ಮೊಳಕಾಲ್ಮೂರು: ಪಟ್ಟಣದ ಹೃದಯ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಕೆಳ ಸೇತುವೆ ಕಾಮಗಾರಿಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬೇಕೆಂದು ತಹಸೀಲ್ದಾರ್ ಎಂ.ಬಸವರಾಜ್, ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಕಾಮಗಾರಿ ಬೇಗ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬ ವರದಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಶನಿವಾರ ಸ್ಥಳ ವೀಕ್ಷಣೆ ಮಾಡಿದ ತಹಸೀಲ್ದಾರ್, ಗುತ್ತಿಗೆದಾರರು ಕಾಲ ಮಿತಿಯಲ್ಲಿ ಕೆಲಸ ಮುಗಿಸದ ಕಾರಣ ಬಸ್, ಆಟೋ, ಬೈಕ್ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಹನಗಳ ಓಡಾಟಕ್ಕೆ ಪರ್ಯಾಯ ರಸ್ತೆ ಮಾಡದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದೆ. ಶೀಘ್ರವೇ ಕಾಮಗಾರಿ ಮುಗಿಸಬೇಕೆಂದು ರೈಲ್ವೆ ಇಂಜಿನಿಯರ್ ಜಗದೀಶ್‌ಗೆ ಸೂಚಿಸಿದರು.
ಕಳೆದ ತಿಂಗಳು ಕೆಳ ಸೇತುವೆ ನಿರ್ಮಾಣ ಜಾಗದಲ್ಲಿ ಬೃಹತ್ ಕಲ್ಲನು ಬ್ಲಾಸ್ಟ್ ಮಾಡಿದ್ದರಿಂದ ಸಮೀಪದ ಬಡಾವಣೆ ಜನ ಬೆಚ್ಚಿಬಿದ್ದಿದ್ದಾರೆ. ಯಾರಿಗಾದರೂ ತೊಂದರೆ ಆದರೆ ಯಾರು ಹೊಣೆ. ಇನ್ನು ಮುಂದೆ ಯಂತ್ರ ಬಳಸಿ ಕಲ್ಲು ಕೀಳಬೇಕು. ಮದ್ದು ಬಳಸಿದರೆ ಕಾಮಗಾರಿ ಅಡ್ಡಿಪಡಿಸೇಕಾಗುತ್ತದೆ ಎಂದು ಸ್ಥಳೀಯರಾದ ಕೆ.ಶಾಂತಣ್ಣ, ಎನ್.ಐ.ಶಿವಕುಮಾರ್, ಎಸ್.ಶ್ರೀಕಾಂತ್, ವೀರೇಶ್, ರವಿಕುಮಾರ್, ಬಸಣ್ಣ, ವಿನಯ್ ಕುಮಾರ್ ಎಚ್ಚರಿಸಿದರು.
ಪ್ರತಿಕ್ರಿಯಿಸಿದ ಚಿತ್ರದುರ್ಗದ ರೈಲ್ವೆ ಇಲಾಖೆ ಇಂಜಿನಿಯರ್ ಜಗದೀಶ್, ತಮ್ಮ ಅಹವಾಲನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಮೂಲಕ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.