ಪರಿಸರ ಸಂರಕ್ಷಿಸಿ ಜಲಕ್ಷಾಮ ನಿವಾರಿಸಿ

ಮೊಳಕಾಲ್ಮೂರು: ಪರಿಸರ-ನೀರಿನ ಸಂರಕ್ಷಣೆ ಮೂಲಕವೇ ಜಲಕ್ಷಾಮ ಹತೋಟಿಗೆ ತರಲು ಸಾಧ್ಯ ಎಂದು ವೆಡ್ಸ್ ಸಂಸ್ಥೆ ಕಾರ್ಯದರ್ಶಿ ಗಂಗಾಧರ್ ತಿಳಿಸಿದರು.

ಜಲಶಕ್ತಿ ಅಭಿಯಾನದ ಪ್ರಗತಿಗೆ ಪರ್ಯಾಯ ಮಾರ್ಗಗಳನ್ನು ಅನುಸರಿಸುವ ಕುರಿತು ಸೋಮವಾರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎರಡು ದಶಕಗಳ ಹಿಂದೆ ಎಲ್ಲಿ ನೋಡಿದರೂ ಹಸಿರಿತ್ತು. ಜುಳು ಜುಳು ನಿನಾದ ಮಾಡುವ ಹಳ್ಳ, ಕೆರೆಕಟ್ಟೆ, ನದಿ ತೊರೆಗಳು ಗೋಚರಿಸುತ್ತಿದ್ದವು. ಈಗ ಕಾಡು ಮೇಡು ಕಡಿಮೆಯಾಗಿದೆ. ನದಿ ತೊರೆಗಳಲ್ಲಿ ನೀರಿಲ್ಲ. ಈಗಲೂ ಕಾಲ ಮಿಂಚಿಲ್ಲ. ಪರಿಸರ-ಜಲ ಸಂರಕ್ಷಣೆಗೆ ಕ್ರಮ ಕೈಗೊಂಡರೆ ಪೂರ್ವದ ಸ್ಥಿತಿ ಮರುಸೃಷ್ಟಿ ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಿ.ಎನ್. ತಿಪ್ಪೇಸ್ವಾಮಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಉಪನ್ಯಾಸಕರಾದ ತಿಮ್ಮಪ್ಪ, ಗಾದಯ್ಯ, ವೆಂಕಟೇಶ್, ಕೃಷ್ಣಮೂರ್ತಿ, ಆರತಿ ಹಾಗೂ ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *