ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಕುಸಿಯದ ಬೇಡಿಕೆ

ಮೊಳಕಾಲ್ಮೂರು: ಆಧುನಿಕ ಜಗತ್ತಿನಲ್ಲಿ ಗೃಹ ಬಳಕೆ ಪ್ಲಾಸ್ಟಿಕ್ ವಸ್ತುಗಳ ಹಾವಳಿ ಇದ್ದರೂ ಗ್ರಾಮೀಣ ಗುಡಿ ಕೈಗಾರಿಕೆಗಳಲ್ಲಿ ಸಿದ್ಧವಾಗುವ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ…

ಮೊಳಕಾಲ್ಮೂರಿನ ಬುಧವಾರ ಸಂತೆಯಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಹುಲ್ಲಿನಿಂದ ಸಿದ್ಧಪಡಿಸಿದ ಪೊರಕೆಗಳ ಮಾರಾಟ ಭರ್ಜರಿಯಾಗಿದ್ದೇ ಸಾಕ್ಷಿ.

ಕೂಲಿಕಾರರು ಚಿತ್ರದುರ್ಗ ಸುತ್ತಮುತ್ತಲ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದಿದ್ದ ಹುಲ್ಲು ಕೊಯ್ದು ತಂದು ಸಿವುಡುಗಳನ್ನು ಸಿದ್ಧಪಡಿಸಿ ತಲಾ 10 ರೂ.ನಂತೆ ಕಳೆದ ಎರಡು ತಿಂಗಳಿಂದ ಮಾರಾಟ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್‌ನ ಪೊರಕೆ 100-120 ರೂ.ಗಳಿದ್ದು, ನಾಲ್ಕಾರು ತಿಂಗಳು ಬಾಳಿಕೆ ಬಂದರೆ ಹೆಚ್ಚು. ಹುಲ್ಲಿನ ಪೊರಕೆ ಹೆಚ್ಚು ಕಾಲ ಬಾಳಿಕೆ ಬರುವುದಲ್ಲದೆ ಅಚ್ಚುಕಟ್ಟಾಗಿ ಕಸ, ಧೂಳು ತೆಗೆಯುತ್ತದೆ. ಇದೇ ರೀತಿ ಈಚಲ ಪೊರಕೆಯೂ ಗಟ್ಟಿಮುಟ್ಟಾಗಿರುತ್ತದೆ ಎಂದು ಮಲ್ಲಮ್ಮ, ಓಬಕ್ಕ, ಸರೋಜಮ್ಮ ಹೇಳಿದರು.

ಹತ್ತು ವರ್ಷಗಳಿಂದ ಹುಲ್ಲಿನ ಪೊರಕೆ ಮಾರಾಟ ಮಾಡುತ್ತಿದ್ದೇನೆ. ಖರ್ಚು ತೆಗೆದು ದಿನಕ್ಕೆ 150 ರೂ. ಸಿಕ್ಕರೂ ಕೂಲಿ ಸಿಕ್ಕಂತಾಗುತ್ತದೆ. ಹಿಂದೆ ಮಳೆ ಚೆನ್ನಾಗಿತ್ತು, ಗುಡ್ಡಗಾಡಿನಲ್ಲಿ ಸಾಕಷ್ಟು ಹುಲ್ಲು ಸಿಗುತ್ತಿತ್ತು. ಈ ಬಾರಿ ಮಳೆ ಅಭಾವದಿಂದ ಹುಲ್ಲು ಬೆಳೆದಿಲ್ಲ. ಚಿತ್ರದುರ್ಗದ ಕಡೆ ಹೋಗಿ ಹುಲ್ಲು ಸಂಗ್ರಹಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶದವರೇ ಹೆಚ್ಚು ಖರೀದಿಸುತ್ತಾರೆ.
> ಸವಿತಾತ, ಬೋರಮ್ಮ, ಹುಲ್ಲಿನ ಕಸಬರಿಗೆ ಮಾರಾಟಗಾರರು