ಭದ್ರಾ ಹಿನ್ನೀರು ಯೋಜನೆಗೆ ವಿಜ್ಞ

ಮೊಳಕಾಲ್ಮೂರು: ಬಯಲುಸೀಮೆ ಜನರ ಬಹುದಿನದ ಕನಸಾಗಿದ್ದ ಭದ್ರಾ ಹಿನ್ನೀರು ಕುಡಿಯುವ ಯೋಜನೆ ಪಟ್ಟಣಕ್ಕೆ ವಿಸ್ತರಣೆಯಾಗಲು ಆರಂಭದಲ್ಲೇ ಹಲವು ಅಡ್ಡಿ ಆತಂಕಗಳು ಎದುರಾಗಿವೆ.

ಪೈಪ್‌ಲೈನ್ ಕಾಮಗಾರಿಗೆ ಅಡ್ಡಿ: ಮೊಳಕಾಲ್ಮೂರು, ಚಳ್ಳಕೆರೆ, ಪಾವಗಡ ತಾಲೂಕುಗಳಿಗೆ ಗ್ರಾಮೀಣ ಕುಡಿವ ನೀರು ಯೋಜನೆಯಡಿ 2132 ಕೋಟಿ ರೂ. ವೆಚ್ಚದಲ್ಲಿ ಭದ್ರಾ ಹಿನ್ನೀರು ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಯೋಜನೆಯಡಿ ಮೊಳಕಾಲ್ಮೂರಿಗೆ ನೀರು ಹರಿಸಲು ಪಟ್ಟಣ ಸಮೀಪ ನಡೆಯುತ್ತಿದ್ದ ಪೈಪ್‌ಲೈನ್ ಕಾಮಾಗಾರಿ ಸ್ಥಳಕ್ಕೆ ಶನಿವಾರ ಪಪಂ ಸದಸ್ಯರು, ನಾಗರಿಕರು ಭೇಟಿ ಪ್ರತಿಭಟನೆ ನಡೆಸಿದರು.

ಕೆಲಸದ ಬಗ್ಗೆ ಅನುಮಾನ ಮೂಡಿದ್ದು, ಈ ಕುರಿತು ಇಂಜಿನಿಯರ್ ಸ್ಥಳಕ್ಕೆ ಬಂದು ಸ್ಪಷ್ಟ ಮಾಹಿತಿ ನೀಡುವವರೆಗೆ ಕೆಲಸ ಮಾಡುವಂತಿಲ್ಲವೆಂದು ಪೈಪ್‌ಲೈನ್‌ಗೆ ಗುಂಡಿ ತೋಡುತ್ತಿದ್ದ ಜೆಸಿಬಿ ಕಾರ್ಯಕ್ಕೆ ತಡೆವೊಡ್ಡಿದರು.

ಈ ಮಹತ್ವ ಪೂರ್ಣ ಯೋಜನೆಯನ್ನು ಹಾನಗಲ್ ಮಾರ್ಗವಾಗಿ ಮೊಳಕಾಲ್ಮೂರು ಟೌನ್‌ಗೆ ತರುವ ಕೆಲಸ ಅವೈಜ್ಞಾನಿಕವಾಗಿದೆ. ಪಿಡಬ್ಲ್ಯುಡಿ ನಿಯಮ ಪ್ರಕಾರ ರಸ್ತೆ ಮಧ್ಯದಿಂದ ಎರಡೂ ಕಡೆ 22 ಮೀಟರ್ ಅಂತರದಲ್ಲಿ ಮತ್ತು ಐದೂವರೆ ಆಳದ ಕಾಲುವೆ ತೋಡಬೇಕು.

ಆದರೆ, ಮನ ಬಂದಂತೆ ಕಾಲುವೆ ತೆಗೆದು ಪೈಪ್ ಅಳವಡಿಸಲಾಗುತ್ತಿದೆ. ಇದರ ಹಿಂದೆ ಕೋಟ್ಯಂತರ ರೂ. ಲಪಟಾಯಿಸುವ ತಂತ್ರವಿದೆ ಎಂದು ದೂರಿದರು.

