ಗೋಶಾಲೆ ಆರಂಭ, ಕುಡಿವ ನೀರಿಗಾಗಿ ಆಗ್ರಹ

ಮೊಳಕಾಲ್ಮೂರು: ಸಮಪರ್ಕಕ ಕುಡಿವ ನೀರು ಪೂರೈಕೆ ಹಾಗೂ ತಾಲೂಕಿನ ಏಳೆಂಟು ಕಡೆ ಗೋಶಾಲೆ ತೆರೆದು ಜಾನುವಾರುಗಳನ್ನು ರಕ್ಷಿಸಬೇಕೆಂದು ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಳೆದ 10 ವರ್ಷಗಳಿಂದ ಮಳೆರಾಯನ ಕಣ್ಣಾಮುಚ್ಚಾಲೆ ಆಟದಿಂದ ಜನ ಜಾನುವಾರುಗಳು, ಅನ್ನದಾತರ ಪಾಡು ಹೇಳತೀರದಾಗಿದೆ. ಕಳೆದ ವರ್ಷ ತಾಲೂಕಿನ 8 ಗಡೆ ಗೋಶಾಲೆ ತೆರೆಯಲಾಗಿತ್ತು. ಈ ವರ್ಷವೂ ಜಿಲ್ಲಾಡಳಿತ ಹೆಚ್ಚಿನ ಗೋಶಾಲೆಗಳನ್ನು ತೆರೆದು ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು. ಅಲ್ಲಿ ಕುಡಿವ ನೀರು, ನೆರಳು ಮತ್ತು ಗುಣಮಟ್ಟದ ಮೇವು ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಕೂಡಲೇ ತಾಲೂಕಿನ ವಿವಿಧೆಡೆ ತೆರೆದಿರುವ ಮೇವು ಬ್ಯಾಂಕ್ ರದ್ದು ಮಾಡಿ ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಾನುವಾರು ಸಮೇತ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆ ಹಣ, ಹೆಂಡ ಇತ್ಯಾದಿ ಆಮಿಷಗಳನ್ನು ಒಡ್ಡುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಿ ಶಾಂತಿ ಸೌಹಾರ್ದತೆಯಿಂದ ಮತದಾನ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ಮೊಳಕಾಲ್ಮೂರು ಆಂಧ್ರ ಮತ್ತು ಕರ್ನಾಟಕ ಗಡಿಯ ಕ್ಷೇತ್ರ. ಇಲ್ಲಿ ಎರಡೂ ಕಡೆ ಮತದಾನ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು. ಅಕ್ರಮ ಮದ್ಯ ಮಾರಾಟ, ರಾಜಕೀಯ ಪುಢಾರಿಗಳ ಪುಂಡತನಕ್ಕೆ ಕಡಿವಾಣ ಹಾಕಬೇಕೆಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಬೆಳಗಲ್ ಈಶ್ವರಯ್ಯಸ್ವಾಮಿ, ರವಿಕುಮಾರ್, ರಾಜಣ್ಣ, ಕನಕ ಶಿವಮೂರ್ತಿ, ಡಿ.ಬಿ. ಕೃಷ್ಣಮೂರ್ತಿ, ನೀಲಪ್ಪ, ಮುಂಜುನಾಥ, ಚಂದ್ರಣ್ಣ, ತಿಮ್ಮಪ್ಪ, ಕೊಟ್ರಬಸಪ್ಪ, ವೀರೇಶ್, ನಾಗೇಂದ್ರಪ್ಪ ಪ್ರತಿಭಟನೆಯಲ್ಲಿದ್ದರು.

ರಾಜ್ಯದ ರೈತರು ಕೂಲಿ ಕಾರ್ಮಿಕರು, ಬಡವರ ಏಳಿಗೆಗೆ ನಾನು ಸಿಎಂ ಆಗಿದ್ದೇನೆಂಬ ಕುಮಾರಸ್ವಾಮಿ ಅವರ ಮಾತುಗಳು ಕೇಳಲಷ್ಟೇ ಚೆಂದ. ಆದರೆ ಅವರ ರಾಜಕೀಯ ಕುಟುಂಬಕ್ಕೆ ಮಾತ್ರ ಸೀಮಿತ. ಬರಕ್ಕೆ ತುತ್ತಾಗಿರುವ ತಾಲೂಕುಗಳ ಜನ ಜಾನುವಾರುಗಳ ರಕ್ಷಣೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಮಗನಿಗೆ ರಾಜಕೀಯ ನೆಲೆ ಕಲ್ಪಿಸಲು ಬಜೆಟ್‌ನಲ್ಲಿ ಮಂಡ್ಯಕ್ಕೆ 5 ಸಾವಿರ ಕೋಟಿ ಪ್ಯಾಕೇಜ್ ಮೀಸಲಿಟ್ಟಿರುವುದನ್ನು ಜನತೆ ಮನಗಂಡು ಮತದಾನ ಮಾಡಬೇಕು.
> ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