ಗುತ್ತಿಗೆದಾರ ಸಂಘಕ್ಕೆ ಹಲವರ ರಾಜೀನಾಮೆ

ಮೊಳಕಾಲ್ಮೂರು: ತಾಲೂಕು ಗುತ್ತಿಗೆದಾರರ ಸಂಘದ ನೂತನ ಸಮಿತಿ ರಚನೆಗೆ ಆಗ್ರಹಿಸಿ ಸಂಘದ ಉಪಾಧ್ಯಕ್ಷ ಸೇರಿ 10 ನಿರ್ದೇಶಕರು ರಾಜೀನಾಮೆ ನೀಡಿದ್ದು, 60ಕ್ಕೂ ಸದಸ್ಯರು ಇದನ್ನು ಬೆಂಬಲಿಸಿದ್ದಾರೆ.

ಇಲ್ಲಿನ ಕೃಷಿ ಕಚೇರಿ ಸಮೀಪದ ಗುತ್ತಿಗೆದಾರರ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ಕೆ.ಇಸ್ಮಾಯಿಲ್ ವಿರುದ್ಧ ಆಕ್ರೋಶ ವ್ಯಕ್ತವಾಯಿತು. 20 ವರ್ಷದಿಂದ ಅಧಿಕಾರದಲ್ಲಿದ್ದರೂ, ಗುತ್ತಿಗೆದಾರರ ಹಿತ ಕಾಪಾಡಲು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದವು.

ಸಂಘದ ನಿರ್ದೇಶಕ ಎನ್.ಬಿ.ಗೋವಿಂದಪ್ಪ ಮಾತನಾಡಿ, ಹಾಲಿ ಅಧ್ಯಕ್ಷರ ಆಡಳಿತ ವೈಖರಿಯಿಂದ ಬೇಸತ್ತ 70 ಸದಸ್ಯರು ವಾರದ ಹಿಂದೆ ರಾಜೀನಾಮೆ ನೀಡಿದ್ದಾರೆ. ಆದರೂ, ಈವರೆಗೂ ಸಭೆ ಕರೆದಿಲ್ಲ ಎಂದು ಆರೋಪಿಸಿದರು.

ಸಂಘದ ಕಾರ್ಯ ಚಟುವಟಿಕೆ, ಲೆಕ್ಕಪತ್ರದ ಮಾಹಿತಿ ಇಲ್ಲ. ಸಂಘದ ಕಚೇರಿಗೆ ಬೀಗ ನೀಡುತ್ತಿಲ್ಲ. ಇಂಥ ಅಧ್ಯಕ್ಷರ ಅಗತ್ಯವಿಲ್ಲ. ನೂತನ ಅಧ್ಯಕ್ಷರ ಪುನರ್ ರಚನೆ ಆಗಬೇಕು ಎಂದು ಆಗ್ರಹಿಸಿದರು.

ಸಹಕಾರ್ಯದರ್ಶಿ ಕೆ.ಎಂ.ಶಿವಮೂರ್ತಿ ಮಾತನಾಡಿ, ಮೂರು ವರ್ಷದಿಂದ ಸಂಘದ ನವೀಕರಣ ಆಗಿಲ್ಲ. ಕಾಮಗಾರಿಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದು, ಸಣ್ಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಕೂಡಲೆ, ಅಧ್ಯಕ್ಷ, ಕಾರ್ಯದರ್ಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಹಾಜರಿದ್ದ ಉಪಾಧ್ಯಕ್ಷ ಎಸ್.ತಿಪ್ಪೇಸ್ವಾಮಿ, ನಿರ್ದೇಶಕರಾದ ಬಿ.ಸತ್ಯನಾರಾಯಣ, ಪಾಲಯ್ಯ ಹಾಗೂ ಸದಸ್ಯರು ಬೆಂಬಲ ಸೂಚಿಸಿದರು.

ಸಂಘದ ನಿರ್ದೇಶಕರ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಕೆಲವರು ರಾಜೀನಾಮೆ ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ರಾಜೀನಾಮೆ ಪತ್ರ ತಲುಪಿಲ್ಲ. ಸಂಘದ ಚಟುವಟಿಕೆ ಬಗ್ಗೆ ಜು.6ರಂದು ಪದಾಧಿಕಾರಿಗಳ ಸಭೆ ಆಯೋಜಿಸಲಾಗಿದೆ. ಸರ್ವ ಸದಸ್ಯರ ನಿರ್ಣಯದಂತೆ ಹೊಸ ಸಮಿತಿ ರಚನೆಗೆ ನನ್ನ ಸಹಮತವಿದೆ ಎಂದು ಗುತ್ತಿಗೆದಾರರ ಸಂಘ ಅಧ್ಯಕ್ಷ ಬಿ.ಕೆ.ಇಸ್ಮಾಯಿಲ್ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *