More

    ಭದ್ರಾ ಹಿನ್ನೀರು ಯೋಜನೆ ತ್ವರಿತಕ್ಕೆ ತಾಕೀತು

    ಮೊಳಕಾಲ್ಮೂರು: ತಾಲೂಕಿನ ಜನರಿಗೆ ಶುದ್ಧ ಕುಡಿವ ನೀರೊದಗಿಸುವ ಭದ್ರಾ ಹಿನ್ನೀರು ಯೋಜನೆ ಪೈಪ್‌ಲೈನ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಬದ್ಧತೆ ತೋರಬೇಕೆಂದು ತಾಪಂ ಇಒ ಪ್ರಕಾಶ್ ತಾಕೀತು ಮಾಡಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಹಸೀಲ್ದಾರ್ ಎಂ.ಬಸವರಾಜ್ ಅಧ್ಯಕ್ಷತೆಯಲ್ಲಿ ಭದ್ರಾ ಹಿನ್ನೀರು ಯೋಜನೆ ಪ್ರಗತಿ ಪರಿಶೀಲನೆ ಕುರಿತು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ತಾಲೂಕಿನೆಲ್ಲೆಡೆ ಫೋರೈಡ್ ನೀರು ಸೇವನೆಯಿಂದ ಸಾಕಷ್ಟು ಜನ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಶೀಘ್ರ ಶುದ್ಧ ನೀರೊದಗಿಸಬೇಕೆಂದು ಆರೋಗ್ಯ ಸಚಿವರು ಸೂಚಿಸಿದ್ದಾರೆ. ಅರಣ್ಯ ಮತ್ತು ಸರ್ಕಾರಕ್ಕೆ ಸೇರಿದ ಕೆಲ ಜಾಗದಲ್ಲಿ ಪೈಪ್‌ಲೈನ್ ಅಳವಡಿಸಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಅಧಿಕಾರಿಗಳು ಮುಂದಾಳತ್ವ ವಹಿಸಿ ಕಾನೂನಾತ್ಮಕ ಕ್ರಮ ಕೈಗೊಂಡು ಶೀಘ್ರವೇ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.

    ಯೋಜನೆ ಜನರಲ್ ಮ್ಯಾನೇಜರ್ ವಿಜಯಕುಮಾರ್ ರಡ್ಡಿ ಮಾತನಾಡಿ, ತುರುವನೂರು ಹೋಬಳಿ, ಚಳ್ಳಕೆರೆ, ಕೂಡ್ಲಿಗಿ, ಪಾವಗಡ ಮತ್ತು ಮೊಳಕಾಲ್ಮೂರು ತಾಲೂಕಿನ ಪ್ರತಿ ಹಳ್ಳಿಗಳಿಗೆ ಶಾಶ್ವತ ಕುಡಿವ ನೀರು ನೀಡುವ 2132 ಕೋಟಿ ರೂ. ವೆಚ್ಚದ ಭದ್ರಾ ಹಿನ್ನೀರು ಯೋಜನೆಯಡಿ ಈಗಾಗಲೇ ಪೈಪ್‌ಲೈನ್ ಮತ್ತು ಅಗತ್ಯ ಇರುವೆಡೆ ಟ್ಯಾಂಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

    2021ರ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಗಡುವು ನೀಡಿದೆ. ಆದರೆ, ಸಚಿವರು 2020 ಅಕ್ಟೋಬರ್ ವೇಳೆಗೆ ಕೆಲಸ ಮುಗಿಸುವಂತೆ ತಾಕೀತು ಮಾಡಿದ್ದಾರೆ. ಯೋಜನೆಯ ಅಡ್ಡಿ ನಿವಾರಣೆಗೆ ಸ್ಥಳೀಯರು ಮತ್ತು ಅಧಿಕಾರಿಗಳು ಸಹಕಾರ ನೀಡಬೇಕೆಂದು ಕೋರಿದರು.

    ತಾಲೂಕಿನ 134 ಹಳ್ಳಿಗಳಿಗೆ ಕುಡಿವ ನೀರು ನೀಡುವ ಪೈಪ್‌ಲೈನ್ ಕಾಮಗಾರಿ ಈಗಾಗಲೇ 215 ಕಿಮೀ ಪೂರ್ಣಗೊಂಡಿದ್ದು, 94 ಕಿಮೀ ಪ್ರಗತಿಯಲ್ಲಿದೆ. ತಾಲೂಕು ಗಡಿಯಲ್ಲಿರುವ 59 ಬಹು ಗ್ರಾಮಗಳಲ್ಲಿ ಜನಸಂಖ್ಯೆ ಅನುಗುಣವಾಗಿ 10 ಸಾವಿರದಿಂದ 2.50 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

    ಜಿಪಂ ಇಂಜಿನಿಯರ್‌ಗಳಾದ ಎಸ್.ನಾಗರಾಜ, ಕೆ.ಪಿ.ತಿಪ್ಪೇಸ್ವಾಮಿ, ಪವನ್‌ಕುಮಾರ್, ಅರಣ್ಯ, ಬೆಸ್ಕಾಂ, ಕಂದಾಯ, ಬಿಎಸ್‌ಎನ್‌ಎಲ್, ತಾಪಂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ನಾಗೇಂದ್ರನಾಯ್ಕ, ಗೋವಿಂದರಾಜ್, ಸಿ.ಶಿವಪ್ರಸಾದ್, ಸಚಿವರ ಆಪ್ತ ಸಹಾಯಕ ಪಾಪೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts