ಮೊಳಕಾಲ್ಮೂರು: ಬರಕ್ಕೆ ಸಿಲುಕಿರುವ ಜನರಿಗೆ ಜೀವನ ನಡೆಸುವುದು ದೊಡ್ಡ ಸವಾಲಾಗಿದ್ದು, ಜನರ ಕಷ್ಟ ದೂರ ಮಾಡಲು ಜಿಲ್ಲಾಡಳಿತ ಶಾಶ್ವತ ಯೋಜನೆ ಜಾರಿಗೊಳಿಸಬೇಕು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ವತಿಯಿಂದ ಗುರುಭವನದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಬಯಲು ಸೀಮೆ ಜನರ ಕಷ್ಟವನ್ನು ಹತ್ತಿರದಿಂದ ಕಂಡಿದ್ದೇನೆ. ನೊಂದವರ ಕಣ್ಣೀರು ಒರೆಸುವಂತ ಜನ ಕಲ್ಯಾಣ ಕಾರ್ಯಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಜಿ.ಕೊಟ್ರೇಶ್ ಮಾತನಾಡಿ, ಸಾಮಾಜಿಕ ನ್ಯಾಯದಡಿ ನೀಡಿರುವ ಸೌಲಭ್ಯಗಳನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಓಬವ್ವ ಮಹಿಳಾ ಪೋಲೀಸ್ ಪಡೆಯ ಪಿ.ಆರ್.ಜ್ಯೋತಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ತಡೆಗಾಗಿ ಓಬವ್ವ ಪಡೆ ಟೊಂಕ ಕಟ್ಟಿ ಕೆಲಸ ಮಾಡುತ್ತಿದೆ. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು.
ನ್ಯಾಯಾಧೀಶ ಎಸ್.ಆರ್.ದಿಂಡಲಕೊಪ್ಪ, ಶ್ರೀಶೈಲ ಭೀಮಸೇನ ಬಾಗಡಿ, ಎಸ್.ಕೆ.ಜನಾರ್ದನ, ಮುನಿರತ್ನಂ, ವಕೀಲರ ಸಂಘದ ಅಧ್ಯಕ್ಷ ಎಚ್.ಚಂದ್ರಣ್ಣ, ಇಒ ಡಾ.ಶ್ರೀಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಎಸ್.ರಾಜನಾಯಕ್, ಸರ್ಕಾರಿ ಅಭಿಯೋಜಕ ಲಿಂಗೇಶ್ವರ, ನಾಗರಾಜ ನಾಯಕ, ಟಿ.ಗುರುಮೂರ್ತಿ, ಟಿಎಚ್ಒ ಡಾ.ತುಳಸಿ ರಂಗನಾಥ್ ಇತರರಿದ್ದರು.