ಮೂಲೆ ಸೇರಿವೆ ವಾಹನಗಳು

ಮೊಳಕಾಲ್ಮೂರು: ಪಟ್ಟಣದ ಸಂಪೂರ್ಣ ನೈರ್ಮಲ್ಯ, ಸಮರ್ಪಕ ನಿರ್ವಹಣೆಗಾಗಿ ಖರೀದಿಸಿದ್ದ ಜೆಸಿಬಿ ಯಂತ್ರ ಬಳಕೆಯಾಗದೆ ಪಪಂ ಆವರಣದ ಶೆಡ್‌ನಲ್ಲಿ ಕೆಲಸವಿಲ್ಲದೇ ಕೊಳೆಯುತ್ತಿದೆ.

ರಸ್ತೆ, ಚರಂಡಿ, ಕುಡಿವ ನೀರಿನ ಪೈಪ್‌ಲೈನ್ ಸೇರಿ ಹಲವು ತುರ್ತು ಕಾರ್ಯಗಳಿಗೆ ಅನುಕೂಲವಾಗಲು ಹಾಗೂ ಪೌರಾಡಳಿತದ ಆರ್ಥಿಕ ಹೊರೆ ಕಡಿತಗೊಳಿಸಲು 2015-16ರಲ್ಲಿ ಬಿಆರ್‌ಜಿಎಫ್ ಯೋಜನೆಯಡಿ ಜಿಲ್ಲಾಡಳಿತ ಜೆಸಿಬಿ ವಿತರಿಸಿತ್ತು.

ತಾಲೂಕಿನ ಅನ್ಯ ಕಾರ್ಯಗಳಿಗೂ ಸದುಪಯೋಗ ಮಾಡಿಕೊಳ್ಳಬಹುದು ಎಂಬ ಚಿಂತನೆಗಳಿದ್ದವು. ಆದರೆ, ಪಪಂ ಆಡಳಿತ ನಿರ್ಲಕ್ಷೃದಿಂದ ಅದು ಬಳಕೆಯಾಗುತ್ತಿಲ್ಲ. ಅಧಿಕಾರಿಗಳ ಬೇಜಾಬ್ದಾರಿತನಕ್ಕೆ ಯಂತ್ರ ಬಳಕೆಯಾಗದೇ ನಾಲ್ಕೈದು ತಿಂಗಳಿಂದ ಒಂದೆಡೆ ನಿಂತಿರುವುದು, ಸರ್ಕಾರಿ ಅನುದಾನ ವ್ಯರ್ಥವಾಗುತ್ತಿರುವುದಕ್ಕೆ ಸಾಕ್ಷಿ ಎಂಬುದು ಸಾರ್ವಜನಿಕರು ದೂರು.

ಕಸ ಸಂಗ್ರಹಣೆಗೆ ಖರೀದಿಸಿದ್ದ ಎರಡು ವಾಹನಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಪೌರಾಡಳಿತಕ್ಕೆ ಸ್ವಂತ ಜೆಸಿಬಿ ಇದ್ದರೂ, ಬಾಡಿಗೆ ಆಧಾರದಲ್ಲಿ ಖಾಸಗಿಯವರಿಂದ ಯಂತ್ರ ಪಡೆದು ಬಳಸಿಕೊಂಡಿರುವುದು ಹಲವು ಅನುಮಾನ ಮೂಡಿಸಿದೆ.

ಈ ಬಗ್ಗೆ ಪಪಂ ಮುಖ್ಯಾಧಿಕಾರಿ ಅವರನ್ನು ವಿಚಾರಿಸಿದರೆ, ಜೆಸಿಬಿ ಎಂಜಿನ್ ಸರಿಯಿಲ್ಲ. ಚಾಲಕರ ನೇಮಕಾತಿ ಆಗಿಲ್ಲ ಎಂಬ ಸಬೂಬು ನೀಡುತ್ತಾರೆ.

ಸರ್ಕಾರಿ ಅನುದಾನದಲ್ಲಿ ಖರೀದಿಸಿದ ವಾಹನಗಳನ್ನು ಸದ್ಬಳಕೆ ಮಾಡಿಕೊಂಡು ನಗರ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಅಧಿಕಾರಿಗಳು ಸಹಕರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.

ಪಟ್ಟಣದ ವಿವಿಧ ಬಡಾವಣೆಗಳ ರಸ್ತೆ ಮತ್ತು ಚರಂಡಿ ಅಕ್ಕಪಕ್ಕದಲ್ಲಿ ಗಿಡ ತೆರವುಗೊಳಿಸಲು ಹಾಗೂ ಕುಡಿವ ನೀರು ಪೈಪ್‌ಲೈನ್ ಕಾಮಗಾರಿಗೆ ಮೂರು ವರ್ಷಗಳಿಂದ ಬಾಡಿಗೆ ಆಧಾರದಲ್ಲಿ ಜೆಸಿಬಿ ಯಂತ್ರ ಬಳಸಿಕೊಂಡಿದ್ದಾರೆ. ಬಾಕಿ 3.5 ಲಕ್ಷ ರೂ. ಈವರೆಗೂ ಪಾವತಿಸದೇ ಸತಾಯಿಸುತ್ತಿದ್ದಾರೆ ಎಂದು ಜೆಸಿಬಿ ಮಾಲೀಕ ಮಲ್ಲಿಕಾರ್ಜುನ ತಿಳಿಸಿದರು.

Leave a Reply

Your email address will not be published. Required fields are marked *