25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣಕ್ಕೆ ದಿನಕ್ಕೆ ಕನಿಷ್ಠ 28 ಲಕ್ಷ ಲೀಟರ್ ನೀರುಬೇಕು. ಇಲ್ಲಿನ ನಾಲ್ಕೈದು ಟ್ಯಾಂಕರ್‌ಗಳು ಅಂದಾಜು 8 ಲಕ್ಷ ನೀರಿನ ಸಾಮರ್ಥ್ಯ ಹೊಂದಿವೆ. ಭದ್ರಾ ಹಿನ್ನೀರು ಯೋಜನೆಯಡಿ ದೊಡ್ಡ ಟ್ಯಾಂಕ್ ಮತ್ತು ಸಂಪುಗಳನ್ನು ನಿರ್ಮಿಸಿಕೊಡಬೇಕು.

ಅಲ್ಲಿಯ ವರೆಗೆ ಪೈಪ್‌ಲೈನ್ ಕಾಮಗಾರಿ ನಡೆಯಲು ಬಿಡುವುದಿಲ್ಲ. ಈ ಬಗ್ಗೆ ಪಪಂ ಮುಖ್ಯಾಧಿಕಾರಿ, ಶಾಸಕರು ವಿಶೇಷ ಕಾಳಜಿ ವಹಿಸಬೇಕು ಎಂದು ಪಪಂ ಸದಸ್ಯರಾದ ಎಸ್.ಖಾದರ್, ಟಿ.ರವಿಕುಮಾರ, ಲಕ್ಷ್ಮಣ, ತಿಪ್ಪೇಶಿ ಇತರರು ಒತ್ತಾಯಿಸಿದರು.

ಮಧ್ಯ ಪ್ರವೇಶಿಸಿದ ಶಾಸಕರ ಆಪ್ತ ಸಹಾಯಕ ಪಾಪೇಶ್, ವಿಷಯವನ್ನು ಶಾಸಕರ ಗಮನಕ್ಕೆ ತಂದು ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಸರಿಪಡಿಸುವ ಭರವಸೆ ಶಾಸಕರು ನೀಡಿದ್ದಾರೆ ಎಂಬ ಮಾಹಿತಿ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಸ್ಥಳೀಯ ಸಂಸ್ಥೆಗಳೇ ಗಮನ ಹರಿಸಬೇಕು: ಗ್ರಾಮೀಣ ಪ್ರದೇಶಕ್ಕೆ ಮೊದಲ ಆದ್ಯತೆ ನೀಡುವುದು ಯೋಜನೆ ಉದ್ದೇಶ. ತಾಲೂಕಿನ 134 ಜನವಸತಿ ಪ್ರದೇಶಗಳಿಗೆ ಅಂದಾಜು 1,33,540 ಜನರಿಗೆ ದಿನಕ್ಕೆ ತಲಾ 85 ಲೀಟರ್‌ನಂತೆ ನೀರೊದಗಿಸುವ ಗುರಿ ಇದೆ. ಜತೆಗೆ ಮೊಳಕಾಲ್ಮೂರು ಮತ್ತು ಪಾವಗಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಒಳಪಡುವುದರಿಂದ ನಾವು ಏನೂ ಮಾಡಲಾಗದು. ಈ ಬಗ್ಗೆ ಸ್ಥಳೀಯ ಆಡಳಿತಗಳೇ ಗಮನ ಹರಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಇಂಜಿನಿಯರೊಬ್ಬರು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪಟ್ಟಣದ ಜನರಿಗೆ ಶಾಶ್ವತ ಕುಡಿವ ನೀರೊದಗಿಸುವ ಅಗತ್ಯ ಇದೆ. ಭದ್ರಾ ಹಿನ್ನೀರು ಬರುತ್ತದೆ ಎಂಬ ಆಶಾಭಾವನೆ ಇದೆ. ಆದರೆ, ಯೋಜನೆ ಬಗ್ಗೆ ಯಾವೊಬ್ಬ ಅಧಿಕಾರಿಯೂ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಪಪಂ ಮುಖ್ಯಾಧಿಕಾರಿ ಎಸ್.ರುಕ್ಮಿಣಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *