ಬರದ ನಾಡಿಗೆ ಬರಲಿಲ್ಲ ತುಂಗಭದ್ರೆ

ಮೊಳಕಾಲ್ಮೂರು: ಸತತ ಬರಗಾಲ ಹಾಗೂ ನೀರಿನ ಅಭಾವದಿಂದ ನಲುಗಿರುವ ತಾಲೂಕಿಗೆ ತುಂಗಭದ್ರ ಹಿನ್ನೀರು ಯೋಜನೆ ಮಂಜೂರಾಗಿ ಎರಡು ವರ್ಷವಾದರೂ ಅಧಿಕಾರಿಗಳ ಮಂದಗತಿ ಅನುಷ್ಠಾನ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಬಯಲು ಸೀಮೆ ಜನರ ಬಹು ದಿನಗಳ ಕನಸಾಗಿರುವ ಯೋಜನೆಯಿಂದ ಮೊಳಕಾಲ್ಮೂರು, ಚಳ್ಳಕೆರೆ, ಪಾವಗಡ ತಾಲೂಕುಗಳಿಗೆ ಕುಡಿವ ನೀರಿನ ಶಾಶ್ವತ ಸೌಲಭ್ಯ ದೊರೆಯಲಿದೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ 2,162 ಕೋಟಿ ರೂ. ಮೀಸಲಿಟ್ಟು ಸದನ ಸರ್ವಾನುಮತದ ಒಪ್ಪಿಗೆ ಪಡೆದು 2 ವರ್ಷವಾಗಿದೆ. ಮೈತ್ರಿ ಸರ್ಕಾರದಲ್ಲೂ ಗ್ರೀನ್ ಸಿಗ್ನಲ್ ದೊರೆತಿದ್ದು, 2018ರ ಡಿಸೆಂಬರ್‌ನಲ್ಲಿ ಕಾಮಗಾರಿ ಆದೇಶ ನೀಡಲಾಗಿದ್ದು, ಹೈದರಾಬಾದ್ ಮೆಗಾ ಇಂಜಿನಿಯರಿಂಗ್ ಕಂಪನಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಸಂಡೂರಿನ ಕಕ್ಕುಪ್ಪಿಯಿಂದ ಆರಂಭವಾಗುವ ಈ ಯೋಜನೆಗೆ ಪೂರ್ಣಗೊಳ್ಳಲು ಮೂರು ವರ್ಷ ಅವಧಿ ನಿಗದಿಪಡಿಸಲಾಗಿದೆ. ಕಾಮಗಾರಿ ನಂತರ 5 ವರ್ಷಗಳ ಕಂಪನಿಯೇ ನಿರ್ವಹಣೆ ಮಾಡುವ ಷರತ್ತು ವಿಧಿಸಿಲಾಗಿದೆ. ಪ್ರತಿ ಹಳ್ಳಿಗೆ ನೀರು ಹರಿಸಲು, ಕಂಪನಿಯ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ, ಓವರ್ ಟ್ಯಾಂಕ್. ಪೈಪ್‌ಲೈನ್, ವಿದ್ಯುತ್ ಸಂಪರ್ಕದ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.

ಯೋಜನೆ 180 ಎಂಎಲ್‌ಡಿ ನೀರು ಸರಬರಾಜು ಮಾಡುವ ಗುರಿ ಹೊಂದಿದ್ದು, 2021ರ ಅಂತ್ಯದ ವೇಳೆಗೆ ಮೊಳಕಾಲ್ಮೂರಿನ 146, ಚೆಳ್ಳಕೆರೆ 371, ಪಾವಗಡ 374 ಗ್ರಾಮಗಳಿಗೆ ಕುಡಿವ ನೀರು ದೊರೆಯಲಿದೆ. ಕುಡಿವ ನೀರು ಇಲಾಖೆ ಇಂಜಿನಿಯರ್ ಕಿರಣ್‌ನಾಯಕ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *