ಡೆತ್‌ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

ಮೊಳಕಾಲ್ಮೂರು: ತಾಲೂಕಿನ ಮುತ್ತಿಗಾರನಹಳ್ಳಿಯಲ್ಲಿ ರೈತನೊಬ್ಬ ಸಾಲಬಾಧೆಗೆ ಹೆದರಿ ಡೆತ್‌ನೋಟ್ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ಮುತ್ತಿಗಾರಹಳ್ಳಿ ರೈತ ಬಿ.ಟಿ.ಸಣ್ಣರುದ್ರಪ್ಪ (60) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಪಿಎಸ್‌ವೈ, ಮೊಳಕಾಲ್ಮೂರು ಪೊಲೀಸ್ ಠಾಣೆ ಇವರ ಹೆಸರಿಗೆ ಪತ್ರ ಬರೆದಿದ್ದು, ನನ್ನ ಆತ್ಮಹತ್ಯೆಗೆ ಯಾರು ಕಾರಣರಲ್ಲ. ಈ ಸಂಬಂಧ ಯಾರ ವಿರುದ್ಧವೂ ವಿಚಾರಣೆ ನಡೆಸಬಾರದು ಎಂದು ಮನವಿ ಮಾಡಿಕೊಂಡಿದ್ದಾನೆ.

ಭಾನುವಾರ ಮಧ್ಯಾಹ್ನ ಮನೆಯಲ್ಲಿ ವಿಷ ಸೇವಿಸಿದ್ದಾರೆ. ಇದನ್ನು ಗಮನಿಸಿದ ಕುಟುಂಬದ ಸದಸ್ಯರು, ತಕ್ಷಣ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ: ಏಳುವರೆ ಎಕರೆ ಜಮೀನಿನಲ್ಲಿ ಎಂಟು ವರ್ಷಗಳ ಹಿಂದೆ ಕೊಳವೆಬಾವಿ ನೀರಿನಿಂದ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದೆವು. ಆದರೆ, ಕಾಲ ಉರುಳಿದ ಆನಂತರ ಕೃಷಿಯಲ್ಲಿ ಸತತ ನಷ್ಟ ಅನುಭವಿಸಿದೆವು. ಅಭಿವೃದ್ಧಿಗೆಂದು ಜಮೀನು ಆಧಾರವಿಟ್ಟು ಮೊಳಕಾಲ್ಮೂರಿನ ಪಿಎಲ್‌ಡಿ ಬ್ಯಾಂಕ್‌ನಲ್ಲಿ 2.50 ಲಕ್ಷ ರೂ, ಬಿ.ಜಿ. ಕೆರೆ ವಿಎಸ್‌ಎಸ್‌ಎನ್ ಸೊಸೈಟಿಯಲ್ಲಿ 50 ಸಾವಿರ ರೂ., ಕೈ ಸಾಲವಾಗಿ 4 ಲಕ್ಷ ರೂ. ಸಾಲ ಮಾಡಿದ್ದೇನೆ.

ಭೀಕರ ಬರ ಆವರಿಸಿ ಕೊಳವೆಬಾವಿ ಬತ್ತಿ ಹೋಗಿದ್ದರಿಂದ ಬಡ್ಡಿ ಸಮೇತ ಸಾಲ ಕಟ್ಟಲು ಸಾಧ್ಯವಾಗಿಲ್ಲವೆಂದು ದಿಕ್ಕುತೋಚದಂತಾಗಿ ಸಂಕಷ್ಟದ ಜೀವನದ ಬಾಧೆ ನನ್ನನ್ನು ಬಲವಾಗಿ ಕಾಡಲಾರಂಬಿಸಿತು. ನನಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇದಕ್ಕೆ ನನ್ನ ಮಕ್ಕಳಾಗಲಿ ಅಥವಾ ಸಂಬಂಧಿಗಳಾಗಲಿ ಯಾರೂ ಕಾರಣರಲ್ಲ. ಯಾರನ್ನು ದೋಷಿಸುವುದು ಬೇಡ. ಇದು ನನ್ನ ಸ್ವಯಂ ನಿರ್ಧಾರವಾಗಿದೆ ಎಂದು ಮೊಳಕಾಲ್ಮೂರು ಠಾಣೆಯ ಪಿಎಸ್‌ಐಗೆ ಡೆತ್‌ನೋಟ್ ಬರೆದಿದ್ದಾರೆ.