ಮೊಳಕಾಲ್ಮೂರು: ತಾಲೂಕು ಗಡಿಭಾಗದ ಆಯ್ದ ಬಹುಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಆರೋಗ್ಯ ಸಚಿವರಿಗೆ ಸಿದ್ದಯ್ಯನಕೋಟೆ ಮಠದ ಶ್ರೀ ಬವಸವಲಿಂಗ ಸ್ವಾಮೀಜಿ ತಿಳಿಸಿದರು.
ಮಂಗಳವಾರ ತಾಲೂಕಿನ ಯರ‌್ರೇನಹಳ್ಳಿ ಸಮೀಪ ನೂತನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರಾಜ್ಯ ತೀರಾ ಹಿಂದುಳಿದ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಶಿಕ್ಷಣ, ಆರೋಗ್ಯ ಕ್ಷೇತ್ರದ ಪ್ರಗತಿ ಹೆಚ್ಚಿನ ಒತ್ತು ನೀಡಬೇಕು. ತಾಲೂಕಿನಲ್ಲಿರುವ ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿ ನೇಮಕ ಹಾಗೂ ಆಧುನಿಕ ಸೇವೆ ಒದಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ವಸತಿ ಶಾಲೆ ಉದ್ಘಾಟಿಸಿ ಸುದ್ದಿಗಾರರ ಜತೆ ಮಾತನಾಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಮುಂದಿನ ದಿನಗಳಲ್ಲಿ ಪದವಿ ಪೂರ್ವ ಕಾಲೇಜು ತೆರೆಯಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಎಸ್ಟಿ ಸಮಾಜಕ್ಕೆ ಸಿಗಬೇಕಿರುವ ಶೇ.7.5 ಮೀಸಲಾತಿ ಜಾರಿಗೆ ಸಂಪೂರ್ಣ ಸಹಕಾರವಿದೆ. ಇದಕ್ಕಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ ಎಂದರು.
ತಾಪಂ ಅಧ್ಯಕ್ಷೆ ಜಿ. ಬೋರಮ್ಮ, ಗ್ರಾಪಂ ಅಧ್ಯಕ್ಷೆ ಸುಮಲತ, ಉಪಾಧ್ಯಕ್ಷೆ ಸಾಕಮ್ಮ, ಪಟೇಲ್ ಜಿ. ಪಾಪನಾಯಕ, ತಹಸೀಲ್ದಾರ್ ಎಂ. ಬಸವರಾಜ್, ಇಒ ಪ್ರಕಾಶ್, ಜಯಪಾಲ, ಸಂಜೀವಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಡಾ. ಮಂಜುನಾಥ, ರಾಮರಡ್ಡಿ, ಪರಮೇಶಿ, ಎಸ್. ತಿಪ್ಪೇಸ್ವಾಮಿ, ಪ್ರಾಂಶುಪಾಲ ಕೆ. ನಾಗರಾಜ್, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿದ್ದರು.