ಕುಡಿವ ನೀರು ಪೂರೈಕೆಗೆ ಒತ್ತಾಯ

ಮೊಳಕಾಲ್ಮೂರು: ಪಟ್ಟಣದ ಗಿರಿಯಜ್ಜನಹಟ್ಟಿ ಬಡಾವಣೆ ನಿವಾಸಿಗಳು ಕುಡಿವ ನೀರು ಪೂರೈಕೆಗೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಕುಟುಂಬಗಳಿವೆ. ಪಪಂ ನಿರ್ಲಕ್ಷೃದಿಂದ 15 ದಿನಗಳಿಂದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕುಡಿವ ನೀರಿನ ಎರಡೂ ಕೊಳುವೆಬಾವಿಯ ಮೋಟಾರ್‌ಗಳು ಸುಟ್ಟು 15 ದಿನವಾದರೂ ದುರಸ್ತಿಪಡಿಸಿಲ್ಲ ಎಂದು ದೂರಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಸ್. ಅನಿತಾಲಕ್ಷ್ಮಿ, ಸಂಜೆ ಬಡಾವಣೆಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಹೆಣ್ಣು ಮಕ್ಕಳು, ದೇವರು ಬಂದಂಗೆ ಬಂದ್ರಿ. ನಮ್ಮ ಕಷ್ಟ ಕೇಳೋರು ಯಾರೂ ಇಲ್ಲ ಅಂದುಕೊಂಡಿದ್ವಿ. ನೀವು ಬಂದಿದ್ದು ಸಂತೋಷವಾಯ್ತು.

ಬಡಾವಣೆಯಲ್ಲಿ ಬಡ ಕುಟುಂಬಗಳೇ ಹೆಚ್ಚಾಗಿವೆ. ಬೆಳಗ್ಗೆ ಕೂಲಿ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುತ್ತೇವೆ. ಇಲ್ಲಿನ ಚರಂಡಿಗಳೆಲ್ಲ ಕಸಕಟ್ಟಿ ದುರ್ನಾತ ಬೀರುತ್ತಿವೆ. ಬೀದಿದೀಪಗಳು ಬೆಳಗಿದ್ದನ್ನೇ ಕಂಡಿಲ್ಲ. ಮನೆಗೊಂದು ಶೌಚಗೃಹ ನಿರ್ಮಿಸಿಕೊಂಡು ವರ್ಷವಾದರೂ ಸಹಾಯಧನ ನೀಡಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಸದ್ಯಕ್ಕೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿಸುತ್ತೇನೆ. ಮಂಗಳವಾರ ಬೆಳಗ್ಗೆ ಮೋಟಾರ್ ದುರಸ್ತಿ ಮಾಡಿಸಿ ಸಮರ್ಪಕ ನೀರು ಪೂರೈಸುವಂತೆ ಮುಖ್ಯಾಧಿಕಾರಿಗೆ ಸೂಚಿಸುತ್ತೇನೆ ಎಂದಾಗ ಪ್ರತಿಪ್ರಭಟನೆ ಹಿಂಪಡೆಯಲಾಯಿತು.

ಬಡಾವಣೆ ನಿವಾಸಿಗಳಾದ ಟಿ.ಎಸ್. ಮೂರ್ತಿ, ಬಸಮ್ಮ, ಲಕ್ಷ್ಮಕ್ಕ, ನಿಂಗಪ್ಪ, ಲೀಲಾವತಿ, ನಾಗಣ್ಣ, ಬಸಮ್ಮಜ್ಜಿ, ನೀಲಮ್ಮ, ಲಕ್ಷ್ಮಿ, ರಮೇಶ, ಗಂಗಮ್ಮ, ರಾಮಚಂದ್ರ ಇತರರಿದ್ದರು.

Leave a Reply

Your email address will not be published. Required fields are marked *