ಪೌರ ಕಾರ್ಮಿಕರ ಸೇವೆ ದೈವ ಸ್ಮರಣೆಗಿಂತಲೂ ಮಿಗಿಲು

ಮೊಳಕಾಲ್ಮೂರು: ಬಿಸಿಲು, ಮಳೆ ಲೆಕ್ಕಿಸದೆ ಊರಿನ ಕೊಳೆ ತೊಳೆಯುವ ಪೌರ ಕಾರ್ಮಿಕರ ಸೇವೆ ದೈವ ಸ್ಮರಣೆಗಿಂತಲೂ ಮಿಗಿಲಾದದ್ದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ತುಳಸಿರಂಗನಾಥ್ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಕಾರ್ಮಿಕರು ಹಾಗೂ ಕುಟುಂಬ ಸದಸ್ಯರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪೌರ ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚು ಒತ್ತುಕೊಡಬೇಕು. ಬಾಯಿಗೆ ಮಾಸ್ಕ್, ಕೈಗಳಿಗೆ ರಕ್ಷಾ ಚೀಲ, ಕಾಲುಗಳಿಗೆ ಉದ್ದನೆಯ ಷೂ ಧರಿಸಿ ಕೆಲಸ ಮಾಡಬೇಕು. ನಿತ್ಯದ ಕಾಯಕ ಮುಗಿದ ಮೇಲೆ ಸೋಪಿನಿಂದ ಕೈ ಕಾಲುಗಳನ್ನು ತೊಳೆದುಕೊಳ್ಳಬೇಕು. ಇದರಿಂದ ಸಾಂಕ್ರಾಮಿಕ ರೋಗ ನಿಯಂತ್ರಣ ಸಾಧ್ಯವಾಗುತ್ತದೆ ಎಂದರು.

ಕುಟುಂಬದ ಎಲ್ಲ ಸದಸ್ಯರೊಂದಿಗೆ ವರ್ಷಕ್ಕೆ ಎರಡು ಬಾರಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಸಮಸ್ಯೆ ಇದ್ದರೆ ಕೂಡಲೇ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಡಾ. ಮಂಜುನಾಥ್ ಮಾತನಾಡಿ, ಪೌಷ್ಟಿಕಾಂಶಯುಕ್ತ ಹಣ್ಣು, ತರಕಾರಿ, ಸೊಪ್ಪು, ಧಾನ್ಯಗಳನ್ನು ಹಿತಮಿತವಾಗಿ ಬಳಸಬೇಕು ಎಂದು ತಿಳಿಸಿದರು.

ಶಿಬಿರದಲ್ಲಿ ಕಾರ್ಮಿಕರು ಹಾಗೂ ಕುಟುಂಬದ 50ಕ್ಕೂ ಹೆಚ್ಚು ಮಂದಿಗೆ ರಕ್ತದೊತ್ತಡ, ಮಧುಮೇಹ, ರಕ್ತ ಹೀನತೆ, ಮೂತ್ರ ಪರೀಕ್ಷೆ ನಡೆಸಲಾಯಿತು. ಇದರಲ್ಲಿ 60 ವರ್ಷದ ನಾಲ್ವರಿಗೆ ತೀವ್ರ ಸ್ವರೂಪದ ರಕ್ತದೊತ್ತಡ ಇರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಇಎಸ್‌ಐ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ವೈದ್ಯರು ತಿಳಿಸಿದರು.

ಪಪಂ ಮುಖ್ಯಾಧಿಕಾರಿ ಎಸ್. ರುಕ್ಮಿಣಿ, ಡಾ. ಮಧುಕುಮಾರ್, ಡಾ. ಅಚ್ಚುತನಾಯಕ, ಕಾರ್ಯಕ್ರಮ ಅಧಿಕಾರಿ ವಿನಯ್ ಹಾಗೂ ಕಾರ್ಮಿಕರಿದ್ದರು.

Leave a Reply

Your email address will not be published. Required fields are marked *