ಮಾನವನ ಊರುಗೋಲಾಗಿವೆ ವಾಹನಗಳು: ನ್ಯಾಯಾಧೀಶ ದೇವೇಂದ್ರ ಪಂಡಿತ್ ಅಭಿಮತ

ಮೊಳಕಾಲ್ಮೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯರ ದೈನಂದಿನ ಜೀವನಕ್ಕೆ ವಾಹನಗಳು ಊರುಗೋಲಾಗಿದ್ದು, ವಾಹನ ಚಾಲಕರು ಸುರಕ್ಷತಾ ನಿಯಮ ಪಾಲಿಸುವುದು ಕಡ್ಡಾಯ ಎಂದು ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಕಾರ್ಮಿಕ ಸಂಘಟನೆಯಿಂದ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಅಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಸಂಖ್ಯೆ ಮತ್ತು ವಾಹನ ಸಂಖ್ಯೆ ಏರುಮುಖದಲ್ಲಿದೆ. ರಸ್ತೆ ಸುರಕ್ಷತಾ ನಿಯಮಾವಳಿಗಳ ತಿಳಿವಳಿಕೆ, ನಿರ್ಲಕ್ಷೃದಿಂದ ನಿತ್ಯ ಅಪಘಾತ ಸಂಭವಿಸುತ್ತವೆ ಎಂದರು.

ಪ್ರಭಾರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಮಾತನಾಡಿ, ಮಾನವನ ದುರಾಸೆಯಿಂದ ಪ್ರಕೃತಿ ಸಂಪತ್ತು ನಾಶವಾಗುತ್ತಿದ್ದು, ಮಳೆ ಕಡಿಮೆ ಆಗಿದೆ. ಹನಿ ನೀರಿಗೆ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಪರಿಸರ ರಕ್ಷಿಸಿದರೆ ಮಾತ್ರ ಜೀವಸಂಕುಲ ಉಳಿವು ಸಾಧ್ಯ ಎಂದು ತಿಳಿಸಿದರು.

ಸಿಪಿಐ ಮಂಜುನಾಥ ಗೌಡ ಮಾತನಾಡಿ, ನಿತ್ಯ ಘಟಿಸುವ ವಾಹನ ಅಪಘಾತ ನೆನಪಿಸಿಕೊಂಡರೆ ಮನಸ್ಸು ಭಾರವಾಗುತ್ತದೆ. ಚಾಲನೆ ಅನುಭವ ಇಲ್ಲದ ಬೈಕ್, ಕಾರು ಚಲಾಯಿಸುವ ಯುವಕರೆ ಅಪಘಾತಕ್ಕೀಡಾಗುತ್ತಿರುವುದು ಅತಂಕದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಪಿ.ಪಾಪಯ್ಯ, ಕಾರ್ಯದರ್ಶಿ ಮಂಜುನಾಥ, ಕಾರ್ಮಿಕ ನಿರೀಕ್ಷಕ ಶೇಕ್ ಶಫೀಉಲ್ಲಾ, ಸಿಪಿಐ ಪಕ್ಷದ ಕಾರ್ಯದರ್ಶಿ ಜಾಫರ್, ವಕೀಲರಾದ ಪಿ.ಜಿ.ವಸಂತಕುಮಾರ್, ಅನಂತಮೂರ್ತಿ, ಎಂ.ಎನ್.ವಿಜಯಲಕ್ಷ್ಮೀ ಇತರರಿದ್ದರು.

Leave a Reply

Your email address will not be published. Required fields are marked *