ಬಯಲು ಸೀಮೆಯಲ್ಲಿ ಹಸಿರು ಅಭಿಯಾನ

ಮೊಳಕಾಲ್ಮೂರು: ಬಯಲುಸೀಮೆಯಲ್ಲಿ ಮರಗಿಡ ಬೆಳೆಸುವ ಮೂಲಕ ಹಸಿರು ಅಭಿಯಾನಕ್ಕೆ ಸರ್ವರೂ ಕೈಜೋಡಿಸಬೇಕೆಂದು ತಾಪಂ ಇಒ ಡಾ.ಶ್ರೀಧರ್ ಮನವಿ ಮಾಡಿದರು.

ತಾಲೂಕಿನ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಸಿರು ಅಭಿಯಾನ ಜಾಗೃತಿ ಅಂಗವಾಗಿ ತಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ಇಲ್ಲದೆ ಬದುಕಲು ಅಸಾಧ್ಯ. ಮರಗಳ ನಾಶದಿಂದ ಭೀಕರ ಬರ ಆವರಿಸಿದೆ. ಪರಿಸರದ ತಾಪಮಾನ ಏರುತ್ತಿದೆ. ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಅಗತ್ಯವಾದ ಹಸಿರು ವಾತಾವರಣ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದರು.

ಪ್ರತಿ ಗ್ರಾಪಂ ಗೆ ತಲಾ 500 ಸಸಿ ಪೂರೈಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ತಲಾ ಎರಡು ಗಿಡ ನೆಟ್ಟು ಬೆಳೆಸುವ ಹೊಣೆಗಾರಿಕೆಯನ್ನು ಆಯಾ ಶಾಲಾ ಶಿಕ್ಷಕರಿಗೆ ವಹಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಾವಿರಾರು ಗಿಡ ನೆಡುವ ಜತೆ ಪೋಷಣೆ ಹೊಣೆಗಾರಿಕೆ ನಿರ್ವಹಿಸಬೇಕು ಎಂದು ಸೂಚಿಸಿದರು.

ತಾಪಂ ಅಧ್ಯಕ್ಷೆ ಲತಮ್ಮ, ಉಪಾಧ್ಯಕ್ಷೆ ತಿಮ್ಮಕ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್, ಸಿಡಿಪಿಒ ಹೊನ್ನಪ್ಪ, ಉಪ ಪ್ರಾಚಾರ್ಯ ಎಸ್.ಸುರೇಂದ್ರನಾಥ ಇತರರು ಉಪಸ್ಥಿತರಿದ್ದರು.

ಪ್ರತಿ ಶಾಲೆ, ಸರ್ಕಾರಿ ಕಚೇರಿ ಆವರಣದಲ್ಲಿ ಲಭ್ಯವಿರುವ ಜಾಗಕ್ಕೆ ಅನುಗುಣವಾಗಿ ಉದ್ಯಾನ ನಿರ್ಮಿಸುವ ಗುರಿ ಇದೆ. ಮನೆ ಅಕ್ಕ ಪಕ್ಕದಲ್ಲಿ ಗಿಡ ನೆಟ್ಟು ಬೆಳೆಸಲು ಮನೆ ಮಾಲೀಕರ ಮನವೊಲಿಸಲಾಗುವುದು ಎಂದು ತಾಪಂ ಇಒ ಡಾ.ಶ್ರೀಧರ್ ತಿಳಿಸಿದ್ದಾರೆ.

ಸಾಮಾಜಿಕ ಅರಣ್ಯ ಸಸ್ಯ ಕ್ಷೇತ್ರದಲ್ಲಿ 60ಸಾವಿರ ಸಸಿ ಬೆಳೆಸಿದ್ದು, ಅವುಗಳ ಪೈಕಿ 30 ಸಾವಿರ ರೇಷ್ಮೆ ಕಸಿ ಸಸಿಗಳನ್ನು ರೈತರಿಗೆ ವಿತರಿಸಲಾಗಿದೆ. 15 ಸಾವಿರಕ್ಕೂ ಹೆಚ್ಚು ನುಗ್ಗೆ, ಕರಿಬೇವು, ಪಪ್ಪಾಯಿ, ಹೆಬ್ಬೇವು ಸಸಿಗಳನ್ನು ಶಾಲೆಗೆ ಹಾಗೂ ರೈತರಿಗೆ ವಿತರಿಸಲಾಗಿದೆ ಎಂದು ಸಾಮಾಜಿಕ ಅರಣ್ಯಾಧಿಕಾರಿ ಆರ್.ಬಿ.ಪೂಜಾರ್ ತಿಳಿಸಿದ್ದಾರೆ.