ್ಳುವ ಕುರಿತು ಸಲಹೆ ನೀಡಿದರು.

ಸಿಆರ್‌ಪಿ ಫಯಾಜ್, ಮುಖ್ಯ ಶಿಕ್ಷಕರಾದ ಸಿ. ರೇವಣ್ಣ, ಗೋವಿಂದಪ್ಪ, ಜಿ.ಬಿ. ಮುನಿಯಪ್ಪ, ಈ. ಮಾರಣ್ಣ, ಕೆ.ಎಸ್. ಶರಣೇಶ್, ವಿವಿಧ ಶಾಲೆಗಳ ನಲಿಕಲಿ ಶಿಕ್ಷಕರಿದ್ದರು.