ಶಾಲಾ ಕಿಟಕಿ, ಬಾಗಿಲಿಗೆ ಗೆದ್ದಲು

ಐಮಂಗಲ: ಗೆದ್ದಲು ತಿಂದ ಕಿಟಕಿ ಬಾಗಿಲುಗಳು, ಜೋತಾಡುವ ತೊಲೆಗಳು, ಬಿರುಕುಬಿಟ್ಟ ಗೋಡೆಗಳು, ಜೀವಭಯದಲ್ಲಿ ಕಾಲ ಕಳೆವ ಶಿಕ್ಷಕರು ಮತ್ತು ಮಕ್ಕಳು. ಇದು ಐಮಂಗಲದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಚಿತ್ರಣ.

1938ರಲ್ಲಿ ಆರಂಭಗೊಂಡ ಶಾಲೆ ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಬಹುತೇಕರ ಜೀವನ ಭದ್ರಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಷ್ಟೆಲ್ಲ ನೆನಪುಳ್ಳ ಶಾಲೆ ಅಭಿವೃದ್ಧಿಗೊಳ್ಳದಿರುವುದು ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.

ಒಂದು ಕಾಲದಲ್ಲಿ ನೂರಾರು ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಶಾಲೆ ಪ್ರಸ್ತುತ ಬೆರಳೆಣಿಕೆ ಮಕ್ಕಳಿಗೆ ಸೀಮಿತಗೊಂಡಿದೆ. ಇಲ್ಲಿನ ದುಸ್ಥಿತಿ ನೋಡಿ ಪಾಲಕರು, ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸುತ್ತಿದ್ದಾರೆ. ಪ್ರಸ್ತುತ 1ರಿಂದ 7ನೇ ತರಗತಿಯಲ್ಲಿ 104 ವಿದ್ಯಾರ್ಥಿಗಳಿದ್ದು ಹೊಸ ದಾಖಲಾತಿ ಆರಂಭಗೊಂಡಿದೆ.

ಶಾಲೆ ಸ್ಥಿತಿಗತಿ: ಒಂಭತ್ತು ಕೊಠಡಿಯುಳ್ಳ ಶಾಲೆಯಲ್ಲಿ ಮೂರು ಕಟ್ಟಡ ಮಾತ್ರ ಉತ್ತಮವಿದ್ದು, ಉಳಿದವು ಶಿಥಿಲಗೊಂಡಿವೆ. ಕಿಟಕಿ, ಬಾಗಿಲು, ಚಾವಣಿಯ ತೊಲೆಗಳೆಲ್ಲ ಗೆದ್ದಿಲು ತಿಂದಿವೆ. ಹೆಂಚುಗಳು ಒಡೆದಿದ್ದು, ಮಳೆ ನೀರೆಲ್ಲ ಕೊಠಡಿಯೊಳಕ್ಕೆ ಬರುತ್ತಿದೆ. ಈ ಕಾರಣದಿಂದ ಒಂದೊಂದು ಕೊಠಡಿಯಲ್ಲಿ ಮೂರು ತರಗತಿಯ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ.

ಶಾಲೆಯಲ್ಲಿ ಶಿಕ್ಷಕರ ಕೊರತೆ: 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಮುಖ್ಯಶಿಕ್ಷಕರು ಸಂಬಂಧಿಸಿದವರ ಗಮನಕ್ಕೆ ತಿಳಿಸಿದ್ದರೂ ಪ್ರಯೋಜವಾಗಿಲ್ಲ. ಇದೂ ಕೂಡ ಮಕ್ಕಳ ಸಂಖ್ಯೆ ಕಡಿಮೆ ಆಗಲು ಕಾರಣ.

ಜನಪ್ರತಿನಿಧಿಗಳ ನಿರ್ಲಕ್ಷೃ: ಗ್ರಾಪಂ, ತಾಪಂ, ಜಿಪಂ ಸದಸ್ಯ, ಅಧ್ಯಕ್ಷರು ಐಮಂಗಲದವರೇ ಆಗಿದ್ದರೂ ನಮ್ಮೂರಿನ ಶಾಲೆ ಎಂಬ ಅಭಿಮಾನಕ್ಕಾದರೂ ದುರಸ್ತಿಗೆ ಮುಂದಾಗಿಲ್ಲ. ಮುಂದಿನ ದಿನಗಳಲ್ಲಾದರೂ ವಿಶೇಷ ಅನುದಾನದಡಿ ನೂತನ ಕೊಠಡಿ ನಿರ್ಮಿಸಲಿ ಎಂಬುದು ಗ್ರಾಮಸ್ಥರ ಒತ್ತಾಯ.

ಹಿರಿಯೂರು ತಾಲೂಕಿನ ವಿವಿಧ ಶಾಲೆಗಳ ಚಿಕ್ಕಪುಟ್ಟ ಕೊರತೆ ಸರಿಪಡಿಸಲಾಗಿದೆ. ಶಿಥಿಲಗೊಂಡ ಹಳೇ ಕಟ್ಟಡಗಳ ವಿವರ ಪಡೆದು ಶಿಕ್ಷಣ ಇಲಾಖೆ ಆಯುಕ್ತರಿಗೆ ಕಳುಹಿಸಲಾಗುತ್ತದೆ ಎಂದು ಡಿಡಿಪಿಐ ಎ.ಜೆ.ಆಂಥೋನಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *