ಮೊಳಕಾಲ್ಮೂರು: ಹೆಣ್ಣು ಮಕ್ಕಳ ಉತ್ತಮ ಬದುಕಿಗೆ ಶಿಕ್ಷಣವೇ ಅಸ್ತ್ರ ಎಂದು ದೇಶದ ಉದ್ದಗಲಕ್ಕೂ ಬೆಳಕು ಚೆಲ್ಲಿದ ದಿವ್ಯ ಜ್ಯೋತಿ ಸಾವಿತ್ರಿಬಾಯಿ ಫುಲೆ ಎಂದು ಪ್ರಾಂಶುಪಾಲೆ ಕೆ.ವಿ.ಪ್ರಜ್ಞಾ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಅನಕ್ಷರತೆ, ಕಟ್ಟುಪಾಡುಗಳಿಂದ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲೇ ವಿವಾಹ ಮಾಡುತ್ತಿದ್ದರು. ಇಂತಹ ಪದ್ಧತಿಗಳು ಮನುಕುಲಕ್ಕೆ ಮಾರಕ ಎಂದು ಸಾವಿತ್ರಿಬಾಯಿ ಫುಲೆ ಅವರು ಎಚ್ಚರಿಸಿದ್ದರು ಎಂದರು.
ಉಪನ್ಯಾಸಕ ಟಿ.ತಿಮ್ಮಣ್ಣ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಇಡೀ ಜೀವನ ಸವೆಸುತ್ತಿದ್ದ ಮಹಿಳೆಯರಿಗೆ ಶಿಕ್ಷಣ ನೀಡಿದರೆ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಸಾವಿತ್ರಿಬಾಯಿ ಫುಲೆ ಸಾರಿದರು ಎಂದು ಹೇಳಿದರು.
ಪ್ರೊ.ಲಲಿತಾ, ಉಪನ್ಯಾಸಕರಾದ ಪಿ.ಬಿ.ರಾಮಸ್ವಾಮಿ, ಓ.ಓಬಣ್ಣ, ಸಿ.ಚಿತ್ತಯ್ಯ, ಟಿ.ಶಿವಣ್ಣ, ಎಸ್.ಸಿ.ಗಂಗಾಧರ, ಎಂ.ಟಿ.ತಿಪ್ಪೇರುದ್ರ ಇತರರಿದ್ದರು.